H1 N1 ಬಗ್ಗೆ ಮುಂಜಾಗೃತಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ- ಪರಮೇಶ್ವರ್

2015 ರಿಂದ 2018ರವರೆಗೆ ರಾಜ್ಯದಲ್ಲಿ H1 N1 ನಿಂದ ಮೃತಪಟ್ಟವರೆಷ್ಟು ಗೊತ್ತಾ?

Last Updated : Oct 15, 2018, 09:00 AM IST
H1 N1 ಬಗ್ಗೆ ಮುಂಜಾಗೃತಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ-  ಪರಮೇಶ್ವರ್ title=

ಬೆಂಗಳೂರು: ರಾಜ್ಯದಲ್ಲಿ ಎಚ್ 1 ಎನ್ ‌1 ಭೀತಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ತ್ವರಿತವಾಗಿ ಮುನ್ನೆಚ್ಚರಿಕ ಕ್ರಮ‌ ತೆಗೆದುಕೊಳ್ಳುವಂತೆ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಅವರು ಬಿಬಿಎಂಪಿ ಅಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಿ ಸೂಚನೆ ನೀಡಿದರು. 

ಬಿಡಿಎ ಕ್ವಾಟ್ರಸ್‌ನಲ್ಲಿ ಸಭೆ ನಡೆಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಚ್‌೧ ಎನ್‌೧ ವೈರಾಣು ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. ಈ ವರೆಗೆ ಒಟ್ಟು 456 ಪ್ರಕರಣಗಳು ದಾಖಲಾಗಿವೆ. 

ಜನವರಿ 2018ರಿಂದ ಇಲ್ಲಿಯವರಗೆ ಒಟ್ಟು 4902 ಜನರನ್ನು ಪರೀಕ್ಷಿಸಲಾಗಿದೆ. ಈ ಪೈಕಿ 456 ಪ್ರಕರಣಗಳು ಎಚ್‌೧ ಎನ್‌೧ ರೋಗೋಣು ಇರುವುದು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಈ ಸಂಬಂಧ ಈಗಾಗಲೇ ಎಲ್ಲ ಭಾಗದ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.‌ ಯಾವುದೇ ರೀತಿಯ ಜ್ವರ ಕಂಡು ಬಂದರು ಅಥವಾ ಈ ರೋಗಾಣುವಿನ ಲಕ್ಷಣದ ಅನುಭವವಾದರೆ ಕೂಡಲೇ ಜನರು ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಿ ಎಂದರು. 

ಪ್ರತಿ ವರ್ಷ ಎಚ್‌೧ ಎನ್‌೧ ಪ್ರಕರಣಗಳು ದಾಖಲಾಗುತ್ತಿವೆ. 2015 ರಲ್ಲಿಯೇ ಈ ರೋಗಾಣುವಿನಿಂದ 94 ಮಂದಿ ಸಾವನ್ನಪ್ಪಿದ್ದರು. ಆ ನಂತರದ ವರ್ಷದಲ್ಲಿ ಮುಂಜಾಗೃತಿ ವಹಿಸಿದ್ದರಿಂದ ಈ ರೋಗಾಣುವಿನಿಂದ ಸಾವನ್ನಪ್ಪಿದವರ ಸಂಖ್ಯೆ ಇಳಿಮುಖವಾಗಿದೆ. 2017 ರಲ್ಲಿ 3000 ಪ್ರಕರಣಗಳು ಪತ್ತೆಯಾಗಿದ್ದವು.‌ ಈ ವರ್ಷ ಕೂಡ ಎಚ್‌೧ ಎನ್೧ ಆತಂಕ ಹರಡುತ್ತಿದೆ. ಈ ಬಗ್ಗೆ ಜನರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಆದರೆ ಗಾಬರಿಯಾಗದಂತೆ ಇಂಥ ಲಕ್ಷಣ ಕಂಡು ಬಂದರೆ ಕೂಡಲೇ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಎಚ್1 ಎನ್1 ಪತ್ತೆಹಚ್ಚಲು ಯಾವುದೇ ಲ್ಯಾಬ್ ವ್ಯವಸ್ಥೆ ಇಲ್ಲ. ಹಾಗಾಗಿ ಆ ಭಾಗದಲ್ಲಿ ಸರ್ಕಾರಿ ಲ್ಯಾಬ್ ಪ್ರಾರಂಭ ಮಾಡಲಾಗುವುದು ಎಂದು ಅವರು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಇಬ್ಬರು ಎಚ್1 ಎನ್1 ನಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಈ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದೇನೆ. ಗಾಳಿಯಲ್ಲಿ ರೋಗ ಹರಡುವುದರಿಂದ ರೋಗಿಯಿಂದ ಸ್ವಲ್ಪ ದೂರ ಇರುವುದು ಒಳ್ಳೆಯದು ಎಂದರು.

ದಾಖಲಾದ ಪ್ರಕರಣಗಳು-

2015 ರಿಂದ 2018ರವರೆಗೆ ರಾಜ್ಯದಲ್ಲಿ ಎಚ್‌೧ಎನ್‌೧ನಿಂದ ಸಾವನ್ನಪ್ಪಿದವರ ಸಂಖ್ಯೆ:
2015- 94 ಮಂದಿ
2016- ಯಾರೂ ಇಲ್ಲ
2017- 15 ಮಂದಿ
2018- 6 ಮಂದಿ

2018ರಲ್ಲಿ ಎಚ್‌೧ಎನ್‌೧ನಿಂದ ಸಾವನ್ನಪ್ಪಿದವರ ಸಂಖ್ಯೆ:
ಬೆಂಗಳೂರು- 2 
ಬೆಂಗಳೂರು ಗ್ರಾಮಾಂತರ- 1
ಅರಸೀಕೆರೆ -1
ತುಮಕೂರು- 1
ಕಲುಬುರಗಿ- 1

Trending News