ಮಂಡ್ಯ: ಮಾರ್ಚ್ 18ರಂದು ಲೋಕಸಭಾ ಚುನಾವಣೆಯಲ್ಲಿ ತಾವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದ ಸುಮಲತಾ ಅಂಬರೀಶ್ ಇಂದು ಸಾವಿರಾರು ಬೆಂಬಲಿಗರೊಂದಿಗೆ ಬಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮೊದಲು ಮೈಸೂರಿಗೆ ತೆರಳಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಸುಮಲತಾ ಅಂಬರೀಶ್, ಅಲ್ಲಿಂದ ನೇರವಾಗಿ ಮಂಡ್ಯ ತಾಲೂಕಿನ ಇಂಡುವಾಳಿಗೆ ತೆರಳಿ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ನಿವಾಸಕ್ಕೆ ಭೇಟಿ ನೀಡಿದರು. ರಾಕಿಂಗ್ ಸ್ಟಾರ್ ಯಶ್ ಕೂಡ ಸಚ್ಚಿದಾನಂದ ಅವರ ನಿವಾಸಕ್ಕೆ ಆಗಮಿಸಿದರು.
ಅಲ್ಲಿಂದ ತಮ್ಮ ಪುತ್ರ ಅಂಬರೀಶ್, ಮನೆ ಮಗ ಯಶ್, ನಟ ದೊಡ್ಡಣ್ಣ, ರಾಕಲೈನ್ ವೆಂಕಟೇಶ್, ಅಂಬರೀಶ್ ಸಹೋದರನ ಪುತ್ರ ಮಧುಸೂದನ್ ಸೇರಿದಂತೆ ಸಾವಿರಾರು ಅಭಿಮಾನಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಸುಮಲತಾ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಸುಮಲತಾ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಜನಸ್ತೋಮ ಹೆಚ್ಚಿರುವ ಕಾರಣ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಧಿಕಾರಿ ಕಚೇರಿ ಬಾಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ನಾಮಪತ್ರ ಸಲ್ಲಿಕೆ ಬಳಿಕ ಸುಮಲತಾ ಅಂಬರೀಶ್ ತಮ್ಮ ಅಪಾರ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಆಯೋಜಿಸಿರುವ ಸಾರ್ವಜನಿಕ ಸಮಾವೇಶಕ್ಕೆ ಬೃಹತ್ ಜಾಥಾ ಮೂಲಕ ತೆರಳಿದರು.