ಮಡಿಕೇರಿ: ಸುಮಾರು 800 ವರ್ಷಗಳಷ್ಟು ಹಳೆಯದ್ದು ಎನ್ನಲಾದ ದೇವಾಲಯವೊಂದರ ಅವಶೇಷಗಳು ಕೊಡಗಿನ ವಿರಾಜಪೇಟೆ ತಾಲೂಕು ಬೊಳ್ಳುಮಾಡು ಗ್ರಾಮದಲ್ಲಿ ಪತ್ತೆಯಾಗಿದೆ. ಈ ಭಾಗದಲ್ಲಿ ಬೆಳೆದಿದ್ದ ಕಾಡು ತೆರವು ಮಾಡುವ ಸಂದರ್ಭದಲ್ಲಿ ಪುರಾತನ ದೇವಾಲಯದ ಕುರುಹುಗಳು ಕಂಡುಬಂದಿವೆ.
ಈ ಪ್ರದೇಶದಲ್ಲಿ ದೇವಾಲಯ ಇರುವ ಬಗ್ಗೆ ಹಲವು ವರ್ಷಗಳ ಹಿಂದೆಯೇ ಗ್ರಾಮಸ್ಥರ ಅರಿವಿಗೆ ಬಂದಿತ್ತು. ಈ ದೇವಾಲಯದ ಜೀರ್ಣೋದ್ದಾರಕ್ಕೆ ಸ್ಥಳೀಯರು ನಿರ್ಧರಿಸಿದ್ದರಾದರೂ ಅದು ಕಾರಣಾಂತರದಿಂದ ನೆನೆಗುದಿಗೆ ಬಿದ್ದಿತ್ತು. ಇದೀಗ ದೇವಾಲಯದ ಕುರುಹು ಪತ್ತೆ ಆಗಿರುವುದರಿಂದ ಜೀರ್ಣೋದ್ದಾರಕ್ಕಾಗಿ ಗ್ರಾಮಸ್ಥರು ಮತ್ತೆ ನಿರ್ಧಾರ ತೆಗೆದುಕೊಂಡಿದ್ದಾರೆ.
ಪ್ರಸ್ತುತ ಈ ಪುರಾತನ ದೇವಾಲಯ ಮಣ್ಣು ಮತ್ತು ಕಾಡು ಗಿಡಗಳಿಂದ ಮುಚ್ಚಿಹೋಗಿತ್ತು. ಅವಶೇಷಗಳು ಪತ್ತೆಯಾದ ಹಿನ್ನೆಲೆ ಸ್ಥಳವನ್ನು ಸ್ವಚ್ಛಗೊಳಿಸುವ ಸಂದರ್ಭ ಭಗ್ನಗೊಂಡ ದೇಗುಲದ ಮತ್ತಷ್ಟು ಅವಶೇಷಗಳು ಸ್ಥಳದಲ್ಲಿ ಪತ್ತೆಯಾಗಿವೆ. ಶಿವಲಿಂಗ, ಭಗ್ನವಾದ ದೇಗುಲದ ಭಾಗಗಳು, ಪುರಾತನ ಆಯುಧ, ಸುಂದರ ಶಿಲ್ಪಗಳು ದೊರಕಿವೆ.
ಇದನ್ನೂ ಓದಿ: ನಗರಸಭೆ ಸದಸ್ಯರಿಗೆ ಚಿನ್ನ, ಬೆಳ್ಳಿ, 1 ಲಕ್ಷ ರೂ. ನಗದು: ದೀಪಾವಳಿಗೆ ಸಚಿವ ಆನಂದ್ ಸಿಂಗ್ ಭರ್ಜರಿ ಗಿಫ್ಟ್!
