ಬೆಂಗಳೂರು: ತೆರಿಗೆ ಇಲಾಖೆ ಅಧಿಕಾರಿಗಳು ಸಾಕಷ್ಟು ತೊಂದರೆ ಕೊಡುತ್ತಿದ್ದಾರೆ. ನನಗಷ್ಟೇ ಅಲ್ಲ, ನನ್ನ ಸಂಬಂಧಿಕರಿಗೂ ಕಿರುಕುಳ ಕೊಡುತ್ತಿದ್ದಾರೆ. ನನ್ನನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದಾರೆ ಎಂದು ನನಗೆ ಗೊತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಐಟಿ ದಾಳಿ ನಡೆದ ವೇಳೆ ಅಘೋಷಿತ ಆಸ್ತಿ ಪತ್ತೆ ಸಂಬಂಧ ತನಿಖೆ ವೇಳೆ ಡಿಕೆಶಿ ಅವರ ಆಪ್ತ ದೆಹಲಿಯ ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ಎನ್ ಅವರ ಬಳಿ ಡೈರಿಯೊಂದು ಪತ್ತೆಯಾಗಿದ್ದು, ಅದರಲ್ಲಿ ಹಲವು ಆಕ್ರಮ ಹಣಕಾಸು ವ್ಯವಹಾರಗಳ ವಿಚಾರಗಳನ್ನು ಐಟಿ ಪತ್ತೆ ಹಚ್ಚಿರುವ ಕುರಿತು ವರದಿಯಾಗಿದೆ. ಡೈರಿಯಲ್ಲಿ ಹಲವು ಕೋಡ್ ವರ್ಡ್‌ಗಳು ಮತ್ತು ಇತರರಿಗೆ ಹಣ ಸಂದಾಯವಾಗಿರುವ ಕುರಿತು ವಿವರಗಳಿವೆ ಎಂದು ತಿಳಿದುಬಂದಿತ್ತು
ಈ ಸಂಬಂಧ ಆರ್ಥಿಕ ಅಪರಾಧ ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ಮಂಗಳವಾರ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ವಿಚಾರಣೆಗೆ ಹಾಜರಾಗಿ ಎಂದು ನೊಟೀಸ್ ಬಂದಿದೆ. ಸಮನ್ಸ್ ಬಂದಿಲ್ಲ.ಯಾರಿಗೆ ಏನೇನು ಅನಿಸುತ್ತದೆಯೋ ಅದನ್ನು ಮಾಡಲಿ, ಕಾನೂನಿನ ಮೂಲಕ ಹೋರಾಡುತ್ತೇನೆ, ನಂಗೆ ಕಾನೂನಿನಲ್ಲಿ ನಂಬಿಕೆಯಿದೆ ಎಂದು ಹೇಳಿದರು.
ಮುಂದುವರೆದು ಮಾತಂಡಿದ ಅವರು, 'ನಮ್ಮತ್ರವೂ ಹಲವು ಡೈರಿಗಳಿವೆ. ನನಗೆ, ನನ್ನ ಸಹೋದರ, ತಾಯಿಗೆ ಎಲ್ಲರಿಗೂ ನೊಟೀಸ್‌ಗಳನ್ನು ನೀಡಲಾಗುತ್ತಿದೆ. ನಾನೊಬ್ಬನೇ ಇರುವುದೆ? ಬೇರೆಯವರು ಇಲ್ಲವೆ?. ನನ್ನಷ್ಟು ಕಿರುಕುಳ ಯಾರಿಗೂ ನೀಡಿಲ್ಲ. ಬಹಳಷ್ಟು ಹೆಸರು ಕೇಳಿ ಬರುತ್ತವೆ, ನಮ್ಮ ಪಕ್ಷದ ಹೆಸರೂ ಬಂದಿದೆ. ನಾನು ಕೊನೆವರೆಗೆ ಕಾದು ನೋಡುತ್ತೇನೆ. ನನಗೆ ಎಲ್ಲಾ ಗೊತ್ತಿದೆ, ಅದರ ಮರ್ಮ ಏನೆಂದು ಕೊನೆಗೆ ಹೇಳುತ್ತೇನೆ' ಎಂದರು.