Karnataka Budget 2021: ಬಜೆಟ್ ಕುರಿತು ಸಿದ್ದರಾಮಯ್ಯ ಹೇಳಿದ್ದೇನು?

‘ಆಪರೇಷನ್ ಕಮಲ’ ಎಂಬ ಅನೈತಿಕ ರಾಜಕೀಯದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ರಾಜ್ಯವನ್ನು ದಶಕಗಳ ಹಿಂದಕ್ಕೆ ಒಯ್ಯುವ “ಆಪರೇಷನ್ ಬರ್ಬಾದ್” ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡುತ್ತಿದೆ.ಇದಕ್ಕೆ ಕಳೆದ ಮತ್ತು ಈ ವರ್ಷದ ಎರಡು ಬಜೆಟ್‍ಗಳೇ ಸಾಕ್ಷಿ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Last Updated : Mar 9, 2021, 01:21 AM IST
  • ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 2021-22 ರಲ್ಲಿ ಜಿ.ಡಿ.ಪಿ.ಯು ಶೇ.11 ರಷ್ಟು ಬೆಳವಣಿಗೆ ಕಾಣುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ರಾಜ್ಯದ ಸ್ವಂತ ತೆರಿಗೆಗಳ ಸಂಗ್ರಹಗಳ ಗುರಿಯು 2020-21 ರ ಮೂಲ ಬಜೆಟ್‍ಗೆ ಹೋಲಿಸಿದರೆ ಶೇ.3.12 ರಷ್ಟು ಕಡಿಮೆಯಾಗಿದೆ.
Karnataka Budget 2021: ಬಜೆಟ್ ಕುರಿತು ಸಿದ್ದರಾಮಯ್ಯ ಹೇಳಿದ್ದೇನು? title=
file photo

ನವದೆಹಲಿ: ‘ಆಪರೇಷನ್ ಕಮಲ’ ಎಂಬ ಅನೈತಿಕ ರಾಜಕೀಯದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ರಾಜ್ಯವನ್ನು ದಶಕಗಳ ಹಿಂದಕ್ಕೆ ಒಯ್ಯುವ “ಆಪರೇಷನ್ ಬರ್ಬಾದ್” ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡುತ್ತಿದೆ.ಇದಕ್ಕೆ ಕಳೆದ ಮತ್ತು ಈ ವರ್ಷದ ಎರಡು ಬಜೆಟ್‍ಗಳೇ ಸಾಕ್ಷಿ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸರ್ಕಾರ ಪಾರದರ್ಶಕವಾಗಿ ಕೆಲಸ ಮಾಡಬೇಕೆನ್ನುವುದು ಸಂವಿಧಾನಬದ್ಧ ಬದ್ಧತೆ. ಆದರೆ, ಇದೊಂದು ಮುಚ್ಚುಮರೆಯ ಸರ್ಕಾರ. ಈ ಬಜೆಟ್‍ನಲ್ಲಿ ಸರ್ಕಾರ ಬಿಚ್ಚಿಟ್ಟಿದ್ದಕ್ಕಿಂತ ಮುಚ್ಚಿಟ್ಟಿದ್ದೇ ಹೆಚ್ಚು.

ಆಯವ್ಯಯವನ್ನು ಇಲಾಖಾವಾರು ನೀಡದೆ ಆರು ವಲಯಗಳಾಗಿ ವಿಂಗಡಿಸಿ ಯಾವ ಇಲಾಖೆಗೆ ಎಷ್ಟು ಅನುದಾನ ನೀಡಲಾಗಿದೆ. ಇಲಾಖೆಗಳ ಕಾರ್ಯಕ್ರಮಗಳೇನು, ಕಳೆದ ವರ್ಷದ ಸಾಧನೆಗಳೇನು, ಹೊಸ ಯೋಜನೆಗಳೇನು ಎಂಬ ವಿವರಗಳೇ ಇಲ್ಲ.

