ಪ್ರವಾಹ ನಷ್ಟ ಸಮೀಕ್ಷೆಗೆ ಶೀಘ್ರದಲ್ಲೇ ರಾಜ್ಯಕ್ಕೆ ಕೇಂದ್ರ ನಿಯೋಗ ಭೇಟಿ: ಸಿಎಂ

ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ಅನಾಹುತಗಳ ಬಗ್ಗೆ ಕೇಂದ್ರ ಗೃಹ ಸಚಿವರನ್ನು ಇಂದು ಭೇಟಿಯಾದ ಸಿಎಂ ಕುಮಾರಸ್ವಾಮಿ ಅವರು, ನೆರವು ನೀಡುವಂತೆ ಮನವಿ ಸಲ್ಲಿಸಿದ್ದಾರೆ.

Last Updated : Aug 30, 2018, 06:42 PM IST
ಪ್ರವಾಹ ನಷ್ಟ ಸಮೀಕ್ಷೆಗೆ ಶೀಘ್ರದಲ್ಲೇ ರಾಜ್ಯಕ್ಕೆ ಕೇಂದ್ರ ನಿಯೋಗ ಭೇಟಿ: ಸಿಎಂ  title=

ನವದೆಹಲಿ: ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ನಷ್ಟ ಪರಿಶೀಲನೆಗೆ ಶಿಘ್ರದಲ್ಲೀ ರಾಜ್ಯಕ್ಕೆ ಕೇಂದ್ರದ ನಿಯೋಗ ಭೇಟಿ ನೀಡಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕೊಡಗು ಪ್ರವಾಹ ಪರಿಹಾರದ ಬಗ್ಗೆ ಇಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ಅನಾಹುತಗಳ ಬಗ್ಗೆ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ನೆರವು ನೀಡಲು ಮನವಿ ಸಲ್ಲಿಕೆ ಮಾಡಿದ್ದು, 3 ಸಾವಿರ ಕೋಟಿ ರೂ.ಗಳಿಗೂ ಅಧಿಕ ನಷ್ಟವಾಗಿದ್ದು, ಹೆಚ್ಚು ಪರಿಹಾರಕ್ಕೆ ಮನವಿ ಮಾಡಲಾಗಿದೆ. ಇದಕ್ಕೆ ಸ್ಪಂದಿಸಿದ ಗೃಹ ಸಚಿವರು ಶೀಘ್ರದಲ್ಲೇ ಪರಿಹಾರ ಘೋಷಿಸುವುದಾಗಿ ಭರವಸೆ ನೀಡಿದ್ದು, ರಾಜ್ಯಕ್ಕೆ ಕೇಂದ್ರದ ನಿಯೋಗವನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ಕರಾವಳಿ ಭದ್ರತೆ ಪೊಲಿಸ್ ಆಧುನಿಕರಣಕ್ಕೆ ಮನವಿ
ಕರ್ನಾಟಕ ರಾಜ್ಯಕ್ಕೆ ಕೇಂದ್ರ ಗೃಹ ಇಲಾಖೆಯಿಂದ ಬರಬೇಕಿದ್ದ ಅನುದಾನಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಜತೆಗೆ, ಕರಾವಳಿ ಭದ್ರತೆ ಪೊಲಿಸ್ ಆಧುನಿಕರಣಕ್ಕೆ ಬೇಕಾದ ಅನುದಾನ ಬಗ್ಗೆಯೂ ಮನವಿ ಮಾಡಲಾಗಿದ್ದು, ಕೊಡಗು ಪರಿಸ್ಥಿತಿಯ ಮಾಹಿತಿಯನ್ನು ರಾಷ್ಟ್ರಪತಿ ಅವರಿಗೂ ನೀಡಿದ್ದೇನೆ. ಹೀಗಾಗಿ ಕೇಂದ್ರದಿಂದ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದ್ದೇವೆ ಎಂದು ಸಿಎಂ ತಿಳಿಸಿದರು. 

