ಪ್ರಧಾನಿಗಳು ತಾಕತ್ತಿದ್ದಲ್ಲಿ 40% ಕಮಿಷನ್ ಬಗ್ಗೆ ಮಾತನಾಡಲಿ - ಪೃಥ್ವಿ ರೆಡ್ಡಿ ಸವಾಲು

 ಬಿಜೆಪಿ ಸರ್ಕಾರದ ಅವ್ಯಾಹತ  40 % ಕಮಿಷನ್ ದಂಧೆಯ ಬಗ್ಗೆ  ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಲು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ  ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.

Written by - Sowmyashree Marnad | Edited by - Manjunath N | Last Updated : Sep 1, 2022, 05:29 PM IST
  • ಕೊರೋನಾ ಸಂಧರ್ಭದಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ಮಾಡಿರುವ ನೇರ ಆರೋಪವನ್ನು ಹೊತ್ತಿರುವ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಕೆ ಸುಧಾಕರ್ ಮೇಲೆ ಇದುವರೆವಿಗೂ ನಿಮ್ಮ ಇಡಿ ಸಿಬಿಐ ತನಿಖೆ ಮಾಡಲಿಲ್ಲ.
ಪ್ರಧಾನಿಗಳು ತಾಕತ್ತಿದ್ದಲ್ಲಿ 40% ಕಮಿಷನ್ ಬಗ್ಗೆ  ಮಾತನಾಡಲಿ - ಪೃಥ್ವಿ ರೆಡ್ಡಿ ಸವಾಲು  title=
file photo

ನವದೆಹಲಿ: ನಾಳೆ ರಾಜ್ಯಕ್ಕೆ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿರುವುದು ಅತ್ಯಂತ ಸ್ವಾಗತಾರ್ಹ ವಿಚಾರ,ಈ ಸಂದರ್ಭದಲ್ಲಿ ನ ಖಾವುಂಗಾ ನ ಖಾನೆ ದೂಂಗಾ ಎಂದು ಸಾರಿ ಸಾರಿ ಹೇಳುವ ಪ್ರಧಾನಿಗಳು ರಾಜ್ಯದಲ್ಲಿ ನಡೆಯುತ್ತಿರುವ ತಮ್ಮದೇ ಬಿಜೆಪಿ ಸರ್ಕಾರದ ಅವ್ಯಾಹತ  40 % ಕಮಿಷನ್ ದಂಧೆಯ ಬಗ್ಗೆ  ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಲು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ  ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.

ಮೂರು ವರ್ಷಗಳ ಹಿಂದೆ ಯಡಿಯೂರಪ್ಪ  ಮತ್ತೊಮ್ಮೆ ಮುಖ್ಯಮಂತ್ರಿಯಾಗಲೇಬೇಕೆಂಬ ಮಹದಾಸೆಯಿಂದ  ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಗಳನ್ನು ಖರೀದಿಸಿ ರಚಿಸಿದ ಅನೈತಿಕ ಸರ್ಕಾರದಲ್ಲಿ ಇಂದು ಮಂತ್ರಿ ಮಹೋದಯರುಗಳು ಅವ್ಯಾಹತವಾಗಿ ಭ್ರಷ್ಟಾಚಾರದಲ್ಲಿ ಮುಳುಗಿರುವುದು ಇಂದು  ರಾಷ್ಟ್ರವ್ಯಾಪಿ ವಿಚಾರವಾಗಿ ಕರ್ನಾಟಕಕ್ಕೆ ಕಪ್ಪು ಮಸಿ ಬಂದಂತಾಗಿದೆ ಎಂದು ಪೃಥ್ವಿ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಮೂಳೆ ಕ್ಯಾನ್ಸರ್ ಲಕ್ಷಣಗಳು: ಗಮನಹರಿಸಬೇಕಾದ 10 ಅಪಾಯಕಾರಿ ಸಂಕೇತಗಳಿವು