ಇದನ್ನೂ ಓದಿ: DK Shivakumar: 'ಎಸ್‌.ಎಂ.ಕೃಷ್ಣ ರೀತಿ ಪಾಂಚಜನ್ಯ ಮೊಳಗಿಸಿ ಮತ್ತೆ ಕೈ ಅಧಿಕಾರಕ್ಕೆ'

ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಬಜೆಟ್‍ಗೆ ಇದ್ದ ಮಹತ್ವ ಮತ್ತು ಪಾವಿತ್ರ್ಯವನ್ನೇ ಹಾಳು ಮಾಡಿದ್ದಾರೆ. ರಾಜ್ಯದಲ್ಲಿರುವ 33 ಇಲಾಖೆಗಳನ್ನು ಆರು ವಲಯಗಳನ್ನಾಗಿ ಮಾಡಿ ಗೊಂದಲ ಸೃಷ್ಟಿಸಲಾಗಿದೆ. ಈ ಆರೂ ವಲಯಗಳಿಗೆ ಕಳೆದ ಬಜೆಟ್‍ನಲ್ಲಿ ನಿಗದಿಪಡಿಸಲಾಗಿದ್ದ ಅನುದಾನಕ್ಕಿಂತ ಕಡಿಮೆ ಹಣ ನಿಗದಿಪಡಿಸಲಾಗಿದೆ.

ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ರೂ 1231 ಕೋಟಿ , ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ ರೂ 9943 ಕೋಟಿ, ಆರ್ಥಿಕ ಅಭಿವೃದ್ಧಿ ಪ್ರಚೋದನೆ ವಲಯಕ್ಕೆ ರೂ 3203 ಕೋಟಿ, ಬೆಂಗಳೂರು ಸಮಗ್ರ ಅಭಿವೃದ್ಧಿಗೆ ರೂ 997 ಕೋಟಿ, ಸಂಸ್ಕೃತಿ - ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲ ವಲಯಕ್ಕೆ 1907 ಕೋಟಿ ಕಡಿಮೆ ಅನುದಾನವನ್ನು ನಿಗದಿಪಡಿಸಲಾಗಿದೆ.

ಆಡಳಿತ ಸುಧಾರಣಾ ವಲಯಕ್ಕೆ ಮಾತ್ರ ರೂ.42,325 ಕೋಟಿಯಷ್ಟು ಅನುದಾವನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಈ ಹೆಚ್ಚುವರಿ ಅನುದಾನಕ್ಕೆ ಯಾವ ಹೊಸ ಯೋಜನೆಗಳನ್ನೂ ಪ್ರಕಟಮಾಡಿಲ್ಲ.

ಸಂಕಷ್ಟಗಳ ಸರಮಾಲೆಗೆ ಸಿಲುಕಿರುವ ರೈತರು ದೇಶಾದ್ಯಂತ ಬೀದಿಗಿಳಿದಿದ್ದಾರೆ. ಕೃಷಿ ವಿರೋಧಿ ಕಾಯ್ದೆಗಳ ಮೂಲಕ ರೈತರನ್ನು ದಿವಾಳಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಜೊತೆ ಸೇರಿರುವ ರಾಜ್ಯ ಸರ್ಕಾರ ತನ್ನ ಬಜೆಟ್‍ನಲ್ಲೂ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದೆ.

ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲೂ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ‘ಒಂದು ಲಕ್ಷದವರೆಗಿನ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕ್‍ಗಳಲ್ಲಿನ ಕೃಷಿ ಸಾಲವನ್ನು ಮನ್ನಾ ಮಾಡುತ್ತೇವೆ’ ಎಂದು ಭರವಸೆ ನೀಡಿತ್ತು. ಈ ಸರಕಾರ ಅಧಿಕಾರಕ್ಕೆ ಬಂದ ನಂತರ ಮಂಡಿಸಿದ ಎರಡೂ ಬಜೆಟ್‍ಗಳಲ್ಲೂ ರೈತರ ಸಾಲ ಮನ್ನಾದ ಪ್ರಸ್ತಾಪವೇ ಇಲ್ಲ.

ಇದನ್ನೂ ಓದಿ: Ramesh Jarkiholi Sex Scandal: ದೂರು ಹಿಂಪಡೆಯಲು ಮುಂದಾದ ದಿನೇಶ್ ಕಲ್ಲಹಳ್ಳಿ!

