ಕರ್ನಾಟಕದಲ್ಲಿ ಎನ್​ಸಿಪಿ ಬಲಪಡಿಸಲು ನಿರ್ಧಾರ: ಬೆಂಗಳೂರಿನಲ್ಲಿಂದು ಪವಾರ್​ ಶಕ್ತಿ ಪ್ರದರ್ಶನ

ದೇಶದ ಪ್ರಮುಖ ರಾಷ್ಟ್ರೀಯ ಪಕ್ಷಗಳಲ್ಲಿ ಒಂದಾಗಿರುವ ಶರದ್ ಪವಾರ್ ನೇತೃತ್ವದ ಎನ್​ಸಿಪಿ ಮಹಾರಾಷ್ಟ್ರದಲ್ಲಿ 53 ಸ್ಥಾನಗಳನ್ನು ಗಳಿಸುವ ಮೂಲಕ ಸದ್ಯ ಶಿವಸೇನೆ, ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರ ರಚಿಸಿ ಅಧಿಕಾರ ನಡೆಸುತ್ತಿದೆ.

Written by - RACHAPPA SUTTUR | Last Updated : Apr 18, 2022, 12:23 PM IST
  • ರಾಜ್ಯ ರಾಜಧಾನಿಯಲ್ಲಿ ಶರದ್ ಪವಾರ್ ಶಕ್ತಿ ಪ್ರದರ್ಶನ
  • ಇಂದು ದೇವನಹಳ್ಳಿಯಿಂದ ಬೃಹತ್ ಮೆರವಣಿಗೆ
  • 2023ರ ಚುನಾವಣೆಗೆ ಭರ್ಜರಿ ತಯಾರಿ
ಕರ್ನಾಟಕದಲ್ಲಿ ಎನ್​ಸಿಪಿ ಬಲಪಡಿಸಲು ನಿರ್ಧಾರ: ಬೆಂಗಳೂರಿನಲ್ಲಿಂದು ಪವಾರ್​ ಶಕ್ತಿ ಪ್ರದರ್ಶನ title=
Sharad Pawar

ಎನ್​ಸಿಪಿಯನ್ನು ಕರ್ನಾಟಕಕ್ಕೆ ಪರಿಚಯಿಸುವ ಭಾಗವಾಗಿ ಚುನಾವಣೆಗೆ ಒಂದು ವರ್ಷ ಮುನ್ನವೇ ಸಿದ್ಧತೆ ಆರಂಭಿಸಿರುವ ಶರದ್ ಪವಾರ್ ಖುದ್ದು ತಮ್ಮದೇ ನೇತೃತ್ವದಲ್ಲಿ ಇಂದು ರಾಜ್ಯ ರಾಜಧಾನಿಯಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿರುವ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್​ಸಿಪಿ) ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಲು ಮುಂದಾಗಿದೆ. 

ಇದನ್ನು ಓದಿ: ಲಖಿಂಪುರ ಖೇರಿ ಹಿಂಸಾಚಾರ: ಕೇಂದ್ರ ಸಚಿವರ ಪುತ್ರನಿಗೆ ʼಸುಪ್ರೀಂʼ ಸಂಕಷ್ಟ

ದೇಶದ ಪ್ರಮುಖ ರಾಷ್ಟ್ರೀಯ ಪಕ್ಷಗಳಲ್ಲಿ ಒಂದಾಗಿರುವ ಶರದ್ ಪವಾರ್ ನೇತೃತ್ವದ ಎನ್​ಸಿಪಿ ಮಹಾರಾಷ್ಟ್ರದಲ್ಲಿ 53 ಸ್ಥಾನಗಳನ್ನು ಗಳಿಸುವ ಮೂಲಕ ಸದ್ಯ ಶಿವಸೇನೆ, ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರ ರಚಿಸಿ ಅಧಿಕಾರ ನಡೆಸುತ್ತಿದೆ.

ಕರ್ನಾಟಕ ಸಹ ಮಹಾರಾಷ್ಟ್ರದ ಪಕ್ಕದ ರಾಜ್ಯ ಆಗಿದ್ದು ಇಲ್ಲಿಯೂ ಸಾಕಷ್ಟು ಮರಾಠಿಗರು ನೆಲೆಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮರಾಠಿಗರು ಇರುವ ಪ್ರದೇಶವನ್ನು ಗುರುತಿಸಿ 2023ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಶರದ್ ಪವಾರ್ ನಿರ್ಧರಿಸಿದ್ದಾರೆ. ಎನ್​ಸಿಪಿಯನ್ನು ರಾಜ್ಯಕ್ಕೆ ಪರಿಚಯಿಸುವ ಭಾಗವಾಗಿ ಚುನಾವಣೆಗೆ ಒಂದು ವರ್ಷ ಮುನ್ನವೇ ಸಿದ್ಧತೆ ಆರಂಭಿಸಿರುವ ಶರದ್ ಪವಾರ್, ಖುದ್ದು ತಮ್ಮದೇ ನೇತೃತ್ವದಲ್ಲಿ ಇಂದು ರಾಜಧಾನಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ದೇವನಹಳ್ಳಿಯಿಂದ ಬೃಹತ್ ಮೆರವಣಿಗೆ ಸಹ ಹಮ್ಮಿಕೊಂಡಿದ್ದು, ಬಾಣಸವಾಡಿಯಲ್ಲಿ ತಮ್ಮ ಪಕ್ಷದ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುತ್ತ ಬಂದಿದ್ದು, ಅಕ್ಕಪಕ್ಕದ ರಾಜ್ಯಗಳ ಕೆಲ ರಾಜಕೀಯ ಪಕ್ಷಗಳು ಚುನಾವಣಾ ಸಂದರ್ಭದಲ್ಲಿ ತಮ್ಮ ರಾಜಕೀಯ ಪ್ರವೇಶದ ಪ್ರಯತ್ನ ನಡೆಸುವುದು ಸಹಜ.

