ಬೆಂಗಳೂರು: ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ, ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಗಿಯಾಗಿ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.
ಪ್ರಗತಿಪರ ರೈತರಾದ ಓಂಕಾರಮೂರ್ತಿ ಅವರಿಗೆ ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಮತ್ತು ಶಾರದಮ್ಮ ಎಂಬುವರಿಗೆ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿಗಳು. ಇದೇ ವೇಳೆ ಡಾ.ಆರ್ ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ ಮಂಜುನಾಥ್ ಅವರಿಗೆ, ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ ಡಾ.ಬಿ.ಹನುಮಂತೇಗೌಡ, ಡಾ.ಎಂ.ಹೆಚ್.ಮರಿಗೌಡ, ಡಾ.ಎ.ಟಿ.ಸದಾಶಿವ ಎಂಬುವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರಧಾನ ಮಾಡಿದರು.
ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಆಯೋಜಿಸಿದ್ದ ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ @siddaramaiah ಅವರು ಭಾಗವಹಿಸಿ, ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿರುವ ರೈತರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. pic.twitter.com/K9EmrGJJVW
— CM of Karnataka (@CMofKarnataka) November 19, 2017
ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಮುಖ್ಯಮಂತ್ರಿಯವರು, ಮೆಕ್ಕೆ ಜೋಳ ಮತ್ತಿತರ ಧಾನ್ಯಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಕೋರಿ ಕೃಷಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಆಹಾರ ಸಚಿವ ಖಾದರ್ ಅವರು ದೆಹಲಿಗೆ ಹೋಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ, ಈ ವಿಚಾರದಲ್ಲಿ ಕೇಂದ್ರ ಅಸಹಕಾರ ತೋರಿದೆ. ಇದು ರೈತರ ವಿಚಾರದಲ್ಲಿ ಆಗಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಮೈಸೂರು, ಮಂಡ್ಯ, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ರಾಗಿಯೇ ಬೆಳೆದಿರಲಿಲ್ಲ. ಉತ್ತಮ ಮಳೆಯಾಗಿದ್ದರಿಂದ ಬೆಳೆ ಉತ್ತಮವಾಗಿ ಬೆಳೆದಿದೆ. ಬರಗಾಲ ಕಾರಣ ಕಳೆದ ವರ್ಷ ಕೃಷಿ ಮೇಳ ಮಾಡಲಿಲ್ಲ. ಆಗಸ್ಟ್ ,ಸೆಪ್ಟೆಂಬರ್, ಅಕ್ಟೋಬರ್ ಮಳೆಯಿಂದ ರೈತ ಮುಖದಲ್ಲಿ ನಗು ಬಂದಿದೆ ಎಂದು ಸಿಎಂ ಹರ್ಷವ್ಯಕ್ತಪಡಿಸಿದರು.