ಕೃಷಿ, ತೋಟಗಾರಿಕೆ, ಜಲಸಂಪನ್ಮೂಲ, ಸಹಕಾರ, ಮೀನುಗಾರಿಕೆ, ರೇಷ್ಮೆ ಮೊದಲಾದ ಕೃಷಿ ಸಂಬಂಧಿತ ಇಲಾಖೆಗಳಿಗೆ ಕಳೆದ ಬಜೆಟ್‍ನಲ್ಲಿ ರೂ. 32,259 ಕೋಟಿ ಅನುದಾನ ನೀಡಿದ್ದರೆ ಪ್ರಸಕ್ತ ಬಜೆಟ್‍ನಲ್ಲಿ ರೂ 31,028 ಕೋಟಿ ಅನುದಾನ ಒದಗಿಸಲಾಗಿದೆ. ಅಂದರೆ, ರೂ 1,231 ಕೋಟಿ ಅನುದಾನ ಕಡಿಮೆ ಮಾಡಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತನ್ನ ಎರಡನೇ ಬಜೆಟ್‍ನಲ್ಲಿ ಕೂಡ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿ ಹಾಗೂ ಅಲ್ಪಸಂಖ್ಯಾತ ವರ್ಗಗಳನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ.

2020-21 ನೇ ಸಾಲಿನಲ್ಲಿ ಎಸ್‍ಸಿಎಸ್‍ಪಿ/ಟಿಎಸ್‍ಪಿ ಯೋಜನೆಗೆ 26,930 ಕೋಟಿ ಅನುದಾನ ಒದಗಿಸಲಾಗಿತ್ತು. ಈ ಬಾರಿ ಬಜೆಟ್ ಗಾತ್ರ ಹೆಚ್ಚಳಕ್ಕೆ ಅನುಗುಣವಾಗಿ ಈ ಯೋಜನೆಗೆ ಅನುದಾನವನ್ನು ಹೆಚ್ಚಿಸಬೇಕಿತ್ತು. ಆದರೆ ಈ ವರ್ಷದ ಬಜೆಟ್‍ನಲ್ಲಿ ನೀಡಲಾಗಿರುವ ಅನುದಾನ ರೂ 26,005 ಕೋಟಿ ಮಾತ್ರ.

ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮಾಜದ ಅಭಿವೃದ್ಧಿಗಾಗಿ ನಿಗಮವನ್ನು ಸ್ಥಾಪಿಸಿ ತಲಾ ರೂ.500 ಕೋಟಿ ಅನುದಾನ ನಿಗದಿಪಡಿಸಿರುವುದನ್ನು ನಾನು ಸ್ವಾಗತಿಸುತ್ತೇನೆ. ಅಂಬೇಡ್ಕರ್, ವಾಲ್ಮೀಕಿ, ಆದಿಜಾಂಬವ, ಬೋವಿ, ವಿಶ್ವಕರ್ಮ, ಕಾಡುಗೊಲ್ಲರ, ಅಂಬಿಗರ ಚೌಡಯ್ಯ, ಸವಿತಾ ಸಮಾಜ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಒಟ್ಟು ಕೇವಲ 500 ಕೋಟಿ ಅನುದಾನ ನೀಡುವ ಮೂಲಕ ತಳಸಮುದಾಯಗಳಿಗೆ ಅನ್ಯಾಯ ಮಾಡಲಾಗಿದೆ.

ಮುಖ್ಯಮಂತ್ರಿಗಳು ಆರ್ಥಿಕತೆ ಸಕಾರಾತ್ಮಕ ಹಾದಿಯಲ್ಲಿ ಇದೆ ಎಂದು ಬಜೆಟ್‍ನಲ್ಲಿ ಹೇಳಿದ್ದಾರೆ. ಆದರೆ ಶೇ.14 ರಷ್ಟು ಪ್ರಗತಿಯಲ್ಲಿದ್ದ ರಾಜ್ಯದ ಆರ್ಥಿಕತೆ ಈ ಬಾರಿಯ ಬಜೆಟ್‌ನಲ್ಲಿರುವ ಅಂಕಿಅಂಶಗಳನ್ನು ನೋಡಿದರೆ ಗಾಬರಿ ಹುಟ್ಟಿಸುವಂತೆ ಇವೆ.

