ಮೈಸೂರು: ಹೆಚ್.ಡಿ.ಕೋಟೆ ಕ್ಷೇತ್ರದ ಜೆಡಿಎಸ್ 68 ವರ್ಷದ ಶಾಸಕ ಚಿಕ್ಕಮಾದು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ಕ್ಷೇತ್ರದ ಜೆಡಿಎಸ್ ಶಾಸಕ ಚಿಕ್ಕಮಾದು ಕಳೆದ ಒಂದು ವರ್ಷದಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಈಗ ಮೂರು ದಿನಗಳಿಂದ ಅರವಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಕಳೆದ ಮಧ್ಯರಾತ್ರಿ ಸರಿಸುಮಾರು 2 ಗಂಟೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಚಿಕ್ಕಮಾದು ಹಿರಿಯ ಪತ್ನಿ ಜಯಮ್ಮ ಮತ್ತು ಕಿರಿಯ ಪತ್ನಿ ನಾಗಮ್ಮ. ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದಾರೆ. ಕೆ.ಆರ್. ನಗರ ತಾ, ಹೊಸೂರು ಕಲ್ಲಹಳ್ಳಿ ಚಿಕ್ಕಮಾದು ಅವರ ಹುಟ್ಟೂರು. ಹುಣಸೂರು ತಾಲ್ಲೂಕಿನ ಹೊಸ ರಾಮೇನಹಳ್ಳಿಯಲ್ಲಿ ಹಲವು ವರ್ಷಗಳ ಕಾಲ ವಾಸವಿದ್ದ ಚಿಕ್ಕಮಾದು.
ಇದಾದ ಬಳಿಕ ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ಪ್ರಸ್ತುತ ವಾಸವಿದ್ದರು.
1978 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ್ದ ಚಿಕ್ಕಮಾದು, ದೇವರಾಜು ಅರಸು ನೇತೃತ್ವದಲ್ಲಿ ಬಿಳಿಕೆರೆ ಕ್ಷೇತ್ರದ ಜಿ.ಪಂ ಸದಸ್ಯರಾಗಿದ್ದರು. ತದನಂತರ 1991ರಲ್ಲಿ ಕಾಂಗ್ರೆಸ್ ನಿಂದ ಹುಣಸೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 2007-08 ರಲ್ಲಿ ಜೆಡಿಎಸ್ ನಿಂದ ಎಂಎಲ್ಸಿಯೂ ಆಗಿದ್ದ ಇವರು 2013 ರ ಚುನಾವಣೆಯಲ್ಲಿ ಹೆಚ್.ಡಿ.ಕೋಟೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ಚಿಕ್ಕಮಾದು ಅವರ ಅಂತಿಮ ದರ್ಶನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಿಗ್ಗೆ 11 ಗಂಟೆಗೆ ಹೆಲಿಕಾಫ್ಟರ್ ಮೂಲಕ ಮೈಸೂರಿಗೆ ತೆರಳಲಿದ್ದಾರೆ.