ಬಡ್ತಿ ಮೀಸಲಾತಿಗೆ ತಡೆಯಾಜ್ಞೆ ನೀಡಿದ ಸುಪ್ರೀಂ: ರಾಜ್ಯ ಸರ್ಕಾರಕ್ಕೆ ಹಿನ್ನಡೆ!

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ತಂದು ರಾಜ್ಯ ಸರ್ಕಾರ ಫೆ.27ರಂದು ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.   

Last Updated : Mar 2, 2019, 07:57 AM IST
ಬಡ್ತಿ ಮೀಸಲಾತಿಗೆ ತಡೆಯಾಜ್ಞೆ ನೀಡಿದ ಸುಪ್ರೀಂ: ರಾಜ್ಯ ಸರ್ಕಾರಕ್ಕೆ ಹಿನ್ನಡೆ! title=

ನವದೆಹಲಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ತಂದು ರಾಜ್ಯ ಸರ್ಕಾರ ಫೆ.27ರಂದು ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾದಂತಾಗಿದೆ.

ಬಡ್ತಿ ಮೀಸಲಾತಿ ಕಾಯ್ದೆ ರದ್ದತಿಯಿಂದ ಹಿಂಬಡ್ತಿ ಪಡೆದಿರುವ ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್ಟಿ)ನೌಕರರಿಗೆ ಮುಂಬಡ್ತಿಗೆ ಅನುಕೂಲ ಕಲ್ಪಿಸಲು ರಾಜ್ಯ ಸಚಿವ ಸಂಪುಟ ಫೆ.27 ರಂದು ಆದೇಶ ನೀಡಿತ್ತು. 'ಮೀಸಲಾತಿ ಆಧಾರದಲ್ಲಿ ಬಡ್ತಿ ಪಡೆದ ಸರ್ಕಾರಿ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ' ನೂತನ ಕಾಯ್ದೆ ಜಾರಿಗೊಳಿಸಿರುವ ಸರ್ಕಾರದ ಆದೇಶಕ್ಕೆ ತಡೆ ಕೋರಿ ಸಾಮಾನ್ಯ ನೌಕಾರರ ಪರ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಪೀಠ ಈ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಬಿ.ಕೆ.ಪವಿತ್ರ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಅಂತಿಮ ಹಂತ ತಲುಪಿದೆ. ಈ ಸಂದರ್ಭ ಸರ್ಕಾರ ಕಾಯ್ದೆ ಜಾರಿಗೆ ತಂದಿದ್ದು ಸರಿ ಇಲ್ಲ ಎಂದು ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಪೀಠ ತಿಳಿಸಿದೆ.

ಬಡ್ತಿ ಮೀಸಲಾತಿ ಕಾಯ್ದೆ ಪ್ರಶ್ನಿಸಿ ಅರ್ಜಿದಾರರು ಈ ಹಿಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಅಂತಿಮ ಹಂತದಲ್ಲಿದೆ. ಆದರೆ, ಆ ಕುರಿತ ತೀರ್ಪು ಹೊರಬರುವ ಮುನ್ನವೇ ರಾಜ್ಯ ಸರ್ಕಾರ ನೂತನ ಕಾಯ್ದೆ ಜಾರಿಗೆ ತಂದಿರುವುದು ಸರಿಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದ್ದು, ವಿಚಾರಣೆಯನ್ನು ಮಾರ್ಚ್ 6ಕ್ಕೆ ಮುಂದೂಡಿದೆ.

ಏನಿದು ಬಡ್ತಿ ಮೀಸಲಾತಿ?
ಮೀಸಲಾತಿ ಅಡಿಯಲ್ಲಿ ಬಡ್ತಿ ಪಡೆದಿರುವ ಪರಿಶಿಷ್ಟ ಜಾತಿ, ಪಂಗಡದ ಸರ್ಕಾರಿ ನೌಕರರಿಗೆ ಸಾಂದರ್ಭಿಕ ಹಿರಿತನ ಒದಗಿಸಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ 2002ರಲ್ಲಿ ‘ಸರ್ಕಾರಿ ನೌಕರರ ಮೀಸಲಾತಿ ಆಧಾರಿತ ಬಡ್ತಿ ನೌಕರರ ಜೇಷ್ಠತೆ ನಿರ್ಣಯ ಕಾಯ್ದೆ’ ರೂಪಿಸಿತ್ತು. ಈ ಕಾಯ್ದೆಯನ್ನು ಪ್ರಶ್ನಿಸಿ ಕೆಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರಕ್ಕೆ ಸಂಬಂಧಿಸಿದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ 2006ರಲ್ಲಿ ಎಲ್ಲ ಅರ್ಜಿಗಳನ್ನು ಹೈಕೋರ್ಟ್ ಗಳಿಗೆ ಮರಳಿಸಿ, ಮರು ವಿಚಾರಣೆ ನಡೆಸುವಂತೆ ಸೂಚಿಸಿತ್ತು. 

ಅದರಂತೆ, ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರದ ಜೇಷ್ಠತಾ ನಿರ್ಣಯವನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಬಿ.ಕೆ.ಪವಿತ್ರಾ ಎಂಬುವರು 2006ರಲ್ಲಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರು. 

ಇದನ್ನು ಪರಿಗಣಿಸಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ 2017ರ ಫೆಬ್ರವರಿ 9 ರಂದು ಸುಪ್ರೀಂ ಕೋರ್ಟ್ ಬಡ್ತಿ ಮೀಸಲಾತಿ ಕಾಯ್ದೆ 2002 ಅನ್ನು ರದ್ದುಗೊಳಿಸಿ ಆದೇಶಿಸಿತ್ತು. ಹೀಗಾಗಿ ರಾಜ್ಯದ 3,700ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರು ಹಿಂಬಡ್ತಿಗೆ ಒಳಗಾಗಿದ್ದರು. ಬಳಿಕ ಈ ನೌಕರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಹೊಸ ಕಾಯ್ದೆ ರೂಪಿಸಿ ರಾಷ್ಟ್ರಪತಿಯಿಂದ ಅನುಮೋದನೆಯನ್ನೂ ಪಡೆದು, ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆಯನ್ನೂ ಪಡೆದಿತ್ತು. ಆದರೆ ಇದುವರೆಗೂ ಜಾರಿ ಮಾಡಿರಲಿಲ್ಲ.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಬಡ್ತಿ ಮೀಸಲಾತಿಗೆ ಒಟ್ಟು ನೀಡಲಾಗುವುದು ಎಂದು ಹೇಳುತ್ತಲೇ ಬಂದಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ  ಬಡ್ತಿ ಮೀಸಲಾತಿ ಕಾಯ್ದೆಯನ್ನು ಫೆ.27, 2019ರಿಂದಲೇ ಜಾರಿಯಾಗುವಂತೆ ಆದೇಶ ಹೊರಡಿಸಿತ್ತು.
 

Trending News