5 ವರ್ಷದಲ್ಲಿ 25 ಕೋಟಿ ಸಸಿ ನೆಡುವ ಸಂಕಲ್ಪ: ಸಚಿವ ಈಶ್ವರ ಖಂಡ್ರೆ

Ishwara Khandre: ತಾವು ಅಧಿಕಾರ ವಹಿಸಿಕೊಳ್ಳುವ ಮೊದಲೇ ರೈತರಿಗೆ ಪೂರೈಕೆ ಮಾಡುತ್ತಿದ್ದ ಸಸಿಗಳ ದರವನ್ನು ಹೆಚ್ಚಳ ಮಾಡಲಾಗಿತ್ತು. ಈ ಬಗ್ಗೆ ಪುನರ್ ಪರಿಶೀಲನೆ ಮಾಡಿ 5x8 ಗಿಡಗಳಿಗೆ 2 ರೂ., 6 x8 ಗಿಡಗಳಿಗೆ 3 ರೂ. ಮತ್ತು 8 x12 ಗಿಡಗಳಿಗೆ 6 ರೂ. ನಿಗದಿ ಮಾಡಲಾಗಿದೆ ಎಂದು ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.

Written by - Prashobh Devanahalli | Edited by - Puttaraj K Alur | Last Updated : Jun 23, 2023, 04:44 PM IST
  • ಜುಲೈ 1ರಿಂದ 7ರವರೆಗೆ ವನಮಹೋತ್ಸವ ಆಚರಣೆ
  • 5 ವರ್ಷಗಳಲ್ಲಿ 25 ಕೋಟಿ ಸಸಿಗಳನ್ನು ನೆಡುವ ಸಂಕಲ್ಪ
  • 1 ವಾರದಲ್ಲಿ 1 ಕೋಟಿ ಗಿಡ ನೆಡಲು ಯೋಜನೆ, ಜಿಯೋ ಟ್ಯಾಗ್ ಮೂಲಕ ಆಡಿಟ್
5 ವರ್ಷದಲ್ಲಿ 25 ಕೋಟಿ ಸಸಿ ನೆಡುವ ಸಂಕಲ್ಪ: ಸಚಿವ ಈಶ್ವರ ಖಂಡ್ರೆ title=
ಜುಲೈ 1ರಿಂದ 7ರವರೆಗೆ ವನಮಹೋತ್ಸವ

ಬೆಂಗಳೂರು: ಪ್ರಸಕ್ತ ವರ್ಷ 5 ಕೋಟಿ ಸಸಿಗಳನ್ನು ರಾಜ್ಯಾದ್ಯಂತ ನೆಟ್ಟು, ಅವು ಮರವಾಗಿ ಬೆಳೆಯುವಂತೆ ಕಾಳಜಿ ವಹಿಸುವುದರ ಜೊತೆಗೆ ಎಷ್ಟು ಸಸಿಗಳು ಉಳಿದಿವೆ ಎಂಬ ಬಗ್ಗೆ ಜಿಯೋ ಟ್ಯಾಗ್ ಮೂಲಕ ಆಡಿಟ್ ಮಾಡಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದ್ದಾರೆ.

ವಿಕಾಸಸೌಧದ ಶುಕ್ರವಾರ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿಗಳ ಸಿಇಓಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಸಚಿವರು,  ಅರಣ್ಯ ವ್ಯಾಪ್ತಿ, ಹಸಿರು ವ್ಯಾಪ್ತಿ ಹೆಚ್ಚಿಸುವುದು ಸರ್ಕಾರದ ಗುರಿಯಾಗಿದೆ. ಒಟ್ಟಾರೆ ಭೌಗೋಳಿಕ ಪ್ರದೇಶದ ಪೈಕಿ ಅರಣ್ಯ ಹಾಗೂ ಹಸಿರು ವ್ಯಾಪ್ತಿ ಕನಿಷ್ಠ ಶೇ.33ಕ್ಕೆ ಇರಬೇಕು ಎಂಬುದು ಮಾನದಂಡ. ಆದರೆ ಪ್ರಸ್ತುತ ರಾಜ್ಯದಲ್ಲಿ ಈ ವ್ಯಾಪ್ತಿ ಸುಮಾರು 20.19ರಷ್ಟು ಮಾತ್ರವೇ ಇದ್ದು, ಸರ್ಕಾರ ವ್ಯಾಪ್ತಿ ಹೆಚ್ಚಳವನ್ನು ಆದ್ಯ ಕರ್ತವ್ಯವೆಂದು ಪರಿಗಣಿಸಿದೆ ಎಂದರು.

