ಮೈಸೂರು: ಯುವ ಜನತೆ ನಮ್ಮ ಮಾತೃ ಭೂಮಿಯನ್ನು ಪ್ರೀತಿಸಬೇಕು. ಎಂದಿಗೂ ನಮ್ಮ ಮಾತೃ ಭಾಷೆ, ಮಾತೃಭೂಮಿಯನ್ನು ಮರೆಯಬಾರದು. ನಮ್ಮ ಮಾತೃ ಭಾಷೆ ಕಣ್ಣಿದ್ದಂತೆ, ಇತರ ಭಾಷೆ ಕನ್ನಡಕವಿದ್ದಂತೆ. ಕಣ್ಣು ಬಹಳ ಮುಖ್ಯವಾದುದ್ದು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.
ಮೈಸೂರಿನ ಸುತ್ತೂರು ಮಠದಲ್ಲಿ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 103ನೇ ಜಯಂತಿ ಮಹೋತ್ಸವ ಮತ್ತು ಚನ್ನವೀರ ಗುರುಕುಲದ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡದಲ್ಲೇ ಭಾಷಣ ಆರಂಭಿಸಿ ಕರ್ನಾಟಕಕ್ಕೂ ನನಗೂ ನಾಲ್ಕು ದಶಕಗಳ ಸಂಬಂಧವಿದೆ. ಕರ್ನಾಟಕದ ಜನತೆಯ ಪ್ರೀತಿ ವಿಶ್ವಾಸ ನನ್ನ ಹೃದಯದಲ್ಲಿದೆ ಎಂದರು.
ಯಾರೊಬ್ಬರೂ ಸಹ ತಮ್ಮ ಮಾತೃಭೂಮಿಯನ್ನು ಮರೆಯಬಾರದು. ತಾವು ಹುಟ್ಟಿಬೆಳೆದ ಸ್ಥಳವನ್ನು ಬಿಡಬಾರದು ಎನ್ನುತ್ತಾ ಹೆಚ್.ಡಿ. ದೇವೇಗೌಡರು ಪ್ರಧಾನಿಯಾಗಿ ದೆಹಲಿಗೆ ಬಂದರೂ ಹಾಸನವನ್ನು ಮಾತ್ರ ಬಿಡಲಿಲ್ಲ ಎಂದು ಅವರನ್ನು ಶ್ಲಾಘಿಸಿದರು.
ಕನ್ನಡ ಒಂದು ಸುಂದರ ಭಾಷೆ. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಕನ್ನಡ ಭಾಷೆಯನ್ನು ಕೊಂಡಾಡಿದ ವೆಂಕಯ್ಯ ನಾಯ್ಡು, ಮನೆಯಲ್ಲಿ ಕನ್ನಡ ಮಾತನಾಡಲು ಉತ್ತೇಜಿಸಬೇಕು ಎಂದು ಸಲಹೆ ನೀಡಿದರು.