ರಾಜ್ಯ ಆದಾಯ ಎಂದು ಹೇಳುತ್ತಿರುವುದು ಬರಿ ಸಾಲವನ್ನು. ತೆರಿಗೆ ಸಂಗ್ರಹವು ಮುಖ್ಯಮಂತ್ರಿಗಳ ಭಾಷಣದ ಪ್ರಕಾರ ಕರ್ನಾಟಕದಲ್ಲಿ ತುಸು ಸಮಾಧಾನಕರವಾಗಿದ್ದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ನ್ಯಾಯಯುತವಾಗಿ ನೀಡಬೇಕಾದ ಪ್ರಮಾಣದಲ್ಲಿ ನೀಡದೆ ಹೋದ ಕಾರಣಕ್ಕೆ ರಾಜ್ಯವು ಭೀಕರ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದೆ.

ಇದನ್ನೂ ಓದಿ: Karnataka Congress: 'ಕಮಲಕ್ಕೆ ಹಾರಿ ಬಂದ 15 ಶಾಸಕರಿಗೆ ಬಿಜೆಪಿ ರಾಜಕೀಯ ಸಮಾಧಿ'

ರಾಜ್ಯದ ಇತ್ತೀಚಿನ ವರ್ಷಗಳಲ್ಲಿಯೆ ಪ್ರಥಮ ಬಾರಿ ರೂ.19,485.84 ಕೋಟಿ ರಾಜಸ್ವ ಕೊರತೆ 2020-21 ರಲ್ಲಿ ಎದುರಾಗಿದೆ. 2021-22 ಕ್ಕೆ ರೂ.15,133 ಕೋಟಿ ರಾಜಸ್ವದ ಕೊರತೆ ಆಗುವುದೆಂದು ಬಜೆಟ್‍ನಲ್ಲಿ ತಿಳಿಸಿದ್ದಾರೆ. 2020-21 ರಲ್ಲಿ ಬಜೆಟ್ ಮಂಡಿಸಿದಾಗ ರೂ.143 ಕೋಟಿ ರಾಜಸ್ವ ಉಳಿಕೆ ಇರುತ್ತದೆ ಎಂದು ಅಂದಾಜಿಸಲಾಗಿತ್ತು ನಂತರದ ಪರಿಷ್ಕೃತ ಬಜೆಟ್‌ನಲ್ಲಿ ರಾಜಸ್ವ ಕೊರತೆ ಎದುರಾಯಿತು. 5 ವರ್ಷದ ನಮ್ಮ ಸರ್ಕಾರದಲ್ಲಿ ರಾಜಸ್ವದ ಕೊರತೆ ಎಂದೂ ಆಗಿಲ್ಲ.

ಬಜೆಟ್‍ನ ಅಂದಾಜಿನ ಪ್ರಕಾರ ವಿತ್ತೀಯ ಕೊರತೆ ಜಿ.ಎಸ್.ಡಿ.ಪಿ.ಯ ಶೇ.3.48 ರಷ್ಟು ಇರುತ್ತದೆ. ಇದರ ಪ್ರಕಾರ 2021-22 ರಲ್ಲಿ ವಿತ್ತೀಯ ಕೊರತೆ ರೂ.59,240 ಕೋಟಿ ಇರುತ್ತದೆ. ಈ ವರ್ಷ ರೂ.71,332 ಕೋಟಿಗಳಷ್ಟು ರಾಜ್ಯ ಸರ್ಕಾರ ಸಾಲ ಪಡೆಯುವುದಾಗಿ ಘೋಷಿಸಿದೆ. ಇದರಿಂದ ಸರ್ಕಾರದ ಮೇಲೆ ಬಹಳಷ್ಟು ಹೊರೆಯಾಗುತ್ತದೆ.

