ಬೆಂಗಳೂರು: ಆಂತರಿಕವಾಗಿ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ, ಕೆಲ ಗೊಂದಲವಿದ್ದರೂ ಸರ್ಕಾರ ಬೀಳುವ ಮಟ್ಟಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.
ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದ ಅವರು, ಬಳಿಕ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ, ಆಂತರಿಕವಾಗಿ ಪಕ್ಷದಲ್ಲಿ ಅಸಮಾಧಾನವೇನಿಲ್ಲ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅವರು ಹೇಳಿದ್ದಾರೆ. ಹೊಗೆ ಆಡಿದ ತಕ್ಷಣವೇ ದೊಡ್ಡ ಅನಾಹುತ ಅಂದರೆ ಹೇಗೆ? ತಾವೆಲ್ಲ ತಿಳಿದಿರುವಷ್ಟು ಗಂಭೀರವಾಗಿಲ್ಲ. ಸರ್ಕಾರ ಸುಭದ್ರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿಯಿಂದ ಕೈ ಶಾಸಕರಿಗೆ ಲಂಚದ ಅಮಿಷ ವಿಚಾರವಾಗಿ ಎಸಿಬಿಗೆ ದೂರು ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ ಪರಂ ಮಾಧ್ಯಮಗಳಲ್ಲೂ ಈ ಸುದ್ಧಿ ಬರುತ್ತಿದೆ. ಅದರ ಆಧಾರದ ಮೇಲೆಯೇ ದೂರು ನೀಡಲು ತೀರ್ಮಾನ ಮಾಡಲಾಗಿದೆ ಎಂದರು.
ಸಿಹಿ ಸಿಕ್ಕದ್ದರೆ ತಿಂದುಕೊಳ್ಳಲಿ ಬಿಡಿ:
ಬಿಜೆಪಿ ನಾಯಕರಿಗೆ ಇಷ್ಟರಲ್ಲೇ ಸಿಹಿ ಸುದ್ದಿ ಎಂಬ ಬಿಎಸ್ ವೈ ಹೇಳಿಕೆಗೆ ಪ್ರಯಿಕ್ರಿಯಿಸಿದ ಅವರು, ಸಿಹಿ ಸಿಕ್ಕದ್ದರೆ ತಿಂದುಕೊಳ್ಳಲಿ ಬಿಡಿ ಎಂದು ವ್ಯಂಗ್ಯವಾಡಿದರು.
ಬೆಳಗಾವಿ ರಾಜಕಾರಣ ಆಂತರಿಕವಾದದ್ದು. ಡಿ.ಕೆ. ಶಿವಕುಮಾರ್ ಅವರು ನೀರಾವರಿ ಸಚಿವರಾಗಿರುವುದರಿಂದ ರಾಜ್ಯದ ಎಲ್ಲ ಭಾಗಗಳಿಗೆ ಭೇಟಿ ಕೊಡುತ್ತಾರೆ. ಇದನ್ನೇ ಹಸ್ತಕ್ಷೇಪ ಎಂದರೆ ಹೇಗೆ ಎಂದು ಪರಮೇಶ್ವರ್ ಪ್ರಶ್ನಿಸಿದರು.
ಪಕ್ಷದ ಕಚೇರಿ ನಿರ್ಮಾಣವನ್ನೂ ಡಿ.ಕೆ. ಶಿವಕುಮಾರ್ ಅವರಿಗೆ ಒಪ್ಪಿಸಿದ್ದೇವೆ. ಹೀಗಾಗಿ ಬೆಳಗಾವಿಗೆ ಹೋಗಿಬಂದಿದ್ದರು ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಬಂದ ನಂತರ ಸಚಿವ ಸಂಪುಟ ವಿಸ್ತರಣೆ:
ಸಚಿವ ಸಂಪುಟ ವಿಸ್ತರಣೆ ವಿಚಾರ ಚರ್ಚೆಯಲ್ಲಿದೆ. ಯಾರನ್ನು ಮಂತ್ರಿ ಮಾಡಬೇಕು, ಯಾವ ಸಮುದಾಯಕ್ಕೆ ಕೊಡಬೇಕು ಎಂಬ ಚರ್ಚೆ ನಡೆದಿದೆ. ಸಿದ್ದರಾಮಯ್ಯ ಅವರು ಬಂದ ಕೂಡಲೇ ಮಾಡಲಾಗುವುದು ಎಂದರು.