ಬೆಂಗಳೂರು: ಭಾನುವಾರದಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನ 14 ಬಂಡಾಯ ಶಾಸಕರನ್ನು ಅನರ್ಹಗೊಳಿಸಿರುವ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರ ಕ್ರಮವನ್ನು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ವಿಶೇಷವೆಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪೀಕರ್ ನಿರ್ಣಯವನ್ನು ಸ್ವಾಗತಿಸಿ ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕೆ.ಎಸ್.ಈಶ್ವರಪ್ಪ' 'ಇವರಿಗೆ ಬೇಕು ಎಂದರೆ ಅರ್ಧ ರಾತ್ರಿಲಿ ಕೋರ್ಟ್ ಓಪನ್ ! ಭಾನುವಾರ ಇದ್ದರೂ ಸ್ಪೀಕರ್ ಆಫೀಸ್ ಓಪನ್!' ಪ್ರಜಾಪ್ರಭುತ್ವದ ಆಡಳಿತ...'ಎಂದು ಮರು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಇವರಿಗೆ ಬೇಕು ಎಂದರೆ ಅಧ೯ರಾತ್ರಿಲಿ ಕೋಟ್೯ ಓಪನ್ !
ಭಾನುವಾರ ಇದ್ದರೂ ಸ್ಪೀಕರ್ ಆಫೀಸ್ ಓಪನ್!
ಪ್ರಜಾಪ್ರಭುತ್ವದ ಆಡಳಿತ.... https://t.co/MFaDIpRRlz
— K S Eshwarappa (@ikseshwarappa) July 28, 2019
ಸಿದ್ದರಾಮಯ್ಯನವರು ಸ್ಪೀಕರ್ ಅವರ ನಿರ್ಣಯವನ್ನು ಸ್ವಾಗತಿಸಿ ' ಮಾನ್ಯ ಸಭಾಧ್ಯಕ್ಷರು ಎಲ್ಲ 14 ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆಯಡಿ ಅನರ್ಹಗೊಳಿಸಿ ಹೊರಡಿಸಿರುವ ಆದೇಶ ಪ್ರಜಾಪ್ರಭುತ್ವಕ್ಕೆ ಸಂದ ನೈಜ ಗೆಲುವು. ಸ್ವಾರ್ಥ ಸಾಧನೆ, ಅಧಿಕಾರದಾಸೆಯಿಂದ ಜನಾದೇಶವನ್ನು ಧಿಕ್ಕರಿಸಿ ತಮ್ಮನ್ನು ತಾವು ಮಾರಿಕೊಳ್ಳುವ ಹೀನ ಸಂಸ್ಕೃತಿಗೆ ಈ ತೀರ್ಪು ಇತಿಶ್ರೀ ಹಾಡಲಿದೆ ಎಂಬುದು ನನ್ನ ನಂಬಿಕೆ' ಎಂದು ಟ್ವೀಟ್ ಮಾಡಿದ್ದರು.
ಇನ್ನೊಂದು ಟ್ವೀಟ್ ನಲ್ಲಿ ಅವರು 'ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಪದವಿ, ಅಧಿಕಾರ ರಾಜಕಾರಣದಲ್ಲಿ ಎಂದಿಗೂ ಶಾಶ್ವತವಲ್ಲ. ಮುಂದಿನ ಪೀಳಿಗೆಯ ರಾಜಕಾರಣಕ್ಕೆ ನಾವು ಮಾದರಿಯಾಗಿ ಏನನ್ನು ಬಿಟ್ಟುಹೋಗುತ್ತೇವೆ ಎಂಬುದು ಮುಖ್ಯ. ಸಭಾಧ್ಯಕ್ಷರ ಇಂದಿನ ನಿರ್ಣಯ ಅವಕಾಶವಾದಿ ರಾಜಕಾರಣಕ್ಕೆ ನೀಡಿರುವ ಕೊಡಲಿ ಏಟು. ಅವರ ಈ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ' ಎಂದು ಸಿದ್ದರಾಮಯ್ಯ ಹೇಳಿದ್ದರು.