ನಾವು ಪ್ರಕೃತಿ-ಪರಿಸರ ರಕ್ಷಿಸಿದರೆ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಅರಣ್ಯ ಇಲಾಖೆ ಮುಖ್ಯವಾಗಿ ಅರಣ್ಯ ಸಂರಕ್ಷಿಸಬೇಕು. ಆ ಕಾರ್ಯವನ್ನು ಇಲಾಖೆ ಮಾಡುತ್ತದೆ. ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸಲು ಯೋಜನೆ ರೂಪಿಸಿದ್ದು, ಶಿಕ್ಷಣ ಇಲಾಖೆಯೂ ಸೇರಿದಂತೆ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ಪ್ರಸಕ್ತ ವರ್ಷ 5 ಕೋಟಿ ಸಸಿ ನೆಟ್ಟು, ಪೋಷಿಸುವ ಮೂಲಕ ಯೋಜನೆಯನ್ನು ಯಶಸ್ವಿಗೊಳಿಸಲಾಗುವುದು. ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಎಷ್ಟು ಮಹತ್ವದ್ದು ಎಂಬುದು ಇಡೀ ಮಾನವ ಕುಲಕ್ಕೆ ಅರಿವಾಯಿತು. ಹೀಗಾಗಿ ನಮಗೆ ಪ್ರಾಣವಾಯು ನೀಡುವ ವೃಕ್ಷಗಳನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದ್ದು, ಮಾಧ್ಯಮಗಳು ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಬೇಕು ಎಂದು ಹೇಳಿದರು.  

ಇದನ್ನೂ ಓದಿ: ಇನ್ನೊಂದು ವಾರದಲ್ಲಿ 3,500 ಪೊಲೀಸ್ ಕಾನ್‌ಸ್ಟೇಬಲ್‌ ನೇಮಕ: ಗೃಹ ಸಚಿವ ಡಾ.ಜಿ.ಪರಮೇಶ್ವರ್

ಜುಲೈ 1ರಿಂದ  7 ದಿನಗಳ ಕಾಲ ಆಚರಿಸಲಾಗುತ್ತಿರುವ ವನಮಹೋತ್ಸವಕ್ಕಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯ್ತಿಯ ಸಿಇಓಗಳೂ ಇದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಜಿಲ್ಲೆಯ ಇತರ ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ರೂಪಿಸಲಾಗಿದೆ. ಹಸಿರು ವ್ಯಾಪ್ತಿ ಹೆಚ್ಚಳ ಕೇವಲ ಅರಣ್ಯ ಇಲಾಖೆ ಒಂದರಿಂದ ಆಗುವ ಕಾರ್ಯವಲ್ಲ. ಇದರಲ್ಲಿ ಇಡೀ ಸಮಾಜ ಪಾಲ್ಗೊಳ್ಳಬೇಕು. ಪ್ರತಿಯೊಬ್ಬರೂ ಸಸಿ ನೆಟ್ಟು ಬೆಳೆಸುವುದು ತಮ್ಮ ಕರ್ತವ್ಯವೆಂದು ತಿಳಿಯಬೇಕು. ಆಬಾಲವೃದ್ಧರಾದಿಯಾಗಿ ಎಲ್ಲರೂ ಕೈಜೋಡಿಸಿದರೆ ಇದು ಜನಾಂದೋಲನವಾಗುತ್ತದೆ ಎಂದರು.