ಈಗಾಗಲೇ ಆಮ್ ಆದ್ಮಿ ಪಕ್ಷ, ಸಿಪಿಐಎಂ, ಎಐಎಡಿಎಂಕೆ ಸೇರಿದಂತೆ ಹಲವು ಪಕ್ಷಗಳು ತಮ್ಮ ಅಸ್ತಿತ್ವಕ್ಕಾಗಿ ಕರ್ನಾಟಕದ ರಾಜಕೀಯ ಕಣಕ್ಕಿಳಿದು ಅಲ್ಪಸ್ವಲ್ಪ ಯಶಸ್ಸು ಸಂಪಾದಿಸಿವೆ. ಶರದ್ ಪವಾರ್ ನೇತೃತ್ವದ ಎನ್​ಸಿಪಿ ಕರ್ನಾಟಕದಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿರುವುದು ಇದೇ ಮೊದಲಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲೂ ಸಹ ರಾಜ್ಯದ 14 ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ರಾಯಬಾಗ, ಹುಕ್ಕೇರಿ, ಬೆಳಗಾವಿ ಉತ್ತರ, ಸವದತ್ತಿ, ವಿಜಯಪುರ, ಸಿಂದಗಿ, ಬಸವಕಲ್ಯಾಣ, ರಾಯಚೂರು, ಶಿರಹಟ್ಟಿ, ಹುಬ್ಬಳ್ಳಿ-ಧಾರವಾಡ, ಕಾರವಾರ ಬಳ್ಳಾರಿ ನಗರ, ಹರಪನಹಳ್ಳಿ ಹಾಗೂ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. 2023 ವಿಧಾನಸಭೆ ಚುನಾವಣೆಯಲ್ಲಿಯೂ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿರುವ ಶರದ್ ಪವಾರ್ ನೇತೃತ್ವದ ಎನ್​ಸಿಪಿ ಚುನಾವಣೆಗೆ ಒಂದು ವರ್ಷ ಮುನ್ನವೇ ಸಿದ್ಧತೆ ಆರಂಭಿಸಿದೆ.

ಅಧಿಕೃತವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಇಂದು ಬೆಂಗಳೂರಿನ ಬಾಣಸವಾಡಿಯಲ್ಲಿ ಪಕ್ಷದ ಕಚೇರಿ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ದೇವನಹಳ್ಳಿ ಟೋಲ್​ಗೇಟ್​ನಿಂದ ಬಾಣಸವಾಡಿವರೆಗೂ ಬೃಹತ್ ಮೆರವಣಿಗೆ ನಡೆಸಲಿರುವ ಶರದ್ ಪವಾರ್ ನೇತೃತ್ವದ ಎನ್​ಸಿಪಿ ಕಾರ್ಯಕರ್ತರು ಪಕ್ಷದ ಬಲ ಪ್ರದರ್ಶನ ಮಾಡಲಿದ್ದಾರೆ. ಮಧ್ಯಾಹ್ನ ಮೂರಕ್ಕೆ ಬಾಣಸವಾಡಿಯಲ್ಲಿ ಪಕ್ಷದ ಕಚೇರಿ ಉದ್ಘಾಟಿಸುವ ಶರದ್ ಪವರ್, ಸಾರ್ವಜನಿಕರನ್ನುದ್ದೇಶಿಸಿ ಬಹಿರಂಗ ಭಾಷಣ ಮಾಡಲಿದ್ದಾರೆ.

ಇದನ್ನು ಓದಿ: ಹೆಂಡತಿ ಟಾರ್ಚರ್ ತಾಳಲಾರದೆ ಚೈನ್ ಸ್ನಾಚ್.. ಕೊನೆಗೂ ಸಿಕ್ಕಿಬಿದ್ದ ಪತಿರಾಯ!

ಇದಾದ ಬಳಿಕ ಸಂಜೆ 6 ಗಂಟೆಗೆ ನಗರದ ಖಾಸಗಿ ಹೋಟೆಲ್​ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಲಿದ್ದಾರೆ. ರಾಜ್ಯ ರಾಜಕಾರಣಕ್ಕೆ ಪ್ರವೇಶ ಹಾಗೂ ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಪಕ್ಷದ ಅಸ್ತಿತ್ವವನ್ನು ಬಲಗೊಳಿಸುವ ವಿಚಾರವಾಗಿ ಅವರು ಇದೇ ಸಂದರ್ಭದಲ್ಲಿ ಮಾತನಾಡುವ ಸಾಧ್ಯತೆ ಇದೆ. ಮಹಾರಾಷ್ಟ್ರ ಗಡಿ ಭಾಗದ ಜಿಲ್ಲೆಗಳಲ್ಲಿ ಮಾತ್ರವಲ್ಲದೆ ಬೆಂಗಳೂರು ನಗರದ 3-4 ಕ್ಷೇತ್ರಗಳಲ್ಲಿಯೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಿದ್ಧತೆಯನ್ನು ಶರದ್​ ಪವಾರ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News