ಇಂದು ಡಿಸಿಎಂ ಹುದ್ದೆ ಸೃಷ್ಟಿ, ಖಾತೆ ಹಂಚಿಕೆ: ಸಿಎಂ ಬಿ.ಎಸ್. ಯಡಿಯೂರಪ್ಪ

ಹೈಕಮಾಂಡ್ ನಿರ್ದೇಶನದ ಮೇರೆಗೆ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲಾಗುವುದು, ಅದು ಒಂದೋ ಅಥವಾ ಎರಡೋ ಎಂಬುದು ಸೋಮವಾರ ಗೊತ್ತಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದರು.  

Last Updated : Aug 26, 2019, 10:05 AM IST
ಇಂದು ಡಿಸಿಎಂ ಹುದ್ದೆ ಸೃಷ್ಟಿ, ಖಾತೆ ಹಂಚಿಕೆ: ಸಿಎಂ ಬಿ.ಎಸ್. ಯಡಿಯೂರಪ್ಪ title=
File Image

ನವದೆಹಲಿ: ರಾಜ್ಯದಲ್ಲಿ ಉದ್ಭವಿಸಿರುವ ರಾಜಕೀಯ ಅನಿಶ್ಚಿತತೆಗೆ ಕಡಿವಾಣ ಹಾಕಲೆಂದು ಉಪ ಮುಖ್ಯಮಂತ್ರಿ ‌ಹುದ್ದೆ ಸೃಷ್ಟಿಸಲಾಗುತ್ತದೆ ಎಂಬ ಬಗ್ಗೆ ಕಡೆಗೂ ‌ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೌನಮುರಿದಿದ್ದಾರೆ. ಹೈಕಮಾಂಡ್ ನಿರ್ದೇಶನದ ಮೇರೆಗೆ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲಾಗುವುದು, ಅದು ಒಂದೋ ಅಥವಾ ಎರಡೋ ಎಂಬುದು ಸೋಮವಾರ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

ಕೇಂದ್ರದ ಮಾಜಿ ಸಚಿವ, ಬಿಜೆಪಿ ನಾಯಕ ಅರುಣ್ ಜೈಟ್ಲಿ ಅಂತಿಮ ದರ್ಶನ ಪಡೆದ ಬಳಿಕ ಭಾನುವಾರ ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಸುಳಿವು ನೀಡಿದರು. ಜೊತೆಗೆ ಈಗಾಗಲೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವವರಿಗೆ ಖಾತೆ ಹಂಚಿಕೆ ಮಾಡುವ ಬಗ್ಗೆಯೂ ಖಚಿತ ಪಡಿಸಿದರು. ಸೋಮವಾರ ಬೆಳಿಗ್ಗೆಯೇ ಸಚಿವರಿಗೆ ಖಾತೆ ಹಂಚಲಾಗುವುದು ಸಂಜೆ ನಮ್ಮ ಸರ್ಕಾರದ ಎರಡನೇ ಸಚಿವ ಸಂಪುಟ ಸಭೆ ನಡೆಸಲಾಗುವುದು ಎಂದು ಹೇಳಿದರು.

ನಮ್ಮದು ರಾಷ್ಟ್ರೀಯ ಪಕ್ಷ. ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಲವು ಲೆಕ್ಕಾಚಾರಗಳನ್ನು ಹಾಕಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು ತಿಳಿಸಿದ್ದಾರೆ. ಅವರ ಸೂಚನೆಯನ್ನು ಪಾಲಿಸುತ್ತಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಕೆಲವರಿಗೆ ಬೇಸರವಿದೆ. ಪಕ್ಷದ ವರಿಷ್ಟರ ಆದೇಶದಂತೆ‌ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಲಾಗಿದೆ. ಮುಂದೆ ಬೆಳಗಾವಿ ಜೆಲ್ಲೆಯ ಮತ್ತೊಬ್ಬರಿಗೆ ಅವಕಾಶ ನೀಡಲಾಗುವುದು ಎಂದರು. ಆದರೆ ಅದು ಉಮೇಶ್ ಕತ್ತಿ ಅವರಿಗೋ ಅಥವಾ ನ್ಯಾಯಾಲಯದಲ್ಲಿ ಅನರ್ಹತೆಯ ಪ್ರಕರಣ ಇತ್ಯರ್ಥ ಆದ ಮೇಲೆ ರಮೇಶ್ ಜಾರಕಿಹೊಳಿ ಅವರಿಗೋ ಎಂಬ ಗುಟ್ಟು ಬಿಟ್ಟುಕೊಡಲಿಲ್ಲ.

ಬಿಜೆಪಿಯಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಸಮಸ್ಯೆಗಳಿರುವುದು ‌ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ. ಹಾಗಾಗಿ ಯಾವುದೇ ಸಮಸ್ಯೆ ಇಲ್ಲದೆ ಸರ್ಕಾರ ಸುಗಮವಾಗಿ ನಡೆದುಕೊಂಡು ಹೋಗುತ್ತದೆಂಬ ವಿಶ್ವಾಸ ವ್ಯಕ್ತಪಡಿಸಿದರು. ಸಚಿವ ಸ್ಥಾನ ದೊರೆಯದವರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಇದೇ ವೇಳೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಟ್ಟ  ಅಲಂಕರಿಸಿದ ಭಾರತದ ಹೆಮ್ಮೆಯ ಆಟಗಾರ್ತಿ ಪಿ.ವಿ. ಸಿಂಧೂ ಅವರಿಗೆ ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.

Trending News