ಪ್ರವಾಹದಿಂದ 2 ಸಾವಿರ ಕಿ.ಮೀ. ರಸ್ತೆ ನಾಶ: ಆರ್.ವಿ.ದೇಶಪಾಂಡೆ
ಇದೇ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ರಾಜ್ಯದಲ್ಲಿ ಉಂಟಾದ ಪ್ರವಾಹದಿಂದಾಗಿ ಎರಡು ಸಾವಿರ ಕಿ.ಮೀ ಗ್ರಾಮಾಂತರ ರಸ್ತೆಗಳು ಹಾಳಾಗಿವೆ. ಈಗಾಗಲೇ ಕೇಂದ್ರ ಸರ್ಕಾರದಿಂದ ಪ್ರವಾಹ ಪರಿಹಾರ ಕಾರ್ಯಗಳಿಗೆ ಸಹಕಾರ ದೊರೆಯುತ್ತಿದೆ. ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ. ಅಲ್ಲದೆ, ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಮೂಲಕ ಪರಿಹಾರ ಕಾರ್ಯಗಳಿಗೆ ಹಣವನ್ನೂ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಕೆಲವೆಡೆ ಅತಿವೃಷ್ಟಿಯಾದರೆ, ಮತ್ತೆ ಕೆಲ ಜಿಲ್ಲೆಗಳಲ್ಲಿ ಬರಗಾಲ ಉಂಟಾಗಿದೆ. ಬರಗಾಲ ಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಮತ್ತೊಂದು ಮನವಿ ಸಲ್ಲಿಸಲಿದ್ದು, ರಾಜ್ಯದ ಅಧಿಕಾರಗಳ ಸಭೆ ಕರೆದು ಬರಗಾಲ ಪ್ರದೇಶ ಆಯ್ಕೆ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು. 

ಉಡುಪಿಯಲ್ಲಿ ಮರೀನ್ ಟ್ರೈನಿಂಗ್ ಸ್ಕೂಲ್ ಪ್ರಾರಂಭಿಸಲು ಮನವಿ: ಜಿ.ಪರಮೇಶ್ವರ್
ಕರಾವಳಿ ಭಾಗದಲ್ಲಿ ರಕ್ಷಣಾ ತಂಡಗಳಿಗೆ ಅಗತ್ಯ ವಸ್ತುಗಳ ಖರೀದಿಗಾಗಿ 84 ಕೋಟಿ ರೂ. ಅನುದಾನದ ಅಗತ್ಯವಿದ್ದು, ಈ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದರು.

ಈಗಾಗಲೇ 13 ಕೆಎಸ್ಆರ್ ಪಿ 2 ರಿರ್ಸವ್ ಬೆಟಾಲಿಯನ್ ಇದ್ದು, ಇನ್ನೂ ಎರಡು ರಿಸರ್ವ ಬೆಟಾಲಿಯನ್ ನೀಡಲು ಮನವಿ ಮಾಡಲಾಗಿದೆ. ತುಮಕೂರು ಮತ್ತು ದಾವಣಗೆರೆಗೆ ಒಂದೊಂದು ರಿವರ್ಸ್ ಬೆಟಾಲಿಯನ್, ಉಡುಪಿಯಲ್ಲಿ ಮರೇನ್ ಟ್ರೈನಿಂಗ್ ಸ್ಕೂಲ್ ಆರಂಭಕ್ಕೆ, ಹೆಚ್ಚುವರಿ ಪೋಲಿಸ್ ನೇಮಕಾತಿಗೆ ಮನವಿ ಮಾಡಲಾಗಿದ್ದು, ಪೋಲಿಸ್ ಇಲಾಖೆ ಆಧುನೀಕರಣಕ್ಕೂ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ ಎಂದರು. ಸಿಐಜಿಯಲ್ಲಿ ವರದಿ ಪ್ರಕಾರ, ನಮ್ಮಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಅವುಗಳ ಉನ್ನತೀಕರಣಕ್ಕೆ ಅನುದಾನದ ಬೇಡಿಕೆ ಇಟ್ಟಿದ್ದೇವೆ ಎಂದು ಪರಮೇಶ್ವರ್ ಹೇಳಿದ್ದಾರೆ. 
 

Trending News