ಬೆಂಗಳೂರು : ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಟ್ಟರೆ ರಾಜ್ಯದಲ್ಲಿ ಗಲಭೆ ಉಂಟಾಗುವ ಸಾಧ್ಯತೆ ಇದೆ ಎಂದು ಮಾಜಿ ಸ್ಪೀಕರ್ ಕೆ.ಜಿ.ಭೋಪಯ್ಯ ಎಚ್ಚರಿಸಿದ್ದಾರೆ.
ನಗರದ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇದ್ದಾಗ ಹಜ್ ಯಾತ್ರಿಕರಿಗೆ ಅನುಕೂಲ ಆಗಲಿ ಎಂದು ಹಣ ಕೊಡಲಾಗಿತ್ತೇ ಹೊರತು ಟಿಪ್ಪು ಹೆಸರು ಇಡಲು ಅಲ್ಲ. ಹಾಗಾಗಿ ಟಿಪ್ಪು ಹೆಸರನ್ನು ಹಜ್ ಭವನಕ್ಕೆ ಇದುವ ಅಗತ್ಯವಿಲ್ಲ ಎಂದು ಭೋಪಯ್ಯ ಹೇಳಿದ್ದಾರೆ.
ಟಿಪ್ಪು ಸುಲ್ತಾನ್ ಹಿಂದೂ ದೇವಾಲಯಗಳನ್ನು ನಾಶ ಮಾಡಿದ್ದಾನೆ. ಅಲ್ಲದೆ, ಕೊಡಗು ಜಿಲ್ಲೆಯಲ್ಲಿ ಸುಮಾರು 300ಕ್ಕೂ ಹೆಚ್ಚು ದೇವಸ್ಥಾನ ಹಾಳುಮಾಡಿ, 80 ಸಾವಿರಕ್ಕೂ ಅಧಿಕ ಜನರನ್ನು ಹತ್ಯೆ ಮಾಡಿದ್ದಾನೆ. ಹಾಗಾಗಿ ಹಜ್ ಭವನಕ್ಕೆ ಟಿಪ್ಪು ಹೆಸರು ಇಡಲು ಸರ್ಕಾರ ನಿರ್ಧರಿಸಿದರೆ ಕೊಡಗು ಜಿಲ್ಲೆಯಲ್ಲಿ ತೀವ್ರ ಹೋರಾಟ ಮಾಡುವುದಾಗಿ ಕೆ.ಜಿ.ಭೋಪಯ್ಯ ಎಚ್ಚರಿಸಿದ್ದಾರೆ.