CN Ashwath Narayan : 'GFGC ಉಪನ್ಯಾಸಕರ ನಿಯೋಜನೆ ರದ್ದತಿಗೆ ವಿದ್ಯಾರ್ಥಿಗಳ ಹಿತವೇ ಕಾರಣ'

ಬೋಧಕರ ನಿಯೋಜನೆಯನ್ನು ಏಕಾಏಕಿ ಮಾಡಲಾಗಿದೆ ಎಂದು ಎಂಎಲ್ಸಿ ಮರಿತಿಬ್ಬೇಗೌಡ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು. ಈ ಕುರಿತು ಹಲವು ಸುತ್ತಿನ ಮಾತುಕತೆಗಳ ನಡೆದಿವೆ ಎಂದು ಸಚಿವರು ಪ್ರತಿಕ್ರಿಯಿಸಿದರು. ಮರಿತಿಬ್ಬೇಗೌಡರು ನಡೆಸಿರುವ ಧರಣಿ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿರುವ ಅವರು ಹೀಗೆಂದಿದ್ದಾರೆ. 

Written by - Prashobh Devanahalli | Last Updated : May 9, 2022, 11:11 PM IST
  • ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕರ ನಿಯೋಜನೆಯನ್ನು ರದ್ದು
  • ಎಲ್ಲ ಪಕ್ಷಗಳ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ವಿಧಾನ‌ಮಂಡಲ ಅಧಿವೇಶನ
  • ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಸ್ಪಷ್ಟನೆ
CN Ashwath Narayan : 'GFGC ಉಪನ್ಯಾಸಕರ ನಿಯೋಜನೆ ರದ್ದತಿಗೆ ವಿದ್ಯಾರ್ಥಿಗಳ ಹಿತವೇ ಕಾರಣ' title=

ಬೆಂಗಳೂರು : ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕರ ನಿಯೋಜನೆಯನ್ನು ರದ್ದುಪಡಿಸಿ, ಅವರನ್ನೆಲ್ಲ ಮೂಲಕಾಲೇಜುಗಳಿಗೆ ಕಳಿಸುವಂತೆ ಮರಿತಿಬ್ಬೇಗೌಡರೂ ಸೇರಿದಂತೆ ಎಲ್ಲ ಪಕ್ಷಗಳ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ವಿಧಾನ‌ಮಂಡಲ ಅಧಿವೇಶನದಲ್ಲಿ ಆಗ್ರಹಿಸಿದ್ದರು. ಅವರ ಮನವಿಗೆ ಸ್ಪಂದಿಸಿ ಉನ್ನತ ಶಿಕ್ಷಣ ಇಲಾಖೆಯು ಬೋಧಕರ ನಿಯೋಜನೆಯನ್ನು ರದ್ದುಪಡಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದ್ದಾರೆ. 

ಬೋಧಕರ ನಿಯೋಜನೆಯನ್ನು ಏಕಾಏಕಿ ಮಾಡಲಾಗಿದೆ ಎಂದು ಎಂಎಲ್ಸಿ ಮರಿತಿಬ್ಬೇಗೌಡ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು. ಈ ಕುರಿತು ಹಲವು ಸುತ್ತಿನ ಮಾತುಕತೆಗಳ ನಡೆದಿವೆ ಎಂದು ಸಚಿವರು ಪ್ರತಿಕ್ರಿಯಿಸಿದರು. ಮರಿತಿಬ್ಬೇಗೌಡರು ನಡೆಸಿರುವ ಧರಣಿ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿರುವ ಅವರು ಹೀಗೆಂದಿದ್ದಾರೆ. 

ಇದನ್ನೂ ಓದಿ : ಬೆಂಗಳೂರಿನ ಕೇಂದ್ರ ಕಾರಾಗೃಹದ ಕೈದಿಗಳಿಗೆ ಮಹರ್ಷಿ ಶ್ರೀ ಅರವಿಂದರ ತತ್ವಬೋಧನೆ

2021ರ ವರ್ಗಾವಣೆ ನಿಯಮಗಳ ಪ್ರಕಾರ, ಬೋಧಕರ ನಿಯೋಜನೆಗೆ ಅವಕಾಶವೇ ಇಲ್ಲ. ಈಗ ಈ ನಿಯಮವನ್ನು ಅನುಸರಿಸಿ, ನಿಯೋಜನೆ ರದ್ದುಪಡಿಸಲಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು
.
ಕೊರೋನಾ ಹಿನ್ನೆಲೆಯಲ್ಲಿ ಬೋಧಕರ ನಿಯೋಜನೆಯನ್ನು ರದ್ದುಪಡಿಸುವ ಕೆಲಸ ಎರಡು ವರ್ಷ ಮುಂದೂಡಲ್ಪಟ್ಟಿತ್ತು. ಇತ್ತೀಚೆಗೆ ಈ ಪ್ರಕ್ರಿಯೆ ಕೈಗೆತ್ತಿಕೊಂಡಾಗ ಕೆಲವರು ಒಂದು ವಾರ ಮುಂದೂಡುವಂತೆ ಕೇಳಿಕೊಂಡಿದ್ದರು. ಇದಾದ ಮೇಲಷ್ಟೆ ಬೋಧಕರ ನಿಯೋಜನೆಯನ್ನು ರದ್ದು ಪಡಿಸಲಾಗಿದೆ ಎಂದು ಅವರು ವಿವರಿಸಿದರು. 

