ಆತ್ಮೀಯ ಗೆಳೆಯ ಸತ್ಯಣ್ಣನನ್ನು ಕಳೆದುಕೊಂಡಿದ್ದೇನೆ: ಸಿದ್ದರಾಮಯ್ಯ

ಮಾಜಿ ಶಾಸಕರಾದ ಸತ್ಯನಾರಾಯಣ ಅವರು ದೀರ್ಘಕಾಲದ ನನ್ನ ರಾಜಕೀಯ ಸಹಪಾಠಿಯಾಗಿದ್ದರು. 1977 ರಲ್ಲಿ ಇಬ್ಬರೂ ಏಕಕಾಲದಲ್ಲಿ ರಾಜಕೀಯ ಪ್ರವೇಶ ಮಾಡಿದ್ದೆವು. ಅವರು ಬಹಳ ಸೌಮ್ಯ ಸ್ವಭಾವದ ಸರಳ-ಸಜ್ಜನ ರಾಜಕಾರಣಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Last Updated : Jun 7, 2019, 03:11 PM IST
ಆತ್ಮೀಯ ಗೆಳೆಯ ಸತ್ಯಣ್ಣನನ್ನು ಕಳೆದುಕೊಂಡಿದ್ದೇನೆ: ಸಿದ್ದರಾಮಯ್ಯ title=

ಬೆಂಗಳೂರು: ನನ್ನ ಆತ್ಮೀಯ ಗೆಳೆಯ, ಚಾಮುಂಡೇಶ್ವರಿ ಕ್ಷೇತ್ರದ ಮಾಜಿ ಶಾಸಕ, ಮುತ್ಸದ್ದಿ ರಾಜಕಾರಣಿ ಎಂ.ಸತ್ಯನಾರಾಯಣ ಅವರ ನಿಧನದಿಂದ ಬಹಳ ನೋವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಸತ್ಯನಾರಾಯಣ(74) ಅವರು ಅನಾರೋಗ್ಯದಿಂದಾಗಿ ಗುರುವಾರ ರಾತ್ರಿ ನಿಧನರಾದರು. ಸಿದ್ದರಾಮಯ್ಯ ಅವರ ಆಪ್ತರೂ ಸಹ ಆಗಿದ್ದ ಅವರು ಸಾಕಷ್ಟು ಜನಪರ ಸೇವೆ ಸಲ್ಲಿಸಿದ್ದಾರೆ. ಇವರ ನಿಧನ ವಾರ್ತೆ ತಿಳಿಯುತ್ತಿದ್ದಂತೆಯೇ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, "ನಾನು ಆತ್ಮೀಯ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬದವರ ಶೋಕದಲ್ಲಿ‌ ನಾನೂ ಭಾಗಿಯಾಗಿದ್ದೇನೆ" ಎಂದಿದ್ದಾರೆ.

"ಮಾಜಿ ಶಾಸಕರಾದ ಸತ್ಯನಾರಾಯಣ ಅವರು ದೀರ್ಘಕಾಲದ ನನ್ನ ರಾಜಕೀಯ ಸಹಪಾಠಿಯಾಗಿದ್ದರು. 1977 ರಲ್ಲಿ ಇಬ್ಬರೂ ಏಕಕಾಲದಲ್ಲಿ ರಾಜಕೀಯ ಪ್ರವೇಶ ಮಾಡಿದ್ದೆವು. ಬಹಳ ಸೌಮ್ಯ ಸ್ವಭಾವದ ಸರಳ-ಸಜ್ಜನ ರಾಜಕಾರಣಿ. ಅವರ ಅಗಲಿಕೆಯಿಂದ ವೈಯಕ್ತಿಕವಾಗಿಯಷ್ಟೇ ಅಲ್ಲ ರಾಜ್ಯ ರಾಜಕಾರಣ ಹಾಗೂ ಈ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ" ಎಂದಿದ್ದಾರೆ.

"2008ರಲ್ಲಿ ನಾನೇ ದೂರವಾಣಿ ಕರೆಮಾಡಿ ನೀವು ಚಾಮುಂಡೇಶ್ವರಿಯಿಂದ ಸ್ಪರ್ಧೆಮಾಡಿ ಎಂದು ಹೇಳಿ ಸತ್ಯಣ್ಣನವರಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೆ. ಈ ಸಂದರ್ಭದಲ್ಲಿ ಅವರಿಗೆ ತಾವು ಚುನಾವಣೆಗೆ ಸ್ಪರ್ಧಿಸುತ್ತೇನೆಂದೇ ತಿಳಿದಿರಲಿಲ್ಲ. 5 ವರ್ಷಗಳ ಕಾಲ ಶಾಸಕರಾಗಿ ಕ್ಷೇತ್ರಕ್ಕೆ ಸಾಕಷ್ಟು ದುಡಿದಿದ್ದರು. ಈಗವರು ಇಲ್ಲ ಎಂಬುದನ್ನು ನಂಬಲಾಗುತ್ತಿಲ್ಲ" ಎಂದು ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.
 

Trending News