ತಮ್ಮೂರಿನಲ್ಲಿ ಪುರಾತನ ದೇವಾಲಯದ ಕುರುಹುಗಳು ಪತ್ತೆಯಾಗುತ್ತಿದ್ದಂತೆಯೇ ಗ್ರಾಮಸ್ಥರು ಸ್ಥಳಕ್ಕೆ ಕುತೂಹಲದಿಂದ ಭೇಟಿ ನೀಡುತ್ತಿದ್ದಾರೆ. ಈ ದೇವಾಲಯವನ್ನು ಮಾದೇರಪ್ಪ ದೇವಾಲಯವೆಂದು ಈ ಹಿಂದೆ ಕರೆಯಲಾಗುತ್ತಿತ್ತು ಎಂದು ಗ್ರಾಮದ ಹಿರಿಯರು ಮಾಹಿತಿ ನೀಡಿದ್ದಾರೆ. ಸ್ಥಳೀಯರು ಇಲ್ಲಿಯ ಅವಶೇಷಗಳನ್ನು ಪರಿಶೀಲಿಸಿ ತಮ್ಮ ಅರಿವಿಗೆ ಸಿಗುವಂತೆ ವಿಶ್ಲೇಷಣೆ ನಡೆಸುತ್ತಿದ್ದಾರೆ.
ಪ್ರಾಚ್ಯವಸ್ತು ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸ್ಥಳ ಮತ್ತು ದೇವಾಲಯದ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಯುವ ಅಗತ್ಯತೆ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸದ್ಯದಲ್ಲೇ ಸಂಶೋಧಕರ ತಂಡ ಆಗಮಿಸುವ ನಿರೀಕ್ಷೆ ಇದೆ.
ಮತ್ತೊಂದು ಕಡೆ ತಮ್ಮೂರಿನಲ್ಲಿ ಪತ್ತೆಯಾಗಿರುವ ಪುರಾತನ ದೇವಸ್ಥಾನದ ಬಗ್ಗೆ ಗ್ರಾಮಸ್ಥರು ವಿಶೇಷ ಆಸಕ್ತಿ ತೋರಿಸಿದ್ದು, ಜೀರ್ಣೋದ್ದಾರ ಮಾಡಲು ಆಸಕ್ತಿ ತೋರಿಸಿದ್ದಾರೆ. ಈ ಸಂಬಂಧ ಸಮಿತಿಯೊಂದನ್ನೂ ರಚಿಸಲಾಗಿದೆ. ಜೀರ್ಣೋದ್ದಾರಕ್ಕೆ ಸಂಬಂಧಿಸಿದಂತೆ ಪೂರಕ ಕೆಲಸಗಳೂ ಈಗಾಗಲೇ ಶುರುವಾಗಿದೆ.
ಇದನ್ನೂ ಓದಿ: Video ನೋಡಿ: ಸಮಸ್ಯೆ ಹೇಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ..!
ಕಡಂಗ-ಪಾರಾಣೆ ರಸ್ತೆ ಮಧ್ಯೆ ಬೊಳ್ಳುಮಾಡು ಗ್ರಾಮದಲ್ಲಿ ಈ ದೇವಾಲಯ ಕಂಡುಬಂದಿದೆ. ಕೊಡಗಿಗೆ ಟಿಪ್ಪು ದಾಳಿ ಸಂದರ್ಭ ಇಲ್ಲಿದ್ದ ಬಹಳಷ್ಟು ದೇವಾಲಯಗಳನ್ನು ಧ್ವಂಸ ಮಾಡಲಾಗಿತ್ತು ಎನ್ನುವುದು ಸ್ಥಳೀಯರ ನಂಬಿಕೆ. ಈಗ ಪತ್ತೆಯಾಗಿರುವ ದೇವಾಲಯದ ಬಗ್ಗೆ ವೈಜ್ಞಾನಿಕ ಸಂಶೋಧನೆಗಳು ನಡೆದರೆ ಕೊಡಗಿನ ಚರಿತ್ರೆಯ ಮತ್ತಷ್ಟು ಮಾಹಿತಿಗಳು ದೊರಕುವ ಸಾಧ್ಯತೆಗಳಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