ಎಫ್.ಆರ್.ಬಿ.ಎಂ. ಕಾಯ್ದೆ ಪ್ರಕಾರ ವಿತ್ತೀಯ ಕೊರತೆಯು ಜಿ.ಡಿ.ಪಿ.ಯ ಶೇ.3 ಕ್ಕಿಂತ ಕಡಿಮೆ ಇರಬೇಕೆಂದು ನಿಯಮವಿದೆ. ಆದರೆ ಸರ್ಕಾರವು ಕೊರೋನಾ ಸಂದರ್ಭದಲ್ಲಿ ಸರಿಯಾದ ಆಡಳಿತವನ್ನು ನಡೆಸದೇ ಸರ್ಕಾರದ ವೈಫಲ್ಯವನ್ನು ಮುಚ್ಚಿ ಹಾಕಲು ಜಿ.ಎಸ್.ಡಿ.ಪಿ.ಯ ಶೇ.4 ರಷ್ಟು ಹೆಚ್ಚಿಗೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಳ್ಳಲಾಗಿದೆ. ಇದು ಒಳ್ಳೆಯ ಆರ್ಥಿಕ ನೀತಿಯ ಲಕ್ಷಣವಲ್ಲ.

5 ವರ್ಷದ ನಮ್ಮ ಸರ್ಕಾರದಲ್ಲಿ ವಿತ್ತೀಯ ಕೊರತೆಯು ಜಿ.ಎಸ್.ಡಿ.ಪಿಯ. ಶೇ.2.5 ರ ಆಸುಪಾಸಿನಲ್ಲೇ ಇತ್ತು.

2020-21 ರಲ್ಲಿ ಬಿಡುಗಡೆ ಮಾಡಿದ ಮಧ್ಯಮಾವಧಿ ವಿತ್ತೀಯ ಯೋಜನೆ - 2020-2024 ರ ಪ್ರಕಾರ ಹೆಚ್ಚುವರಿ ರಾಜಸ್ವ ನಿರೀಕ್ಷೆಯಲ್ಲಿದ್ದ ರಾಜ್ಯ 2020-21 ರಲ್ಲೇ ದೊಡ್ಡ ಮಟ್ಟದ ರಾಜಸ್ವ ಕೊರತೆಯನ್ನು ಎದುರಿಸುತ್ತಿದೆ.

2022-23 ರಿಂದ ಜಿ.ಎಸ್.ಟಿ. ಪರಿಹಾರ ಸ್ಥಗಿತಗೊಳ್ಳುವುದರಿಂದ ಇದರ ಜೊತೆಗೆ ರೂ.30,743 ಕೋಟಿ ರಾಜಸ್ವ ಕೊರತೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ. 2023-24 ರಲ್ಲಿ ಈ ರಾಜಸ್ವ ಕೊರತೆಯು ರೂ.46,831 ಕೋಟಿಯಾಗಲಿದೆ.

2020-21 ರಲ್ಲಿ ರೂ.70,411 ಕೋಟಿ ಸಾಲ ಮಾಡಿದೆ. 2019-20 ರವರೆಗೆ ರೂ.3,27,209 ಕೋಟಿ ಸಾಲ ರಾಜ್ಯದ ಮೇಲಿತ್ತು. ನಮ್ಮ ಸರ್ಕಾರದ ಅಂತಿಮ ವರ್ಷದಲ್ಲಿ (2017-18)ರಲ್ಲಿ ರೂ.2,42,420 ಕೋಟಿ ಸಾಲ ಮಾಡಲಾಗಿತ್ತು. ಜಿ.ಎಸ್.ಡಿ.ಪಿಯ ಮೇಲೆ ಸಾಲದ ಪ್ರಮಾಣ ಶೇ.18.93 ಇತ್ತು. 2020-21 ರ ಫೆಬ್ರವರಿ ಅಂತ್ಯಕ್ಕೆ ರಾಜ್ಯದ ಸಾಲ ರೂ.3,97,881 ಕೋಟಿ ಇದೆ. ಮುಂದಿನ ವರ್ಷಕ್ಕೆ ರೂ.4,57,889 ಕೋಟಿಗಳಷ್ಟು ಸಾಲ ರಾಜ್ಯದ ಜನರ ಮೇಲೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಇದು ಜಿ.ಎಸ್.ಡಿ.ಪಿ.ಯ ಶೇ.26.9 ರಷ್ಟು ಆಗಿದೆ. ಎಫ್.ಆರ್.ಬಿ.ಎಂ. ಕಾಯ್ದೆಯ ನಿಯಮದ ಪ್ರಕಾರ ಜಿ.ಎಸ್.ಡಿ.ಪಿಯ ಶೇ.25 ರಷ್ಟು ಕಡಿಮೆ ಇರಬೇಕು. 5 ವರ್ಷದ ನಮ್ಮ ಸರ್ಕಾರವು ಅದು ಶೇ.20 ರ ಆಸುಪಾಸಿನಲ್ಲಿ ಇತ್ತು.