ಮುಂದುವರೆದು ಪೃಥ್ವಿರೆಡ್ಡಿ  ಮಾತನಾಡುತ್ತಾ , ಶಾಸಕರು ಗಳನ್ನು ಖರೀದಿಸಲು ಆಪರೇಷನ್ ಕಮಲಕ್ಕಾಗಿ ಖರ್ಚು ಮಾಡಿದ ನೂರಾರು ಕೋಟಿ ಅಕ್ರಮ ಹಣ ವರ್ಗಾವಣೆಯ ಬಗ್ಗೆ ಇದುವರೆವಿಗೂ ಯಾವುದೇ ಸಿಬಿಐ ಅಥವಾ ಇಡಿ ತನಿಖೆ ಆಗಿಲ್ಲ. ವರ್ಗಾವಣೆ ಸೇರಿದಂತೆ ಸರ್ಕಾರದ ಅನೇಕ ನೀತಿಗಳಲ್ಲಿ ಸಾಕಷ್ಟು ವರ್ಗಾವಣೆ ಭ್ರಷ್ಟಾಚಾರದಲ್ಲಿ ನಿರತರಾಗಿದ್ದ  ವಿಜಯೇಂದ್ರ ಹಾಗೂ ಯಡಿಯೂರಪ್ಪನವರ ಮೇಲೆ ಯಾವುದೇ ತನಿಖೆ ಆಗಲಿಲ್ಲ. 

ಕೊರೋನಾ ಸಂಧರ್ಭದಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ  ಮಾಡಿರುವ ನೇರ ಆರೋಪವನ್ನು ಹೊತ್ತಿರುವ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಕೆ ಸುಧಾಕರ್ ಮೇಲೆ ಇದುವರೆವಿಗೂ ನಿಮ್ಮ ಇಡಿ ಸಿಬಿಐ ತನಿಖೆ ಮಾಡಲಿಲ್ಲ. 

ಸಹಾಯಕ ಪ್ರಾಧ್ಯಾಪಕರು , ಪಿ ಎಸ್ ಐ ಹಗರಣ , ಟೂಲ್ ಕಿಟ್ ಖರೀದಿ ಹಗರಣದಲ್ಲಿ  ಮಂತ್ರಿ ಸಿ ಎನ್ ಅಶ್ವತ್ಥನಾರಾಯಣ ಹೆಸರು ಅನೇಕ ಬಾರಿ ಮಾಧ್ಯಮಗಳಲ್ಲಿ ಕೇಳಿ ಬಂದಿದ್ದರೂ ಸಹ ನಾಮಕಾವಸ್ತೆ ಸಿ ಐ ಡಿ ತನಿಖೆ ಮಾಡಿ ನೂರಾರು ಕೋಟಿ ಹಗರಣವನ್ನು ಕೇವಲ 4.78 ಕೋಟಿಯಷ್ಟು ಮಾತ್ರ ಹಣ ವರ್ಗಾವಣೆಯಾಗಿದೆ ಎಂದು ಚಾರ್ಜ್ ಶೀಟ್ ಸಲ್ಲಿಸಿದ ಕೀರ್ತಿ ನಿಮ್ಮ ಬಿಜೆಪಿ ಸರ್ಕಾರದ್ದಾಗಿದೆ. ಇವರ ಬಗ್ಗೆ ಯಾವುದೇ ಸಿಬಿಐ ಅಥವಾ ಇಡಿ ತನಿಖೆ ಆಗಲಿಲ್ಲ.

ಇದನ್ನೂ ಓದಿ :  ಅಧಿಕ ಕೊಲೆಸ್ಟ್ರಾಲ್‌ನ ಶತ್ರು ಈ ಹಸಿರುಕಾಳು: ಇದನ್ನು ನೆನೆಸಿ ತಿನ್ನುವುದರಿಂದ ಸಿಗುತ್ತೆ ಅಪಾರ ಪ್ರಯೋಜನ

40 % ಕಾಮಗಾರಿಯಲ್ಲಿ ನೇರ ಪಾತ್ರಧಾರಿಯಾಗಿ ರಾಜಿನಾಮೆ ನೀಡಿದ ಈಶ್ವರಪ್ಪನವರ ಮೇಲೆ ಯಾವುದೇ ಸಿಬಿಐ ಇಡಿ ತನಿಖೆ ಆಗಲಿಲ್ಲ.ಈ ಹಿಂದಿನ ಲೋಕಾಯುಕ್ತರು ತೋಟಗಾರಿಕಾ ಮಂತ್ರಿ ಮುನಿರತ್ನ ಮೇಲೆ 118 ಕೋಟಿಯಷ್ಟು ನಕಲಿ ಬಿಲ್ ಸೃಷ್ಟಿಸಿ ಹಣ ಪಡೆದಿರುವ ಬಗ್ಗೆ ವರದಿ ನೀಡಿದ್ದರೂ ಸಹ ಯಾವುದೇ ಸಿಬಿಐ ಇಡಿ ತನಿಖೆ ನೀವು ಮಾಡಲಿಲ್ಲ. 