ಇಂದು ಹಸಿರು ವ್ಯಾಪ್ತಿ ಕ್ಷೀಣಿಸುತ್ತಿರುವುದರ ಪರಿಣಾಮ ಮತ್ತು ಕೈಗಾರಿಕೆಗಳು, ವಾಹನಗಳು ಮತ್ತು ಮನೆಗಳಲ್ಲಿ ಎಲೆಕ್ಟ್ರಿಕ್ ಉಪಕರಣಗಳಿಂದ ಹೊರಹೊಮ್ಮುವ ಶಾಖ, ತ್ಯಾಜ್ಯ, ಹೊಗೆಯಿಂದ ಹಸಿರು ಮನೆ ಅನಿಲ ಪ್ರಮಾಣ ಹೆಚ್ಚಾಗಿ ಓಜೋನ್ ಪದರಕ್ಕೂ ಹಾನಿಯಾಗಿ ಹವಾಮಾನ ವೈಪರೀತ್ಯ ಆಗುತ್ತಿರುವುದು ನಮಗೆಲ್ಲಾ ತಿಳಿದ ವಿಷಯವಾಗಿದೆ. ಕುಡಿಯುವ ನೀರು, ಸೇವಿಸುವ ಗಾಳಿ ಮಲಿನವಾಗುತ್ತಿದೆ. ಈ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಬೇಕು. ನಾವೆಲ್ಲರೂ ಸೇರಿ ಪ್ರಕೃತಿ ಪರಿಸರ ಉಳಿಸಬೇಕು. ನಮ್ಮ ಅರಣ್ಯ ಇಲಾಖೆ 5 ಕೋಟಿ ಸಸಿ ನೆಡಲೆಂದೇ ತನ್ನ ನರ್ಸರಿಗಳಲ್ಲಿ ವ್ಯಾಪಕ ಶ್ರೇಣಿಯ ಸಸಿ ಬೆಳೆಸಿದೆ.  2.5 ಕೋಟಿಯಷ್ಟು ಸಸಿಗಳನ್ನು ಅರಣ್ಯ ವ್ಯಾಪ್ತಿಯಲ್ಲಿ ಇಲಾಖೆಯ ವತಿಯಿಂದ ನೆಡಲಾಗುತ್ತಿದೆ ಎಂದು ಖಂಡ್ರೆ ಹೇಳಿದರು.

ದರ ಇಳಿಕೆ: ತಾವು ಅಧಿಕಾರ ವಹಿಸಿಕೊಳ್ಳುವ ಮೊದಲೇ ರೈತರಿಗೆ ಪೂರೈಕೆ ಮಾಡುತ್ತಿದ್ದ ಸಸಿಗಳ ದರವನ್ನು ಹೆಚ್ಚಳ ಮಾಡಲಾಗಿತ್ತು. ಈ ಬಗ್ಗೆ ಪುನರ್ ಪರಿಶೀಲನೆ ಮಾಡಿ 5x8 ಗಿಡಗಳಿಗೆ 2 ರೂ., 6 x8 ಗಿಡಗಳಿಗೆ 3 ರೂ. ಮತ್ತು 8 x12 ಗಿಡಗಳಿಗೆ 6 ರೂ. ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಹೆಲ್ತ್ ಕಾರ್ಡ್’ಗೆ ಹೊಸ ರೂಪ ನೀಡಲು ಆರೋಗ್ಯ ಇಲಾಖೆ ಸಜ್ಜು

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲೂ ಗ್ರಾಮೀಣ ಪ್ರದೇಶದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅದೇ ರೀತಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ  ಸ್ಥಳೀಯ ನಗರ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.

ಒಣ ಮಹೋತ್ಸವ ಆಗಲು ಬಿಡುವುದಿಲ್ಲ: ಯಾವುದೇ ಕಾರಣಕ್ಕೂ ವನಮಹೋತ್ಸವವನ್ನು ಒಣ ಮಹೋತ್ಸವ ಆಗಲು ಬಿಡುವುದಿಲ್ಲ. ನೆಟ್ಟ ಸಸಿಗಳು ಜೀವಂತ ಉಳಿಯಬೇಕು, ಬೆಳೆಯಬೇಕು. ಇದಕ್ಕಾಗಿ ಜಿಯೋ ಟ್ಯಾಗ್ ಮೂಲಕ ಆಡಿಟ್ ಮಾಡಿಸಲಾಗುವುದು, ಅಗತ್ಯ ಬಿದ್ದರೆ 3ನೇ ವ್ಯಕ್ತಿಯಿಂದ ಕೂಡ ಆಡಿಟ್ ಮಾಡಿಸಲಾಗುವುದು. ಈ ಬಾರಿ ನೆಟ್ಟ ಗಿಡಗಳ ಪೈಕಿ ಕನಿಷ್ಠ ಶೇ.80ರಷ್ಟು ಜೀವಂತ ಉಳಿಸಿ ಬೆಳೆಸುವುದು ನಮ್ಮ ಉದ್ದೇಶವಾಗಿದೆ ಎಂದ ಅವರು, ಅಕೇಶಿಯಾ ಮತ್ತು ನೀಲಗಿರಿ ಗಿಡಗಳಿಂದಾಗುವ ದುಷ್ಪರಿಣಾಮದ ಬಗ್ಗೆಯೂ ಕ್ರಮ ವಹಿಸುವ ಭರವಸೆ ನೀಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News