ರಾಜಸ್ವ ಆದಾಯವು ಕಳೆದ ಬಜೆಟ್ ಅಂದಾಜಿಗಿಂತ ಈ ವರ್ಷದ ಅಂದಾಜಿನಲ್ಲಿ ಸುಮಾರು ರೂ.7,000 ಕೋಟಿಯಷ್ಟು ಕಡಿಮೆಯಾಗಿದೆ. ಕಳೆದ ಬಜೆಟ್‍ನ ಅಂದಾಜು ಮತ್ತು ಪರಿಷ್ಕೃತ ರಾಜಸ್ವ ಸ್ವೀಕೃತಿಯಲ್ಲಿ ರೂ.20,000 ಕೋಟಿಯಷ್ಟು ಕಡಿಮೆಯಾಗಿದೆ. ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ಮತ್ತು ಅನುದಾನದ ಕೊರತೆಯೇ ಇದಕ್ಕೆ ಹೊಣೆ.

2020-21 ರ ಪರಿಷ್ಕೃತ ವೆಚ್ಚವು ರೂ.2,29,924.73 ಕೋಟಿ ಇರುತ್ತದೆ ಎಂದು ಅಂದಾಜಿಸಲಾಗಿದೆ. ಇದು ಬಜೆಟ್‍ನ ಅಂದಾಜಿಗಿಂತ ರೂ.8,000 ಕೋಟಿಯಷ್ಟು ಕಡಿಮೆಯಾಗಿದೆ.

2020-21 ರಲ್ಲಿ ರೂ.2,37,893 ಕೋಟಿಗಳಷ್ಟು ಬಜೆಟ್ ಅನ್ನು ಮಂಡಿಸಿದ್ದರೂ ಕಡೆಯದಾಗಿ ಇಲಾಖೆಗಳಿಗೆ ನೀಡಲು ಉದ್ದೇಶಿಸಿದ್ದ ಮೊತ್ತ ರೂ.1,96,369.2 ಕೋಟಿ. ಅದರಲ್ಲಿ ಹಳೆಯ ಬಾಕಿ ರೂ.13,491.7 ಕೋಟಿ. ಒಟ್ಟಿಗೆ ಸೇರಿ ಖರ್ಚು ಮಾಡಲು ಲಭ್ಯವಿದ್ದ ಅನುದಾನ ರೂ.2,09,860 ಕೋಟಿ.

ಇಲಾಖೆಗಳಿಗೆ ಜನವರಿಯವರೆಗೆ ಬಿಡುಗಡೆ ಮಾಡಿದ್ದು ರೂ.1,42,851 ಕೋಟಿ. ಖರ್ಚಾಗಿರುವುದು ರೂ.1,30,998 ಕೋಟಿ ಮಾತ್ರ. 2020-21 ರಲ್ಲಿ ರೂ.2,37,893 ಕೋಟಿಯನ್ನು ಪರಿಷ್ಕರಿಸಿ ರೂ.2,29,925 ಕೋಟಿಗಳಿಗೆ ಇಳಿಸಿಕೊಂಡರು.