ಬೋಧಕರನ್ನು ನಿಯೋಜನೆ ಮೇಲೆ ಕಳಿಸಿರುವುದರಿಂದ ಹಲವು ಕಾಲೇಜುಗಳಲ್ಲಿ ಕೇವಲ ಅತಿಥಿ ಉಪನ್ಯಾಸಕರ ಮೇಲೆಯೇ ಅವಲಂಬನೆ ಹೆಚ್ಚಾಗಿತ್ತು. ಆದ್ದರಿಂದ ಇವರನ್ನೆಲ್ಲ ಮೂಲಸಂಸ್ಥೆಗೆ ಕಳಿಸಬೇಕೆಂದು ಕಾಲೇಜು ಅಭಿವೃದ್ಧಿ ಮಂಡಲಿಯ ಮುಖ್ಯಸ್ಥರೂ ಆಗಿರುವ ಶಾಸಕರು ಆಗ್ರಹಿಸಿದ್ದರು. ಆದರೆ ಈಗ ಅದನ್ನು ಮರೆತು, ಮರಿತಿಬ್ಬೇಗೌಡರು ನನ್ನ ಕಚೇರಿಯ ಮುಂದೆ ಧರಣಿ ಕೂತಿರುವುದು ಸೋಜಿಗದ ಸಂಗತಿಯಾಗಿದೆ ಎಂದು ಅವರು ಪ್ರತಿಪಾದಿಸಿದರು. 

ಪ್ರಸ್ತುತ, ಕಾಲೇಜು ಶಿಕ್ಷಣ ಇಲಾಖೆಯಲ್ಲಿ 700ಕ್ಕೂ ಹೆಚ್ಚು ಬೋಧಕರು ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ,  E  ವಲಯಕ್ಕೆ ಸೇರುವ ಹೋಬಳಿ ಮಟ್ಟದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ 150ಕ್ಕಿಂತ ಹೆಚ್ಚು ಕಾಯಂ ಬೋಧಕರು ಮೂಲ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸದೇ ಇತರ ಉನ್ನತ ವಲಯದ ಕಾಲೇಜುಗಳಿಗೆ ನಿಯೋಜನೆಗೊಂಡಿದ್ದಾರೆ. ಅದೇ ರೀತಿ D ವಲಯಕ್ಕೆ ಸೇರುವ ತಾಲ್ಲೂಕುಮಟ್ಟದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಸುಮಾರು 250ಕ್ಕೂ ಹೆಚ್ಚು ಬೋಧಕರು ಮೂಲ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸದೇ ಇತರ ವಲಯದ ಕಾಲೇಜುಗಳಿಗೆ ನಿಯೋಜನೆಗೊಂಡಿರುತ್ತಾರೆ. ಹೀಗಾಗಿ, ಈ ನಿಯೋಜನೆಗಳಿಂದಾಗಿ ಒಟ್ಟು 400ಕ್ಕೂ ಹೆಚ್ಚು ಬೋಧಕರು ಮೂಲ ಕಾಲೇಜುಗಳಲ್ಲಿ ಇಲ್ಲದೇ,  ಹೋಬಳಿ ಮತ್ತು ತಾಲ್ಲೂಕುಮಟ್ಟದ ಕಾಲೇಜುಗಳ ಬಹುತೇಕ ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ತೊಂದರೆಯಾಗಿದೆ ಎಂದು ವಿವರಿಸಿದ್ದಾರೆ. 

ನಿಯೋಜನೆ ರದ್ದತಿಗೆ ಮುನ್ನ  ಅತಿಥಿ ಉಪನ್ಯಾಸಕರ ಬಗ್ಗೆಯೂ ಆಲೋಚಿಸಲಾಗಿದೆ. ಅವರ ಕಾರ್ಯಭಾರದಲ್ಲಿ ವ್ಯತ್ಯಾಸವಾದರೆ ಸಮೀಪದಲ್ಲೇ ಇರುವ ಕಾಲೇಜುಗಳಲ್ಲಿ ಕಾರ್ಯಭಾರ ಹೊಂದಿಸಲಾಗುವುದು. ನಿಯೋಜನೆ ರದ್ದತಿ ಆದೇಶವನ್ನು ರಾತ್ರೋರಾತ್ರಿಯೇನೂ ಹೊರಡಿಸಿಲ್ಲ ಎಂದು ಸಚಿವರು ನುಡಿದರು. 

ಇದನ್ನೂ ಓದಿ : ಮೋದಿಯವರು ‘ಪ್ರಧಾನಮಂತ್ರಿ ಸೌದೆ ಯೋಜನೆ’ ಘೋಷಿಸಿದರೂ ಆಶ್ಚರ್ಯವಿಲ್ಲ!: ಕಾಂಗ್ರೆಸ್ ವ್ಯಂಗ್ಯ

ಮರಿತಿಬ್ಬೇಗೌಡರಿಗೆ ಬೆಂಬಲ ಸೂಚಿಸಲು ಸ್ಥಳಕ್ಜೆ ಬಂದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರು ನಿಯೋಜನೆ ವಿಷಯ ಬಿಟ್ಟು ವರ್ಗಾವಣೆ ಬಗ್ಗೆ ಮಾತನಾಡಿದ್ದು ಆಶ್ಚರ್ಯ ಉಂಟು ಮಾಡಿದೆ. ಯಾವ ಕಾರಣಕ್ಕೆ ಗೌಡರು ಧರಣಿ ಕುಳಿತಿದ್ದಾರೆ ಎನ್ನುವುದನ್ನು ತಿಳಿಯದೆ ಟೀಕೆ ಮಾಡುವುದಕ್ಕೇ ಬಂದ ಹಾಗೆ ಇತ್ತು ಎಂದರು.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News