ಬೆಂಗಳೂರು: ಶ್ರೀಮತಿ ಶಶಿಕಲಾ ಅವರಿಗೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡುವಂತೆ ಬಂಧೀಖಾನೆ ಇಲಾಖೆಯ ಅಂದಿನ ಡಿಜಿಪಿಯವರಿಗೆ ತಾವು ಸೂಚನೆ ನೀಡಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.
ನಿವೃತ್ತ ಡಿಜಿಪಿ ಸತ್ಯನಾರಾಯಣರಾವ್ ಅವರು ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಶಶಿಕಲಾ ಅವರಿಗೆ ಹಾಸಿಗೆ ಮತ್ತು ದಿಂಬು ಸೌಲಭ್ಯ ಒದಗಿಸಲಾಗಿದ್ದು ಎಂದು ಹೇಳಿದ್ದರು.ಈಗ ವಿಚಾರವನ್ನು ಅಲ್ಲಗಳೆದಿರುವ ಸಿದ್ದರಾಮಯ್ಯನವರು ತಾವು ಆ ರೀತಿಯ ಯಾವುದೇ ಸೂಚನೆ ನೀಡಿಲ್ಲ, ಸತ್ಯನಾರಾಯಣರಾವ್ ನೀಡಿರುವ ಹೇಳಿಕೆ ಸುಳ್ಳು ಎಂದು ತಿಳಿಸಿದ್ದಾರೆ.
ಶಶಿಕಲಾ ಅವರಿಗೆ ಕಾರಾಗೃಹದಲ್ಲಿ ಮೂಲಭೂತ ಸೌಕರ್ಯಗಳನ್ನೂ ಒದಗಿಸಿಲ್ಲ ಎಂದು ತಮಿಳುನಾಡಿನ ಒಂದು ನಿಯೋಗ ತಮ್ಮ ಕಚೇರಿಗೆ ಬಂದು ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಕಾನೂನು ರೀತ್ಯ ಹಾಗೂ ಜೈಲಿನ ನಿಯಮಾನುಸಾರ ಒದಗಿಸಬೇಕಾದ ಸೌಲಭ್ಯಗಳನ್ನು ಮಾತ್ರ ಶಶಿಕಲಾ ಅವರಿಗೆ ಕೊಡುವಂತೆ ಸತ್ಯನಾರಾಯಣರಾವ್ ಅವರಿಗೆ ಸೂಚಿಸಲಾಗಿತ್ತು. ಆದರೆ, ರಾಜಾತಿಥ್ಯ ಒದಗಿಸುವಂತೆ ಹೇಳಿರಲಿಲ್ಲ ಎಂದು ಮುಖ್ಯಮಂತ್ರಿಯವರು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರಗಳ ತನಿಖೆಯನ್ನು ಎಸಿಬಿಗೆ ವಹಿಸಲಾಗಿದೆ. ಹೀಗಾಗಿ ಸತ್ಯನಾರಾಯಣರಾವ್ ಅವರು ಆಧಾರ ರಹಿತ ಆರೋಪವನ್ನು ತಮ್ಮ ವಿರುದ್ಧ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.