ರಾಜ್ಯದಲ್ಲಿ ನಿತ್ಯ 72 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಹಾಲಿಗಾಗಿ 1,200 ಕೋಟಿ ರೂ ರೈತರಿಗೆ ಸಬ್ಸಿಡಿ ಸಿಗುತ್ತಿದೆ. 4 ಕೋಟಿಗೂ ಅಧಿಕ ಜನರಿಗೆ ಅನ್ನ ಭಾಗ್ಯ ಯೋಜನೆಯಡಿ ಅಕ್ಕಿ ನೀಡಲಾಗುತ್ತಿದೆ. ನಮ್ಮ ಸರ್ಕಾರ ಬಂದ ಮೇಲೆ ಕೀಟನಾಶಕ, ಗೊಬ್ಬರ ಸಿಕ್ಕಿಲ್ಲ ಅಂತ ಹೋರಾಟವಾದ ನಿದರ್ಶನವೇ ಇಲ್ಲ. ರೈತರಿಗೆ ಯಾವುದೇ ಕೊರತೆ ಆಗದಂತೆ ನಾವು ನೋಡಿಕೊಂಡಿದ್ದೇವೆ. ಕೃಷಿ ಭಾಗ್ಯ ಯೋಜನೆಯಲ್ಲಿ 1.70 ಲಕ್ಷ ಕೃಷಿ ಹೊಂಡ ನಿರ್ಮಾಣ ಮಾಡಲಾಗಿದೆ. ನಮ್ಮದು ಸಹ ರೈತ ಕುಟುಂಬ. ಮೊದಲು ರಾಗಿ, ಜೋಳ ಬೆಳೆಯುತ್ತಿದ್ದೆವು. ಜಂಟಿ ಕುಟುಂಬ ವಿಭಜನೆಯಿಂದ ಕೃಷಿ ಆದಾಯ, ಹಿಡುವಳಿ ಕಡಿಮೆ ಆಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಎಲ್ಲೆಡೆಯೂ ಪ್ರತಿ ವರ್ಷ ಹಿಡುವಳಿ ಗಾತ್ರ ಕಡಿಮೆ ಆಗುತ್ತಿದೆ. ನಾನು ಚಿಕ್ಕ ಹುಡಗನಾಗಿದ್ದಾಗ ಕಡಿಮೆ ಎಂದರೆ 10 ಎಕರೆ ಜಮೀನು ಒಬ್ಬರಿಗಿತ್ತು. ಈಗ ಅರ್ಧ, ಮುಕ್ಕಾಲು, ಒಂದು ಎಕರೆ ಜಾಗ ಆಗಿ ಹಂಚಿಕೆ ಹೋಗಿದೆ. ಈ ಭೂಮಿಯಲ್ಲಿ ಸಾಲ ಮಾಡಿ ಬೆಳೆ ಬೆಳೆದರೂ ಆದಾಯ ಸಿಗೋದು ಕಷ್ಟ. ಸಣ್ಣ ರೈತರು ಲಾಭ ಗಳಿಸಲು ಏನು ಮಾಡಬೇಕು ಎಂಬ ಬಗ್ಗೆ ಸಂಶೋಧನೆ ಆಗಬೇಕು. ಯಾವುದೋ ಒಂದು ಬೆಳೆಗೆ ಹೆಚ್ಚು ಬೆಲೆ ದೊರೆತಾಗ ಎಲ್ಲರೂ ಅದೇ ಬೆಳೆ ಬೆಳೆಯೋದು ಸರಿಯೇ ? ಉತ್ಪಾದನೆ ಬೇಡಿಕೆಗಿಂತ ಹೆಚ್ಚಾದಾಗ ಬೆಲೆ ಇಳಿಯುತ್ತದೆ. ಈ ಬಗ್ಗೆ ಗಮನ ಹರಿಸಿ ಎಂದು ರೈತರಿಗೆ ಸಲಹೆ ನೀಡಿದರು.
ಈ ಮೊದಲು ತಮಗೆ ಅಗತ್ಯವಾದ ಗೊಬ್ಬರವನ್ನು ರೈತರೇ ತಯಾರು ಮಾಡಿಕೊಳ್ಳುತ್ತಿದ್ದರು. ಈಗಲೂ ಪ್ರಯತ್ನ ಮಾಡುವುದು ಒಳ್ಳೆಯದು ಎಂದು ತಿಳಿಸಿದ ಸಿಎಂ, ನಮ್ಮ ಸರ್ಕಾರ ಸೂಕ್ಷ್ಮ ನೀರಾವರಿ ಕಡೆ ಗಮನ ಹರಿಸುತ್ತಿದೆ. ನೀರು ನಿರ್ವಹಣೆ ಬಗ್ಗೆ ರೈತರು ಸಹ ಕಾಳಜಿ ವಹಿಸಬೇಕು ಎಂದು ಮುಖ್ಯಮಂತ್ರಿಯವರು ಮನವಿ ಮಾಡಿದರು.