ಹಾಸನ: ಸಕಲೇಶಪುರ ತಾಲೂಕಿನ ಹೊಂಕವಳ್ಳಿಯ ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡೊಂದು ಭಾರೀ ದಾಂಧಲೆ ಮಾಡಿರುವ ಘಟನೆ ನಡೆದಿದೆ.
ಮೂರು ಮರಿಯಾನೆ ಸೇರಿ ಒಟ್ಟು 13 ಆನೆಗಳು ಕಾಣಿಸಿಕೊಂಡಿದ್ದು, ಕಾಫಿ ತೋಟದ ಹಲಸಿನ ಮರಗಳನ್ನು ಮುರಿದು ದಾಂಧಲೆ ನಡೆಸಿವೆ. ಇದರಿಂದ ಆತಂಕಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿ ಆನೆಗಳನ್ನು ಓಡಿಸಲು ಹರಸಾಹಸ ಮಾಡಿದ್ದಾರೆ.
ಆದರೂ ಆನೆಗಳು ಚದುರದೆ ಗುಂಪಾಗಿಯೇ ಮುಂದಿನ ತೋಟಕ್ಕೆ ಸಾಗಿ ದಾಂಧಲೆ ಮುಂದುವರೆಸಿವೆ. ಈ ಬಗ್ಗೆ ಅಸಮಾಧಾನಗೊಂದಡಿರುವ ಗ್ರಾಮಸ್ಥರು, ಪದೇ ಪದೇ ಕಾಡಾನೆಗಳು ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿರುವುದರಿಂದ ಭಾರೀ ನಷ್ಟವಾಗಿದೆ. ಈಗಾಗಲೇ ಅರಣ್ಯ ಇಲಾಖೆ ಕೂಡ ಆನೆ ಕಂದಕ, ವಿದ್ಯುತ್ ಬೇಲಿ ಸೇರಿದಂತೆ ಸಾಕಷ್ಟು ಕ್ರಮ ಕೈಗೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.