ಇದನ್ನೂ ಓದಿ: 'ಮುಂದಿನ ಬಾರಿಯೂ ಸಿದ್ದರಾಮಯ್ಯನನ್ನು ಪತಿಪಕ್ಷದಲ್ಲೇ ಕೂರಿಸದಿದ್ದರೆ ನಾನು ಯಡಿಯೂರಪ್ಪನೇ ಅಲ್ಲ'

ಕೊರೋನಾ ನಿರ್ವಹಣೆಗಾಗಿ ರೂ.5,372 ಕೋಟಿ ಖರ್ಚು ಮಾಡಿಯೂ ಒಟ್ಟು ಖರ್ಚು ಅವರ ಬಜೆಟ್ ಅಂದಾಜಿಗಿಂತ ಕಡಿಮೆಯಿದೆ. ಇದರಲ್ಲಿ ಇಲಾಖೆಗಳಿಗೆ ಖರ್ಚು ಮಾಡಲು ಸಿಕ್ಕಿದ್ದು ರೂ.1,96,369 ಕೋಟಿ. ಇನ್ನು ಉಳಿದ ರೂ.33,556 ಕೋಟಿಗಳು ಸಾಲ ಮರುಪಾವತಿ ಮತ್ತು ಬಡ್ಡಿ ಪಾವತಿಗೆ ಖರ್ಚಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 2021-22 ರಲ್ಲಿ ಜಿ.ಡಿ.ಪಿ.ಯು ಶೇ.11 ರಷ್ಟು ಬೆಳವಣಿಗೆ ಕಾಣುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ರಾಜ್ಯದ ಸ್ವಂತ ತೆರಿಗೆಗಳ ಸಂಗ್ರಹಗಳ ಗುರಿಯು 2020-21 ರ ಮೂಲ ಬಜೆಟ್‍ಗೆ ಹೋಲಿಸಿದರೆ ಶೇ.3.12 ರಷ್ಟು ಕಡಿಮೆಯಾಗಿದೆ.

ಕೇಂದ್ರದ ತೆರಿಗೆ ಪಾಲು 2020-21ರ ಮೂಲ ಬಜೆಟ್‍ನಲ್ಲಿ ರೂ.28,591.23 ಕೋಟಿ ನಿರೀಕ್ಷೆ ಮಾಡಲಾಗಿತ್ತು. 2021-22 ರ ಆಯವ್ಯಯದಲ್ಲಿ ಇದು ರೂ.24,273.6 ಕೋಟಿಗೆ ಇಳಿಯಲಿದೆ. ರೂ.4,318 ಕೋಟಿಗಳಷ್ಟು ಕಡಿಮೆಯಾಗಿದೆ. ಅಂದರೆ ಶೇ.15 ರಷ್ಟು ಕಡಿಮೆಯಾಗಿದೆ.

ದೇಶದ ಜಿ.ಡಿ.ಪಿ.ಯು ಶೇ.11 ಕ್ಕೂ ಹೆಚ್ಚು ಪ್ರಗತಿಯಾಗುವುದಾದರೆ ನಮಗೆ ನೀಡಬೇಕಾದ ತೆರಿಗೆ ಹಂಚಿಕೆಯೂ ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗಿ ರಾಜ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಆದಾಯ ಬರಬೇಕಿತ್ತು ಅಲ್ಲವೇ? ಕೇಂದ್ರ ಮತ್ತು ರಾಜ್ಯಗಳಲ್ಲಿನ ಎರಡೂ ಬಿ.ಜೆ.ಪಿ. ಸರ್ಕಾರಗಳು ಜನರ ತಲೆಗೆ ಟೋಪಿ ಹಾಕುತ್ತಿವೆ.

ರಾಜ್ಯ ಬಜೆಟ್‌ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‌ ಮೇಲೆ ವಿಧಿಸಲಾಗುತ್ತಿದ್ದ ಮಾರಾಟ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ಜನರಿಗೆ ನೆರವಾಗಬೇಕಿತ್ತು ಹಾಗೂ ಕೇಂದ್ರ ಸರ್ಕಾರದ ಮೇಲೆ ತೆರಿಗೆ ಕಡಿತಗೊಳಿಸುವಂತೆ ಒತ್ತಡ ಹೇರಬೇಕಿತ್ತು. ಈ ಅಂಶಗಳೇ ಇಂದಿನ ಬಜೆಟ್‌ನಲ್ಲಿ ಇಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News