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಕೆ ಆರ್ ಪುರ ದಲ್ಲಿ ಸರ್ಕಾರಿ ಗೋಮಾಳ 37 ಎಕರೆ  ಅಕ್ರಮದ ಬಗ್ಗೆ ನಿಮ್ಮ ಇಡಿ ಮತ್ತು ಸಿಬಿಐ ತನಿಖೆ ಆಗಲೇ ಇಲ್ಲ.ಸರ್ಕಾರಿ ಜಮೀನುಗಳ ಅಕ್ರಮ ಹಂಚಿಕೆ ವಿಷಯದಲ್ಲಿ ಕಂದಾಯ ಇಲಾಖೆಯಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿದ್ದರೂ ಸಹ ಯಾವುದೇ ಹೇಳಿ ಸಿಬಿಐ ತನಿಖೆ ಆಗಲಿಲ್ಲ 

ಬೆಂಗಳೂರಿನ ರಸ್ತೆಗಳ ಅಭಿವೃದ್ಧಿಗಾಗಿ ಕಳೆದ 5 ವರ್ಷದಲ್ಲಿ 20 ಸಾವಿರ ಕೋಟಿ ರುಪಾಯಿಗಳಷ್ಟು ಭ್ರಷ್ಟಾಚಾರ ಮತ್ತು  ಅಮೃತ್ ನಗರೋತ್ಥಾನ - ನಗರೋತ್ಥಾನ ಯೋಜನೆಯಲ್ಲಿ  ಅಕ್ರಮಗಳು ನಡೆದಿದ್ದರೂ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಹೊಣೆಯನ್ನು ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಸಹ ಯಾವುದೇ  ನಿಮ್ಮ ಸಿಬಿಐ ಅಥವಾ ಇಡಿ ಇನ್ನೂ ಸಹ ತನಿಖೆ ನಡೆಸಿಲ್ಲ.

ಬಿಬಿಎಂಪಿ, ಬಿಡಿಎ ,ಕೆಆರ್ ಐಡಿಎಲ್  ಸೇರಿದಂತೆ ಸರ್ಕಾರದ ಎಲ್ಲ ಇಲಾಖೆಗಳಲ್ಲಿಯೂ ಇಂದು ಅವ್ಯಾಹತ ಭ್ರಷ್ಟಾಚಾರ ನಡೆಯುತ್ತಿದೆ. ಆದರೂ ಯಾವುದೇ ಸಿಬಿಐ ಅಥವಾ ಇಡಿ ದಾಳಿ ಆಗಲಿಲ್ಲ.ಸತತ 4 ವರ್ಷಗಳಿಂದ ನೆರೆ ಹಾವಳಿಗೀಡಾದ ರಾಜ್ಯದ  ಜನತೆಗೆ  ಶಾಶ್ವತ ಸೂರಿನ ಭಾಗ್ಯ ವೇ ಒದಗಲಿಲ್ಲ. ವಸತಿ ಇಲಾಖೆಯಲ್ಲಿ ಇದುವರೆವಿಗೂ ಒಂದೇ ಒಂದು ಮನೆಯನ್ನೂ ಸಹ ಕಟ್ಟಿ ಕೊಡಲು ಸಾಧ್ಯವಾಗಿಲ್ಲ. 

ಬೆಂಗಳೂರು - ಮೈಸೂರು ದಶಪಥ ಹೆದ್ದಾರಿ ಯೋಜನೆಯಲ್ಲಿ ನೂರಾರು ಕೋಟಿ ಭ್ರಷ್ಟಾಚಾರವಾಗಿ ಕಳಪೆ ಕಾಮಗಾರಿಯಿಂದ ಇಂದು ವಾಹನ ಸಂಚಾರವನ್ನು ಬಂದ್ ಮಾಡುವಂತಹ ಪರಿಸ್ಥಿತಿ ಇದ್ದರೂ  ಸಹ ಯಾರ ಮೇಲೂ ಇದುವರೆವಿಗೂ ಸಿಬಿಐ ಅಥವಾ ಇಡಿ ದಾಳಿ ಆಗಲಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಪೃಥ್ವಿ ರೆಡ್ಡಿಯವರು ವಿವರವಾಗಿ ಮಾತನಾಡಿದರು.

ಇದನ್ನೂ ಓದಿ : ಕೇವಲ ಒಂದು ಹಪ್ಪಳಕ್ಕಾಗಿ ರಣಾಂಗಣವಾಯಿತು ಮದುವೆ ಮನೆ, ಹೊಡೆದಾಟದ ವಿಡಿಯೋ ಇಲ್ಲಿದೆ

ಮುಂದುವರಿದು  ಮಾತನಾಡಿ  ಸರ್ಕಾರದ ಪ್ರಮುಖ ಮಂತ್ರಿಗಳಾದ ಅರಗ ಜ್ಞಾನೇಂದ್ರ, ಜೆಸಿಮಾಧುಸ್ವಾಮಿ, ಹಾಲಪ್ಪ ಆಚಾರ್, ಬಿ ಸಿ ಪಾಟೀಲ್, ಶ್ರೀರಾಮುಲು, ಮುನಿರತ್ನ ,ಗೋಪಾಲಯ್ಯ, ಎಸ್ ಅಂಗಾರ, ಕೆ ಸಿ ನಾರಾಯಣಗೌಡ, ಎಸ್ಟಿಸೋಮಶೇಖರ್, ಎಂಟಿಬಿ ನಾಗರಾಜ್ ರವರುಗಳು ಇದುವರೆಗೂ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿಲ್ಲ. ಕನ್ನಡಿಗರು ರಾಷ್ಟ್ರದ ಅಭಿವೃದ್ಧಿಗೆ ಅತಿ ಹೆಚ್ಚಿನ ತೆರಿಗೆಯನ್ನು ನೀಡುತ್ತಿದ್ದರೂ  ತಮ್ಮದೇ ಪಕ್ಷದವರ ಭ್ರಷ್ಟಾಚಾರಿಗಳಗಳು ಕನ್ನಡಿಗರ  ತೆರಿಗೆ ಹಣ ಲೂಟಿ ಮಾಡುತ್ತಿರುವುದನ್ನು  ತಡೆಯುವಲ್ಲಿ ಕಿಂಚಿತ್ತಾದರೂ ಕಾಳಜಿ ಪ್ರಧಾನಿಗಳಿಗೆ ಇದ್ದಲ್ಲಿ ತಮ್ಮ ಭಾಷಣದಲ್ಲಿ  ಈ ಬಗ್ಗೆ ಭ್ರಷ್ಟಾಚಾರವನ್ನು ತಡೆಯಲು ರಾಜ್ಯದ ಜನತೆಯನ್ನುದ್ದೇಶಿಸಿ  ಮಾತನಾಡಲು ಪೃಥ್ವಿರೆಡ್ಡಿ  ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ  ಮಾತನಾಡಿ ಮೋದಿಯವರು ಕರ್ನಾಟಕಕ್ಕೆ ಆಗಮಿಸುತ್ತಿರುವ ಈ ವಿಶೇಷ ಸಂದರ್ಭದಲ್ಲಿ ನೆರೆ ಹಾವಳಿಗೆ ತುತ್ತಾಗಿರುವ ಪ್ರದೇಶಗಳ ಸಂತ್ರಸ್ಥರಿಗೆ ನೆರೆ ಪರಿಹಾರ ಹಾಗೂ ಶಾಶ್ವತ ಸೂರು ಒದಗಿಸುವ ಯೋಜನೆ,

ರಾಜ್ಯಕ್ಕೆ ಬರಬೇಕಾಗಿರುವ ಬಾಕಿ ಇರುವ ಜಿಎಸ್ಟಿ ಮೊತ್ತವನ್ನು ಕೂಡಲೇ ಬಿಡುಗಡೆ , ಮೇಕೆದಾಟು ಯೋಜನೆಗಾಗಿ ಕೇಂದ್ರ ಪರಿಸರ ಇಲಾಖೆಯ ಅನುಮತಿ ಹಾಗೂ ಉತ್ತರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಗಳನ್ನು ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ  ರಾಜಕೀಯ ಚಟುವಟಿಕೆಗಳ ಅಧ್ಯಕ್ಷ ಚನ್ನಪ್ಪಗೌಡ ನೆಲ್ಲೂರು ಸೇರಿದಂತೆ ಅನೇಕ ಮುಖಂಡರುಗಳು  ಹಾಜರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News