ಬಿಜೆಪಿ ಬಿ ಟೀಂ: ಬಹಿರಂಗ ಚರ್ಚೆಗೆ ನಾನು ಸಿದ್ಧ ಸಮಯ, ದಿನಾಂಕ ನಾನು ನಿಗದಿ ಮಾಡಲಾ? – ಎಚ್‍ಡಿಕೆ

ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರನ್ನು ಪ್ರತಿಪಕ್ಷ ನಾಯಕ ಸ್ಥಾನದಿಂದ ಕೆಳಗಿಸಲು ಬಿಜೆಪಿಯ ಯಡಿಯೂರಪ್ಪ ಅವರ ಜೊತೆ ನೇರ ