ಬೆಂಗಳೂರು: ಎಂಜಿನಿಯರಿಂಗ್ ಹಾಗೂ ಇತರೆ ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶಾವಕಾಶ ಕಲ್ಪಿಸುವ 2018-19ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಇಂದು(ಜೂನ್ 1) ರಂದು ಮಧ್ಯಾಹ್ನ 1 ಗಂಟೆಗೆ ಪ್ರಕಟವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
ಸಿಇಟಿ ಫಲಿತಾಂಶವು ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ ಹಾಗೂ ಇತರ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಲಭ್ಯವಾಗಲಿವೆ.
ಮಧ್ಯಾಹ್ನ 1 ಗಂಟೆಗೆ ಉನ್ನತ ಶಿಕ್ಷಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಂದ ಫಲಿತಾಂಶ ಪ್ರಕಟವಾಗಲಿದೆ.
ಮಧ್ಯಾಹ್ನ 3 ಗಂಟೆ ನಂತರ ಫಲಿತಾಂಶವನ್ನು http://kea.kar.nic.in http://cet.kar.nic.in ಮತ್ತು http://karresults.nic.in ವೆಬ್ ಸೈಟ್ ಗಳಲ್ಲಿ ನೋಡಬಹುದಾಗಿದೆ.
ರಾಜ್ಯದಲ್ಲಿ ಈ ವರ್ಷ ನಡೆದಿದ್ದ ಸಿಇಟಿ ಪರೀಕ್ಷೆಯಲ್ಲಿ ಒಟ್ಟು 1,98,639 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಸಿಇಟಿ ದಾಖಲಾತಿ ಪರಿಶೀಲನೆಗೆ ರಾಜ್ಯಾದ್ಯಂತ 16 ನೋಡಲ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸಿಇಟಿ ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಾಯಿಸಿಕೊಂಡು ರ್‍ಯಾಂಕ್ ಆಧಾರದ ಮೇಲೆ ಮೂಲ ದಾಖಲೆಗಳನ್ನು ದೃಢೀಕರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಸಿಇಟಿ ರ್‍ಯಾಂಕ್ ಆಧಾರದ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಗದಿಪಡಿಸಿರುವ ವೇಳಾಪಟ್ಟಿಗೆ ಅನುಸಾರವಾಗಿ ರಾಜ್ಯದ ನೋಡಲ್ ಕೇಂದ್ರಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು.
ವಿದ್ಯಾರ್ಥಿಗಳು ನೋಡಲ್ ಕೇಂದ್ರಕ್ಕೆ ಹೋಗುವ ಮುನ್ನ ರ್‍ಯಾಂಕ್, ದಾಖಲೆಗಳ ಪರಿಶೀಲನೆಯ ದಿನಾಂಕ ಮತ್ತು ಸಮಯವನ್ನು ಖಚಿತಪಡಿಸಿಕೊಳ್ಳಬೇಕು. ಪರಿಶೀಲನೆ ಪ್ರಕ್ರಿಯೆ ದಿನಾಂಕ ಮತ್ತು ಸಮಯಕ್ಕೆ ಸಂಬಂಧಿಸಿದಂತೆ ರ್‍ಯಾಂಕ್ ಗಳಿಸಿರುವ ಅರ್ಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಮಾಹಿತಿ ಕಳಿಸುವುದಿಲ್ಲ.
ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ, ಧಾರವಾಡ, ಬಳ್ಳಾರಿ, ದಾವಣಗೆರೆ, ಬೀದರ್, ಕೊಪ್ಪಳ, ಕಾರವಾರ, ಬೆಳಗಾವಿ, ಕಲಬುರಗಿ, ವಿಜಯಪುರ, ರಾಯಚೂರು ಮತ್ತು ತುಮಕೂರಿನಲ್ಲಿ ನೋಡಲ್ ಕೇಂದ್ರಗಳಿವೆ.
ಸೀಟುಗಳ ಆಯ್ಕೆ ವಿಧಾನ ಸೇರಿದಂತೆ ಸಿಇಟಿಯ ಸಂಪೂರ್ಣ ಮಾಹಿತಿಯನ್ನು ನೋಡಲ್ ಕೇಂದ್ರಗಳಲ್ಲಿ ನೀಡಲಾಗುತ್ತದೆ. ಸರ್ಕಾರಿ ಸೀಟುಗಳಿಗೆ ಪ್ರವೇಶ ಕೋರುವ ವಿದ್ಯಾರ್ಥಿಗಳು ಅಗತ್ಯವಿರುವ ದಾಖಲೆಗಳ ಮೂಲಪ್ರತಿಯನ್ನು ಮತ್ತು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿರುವ ದಾಖಲೆಗಳ ನಕಲು ಪ್ರತಿ ಜತೆಗೆ ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರವನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಲು ಮರೆಯದಿರಿ.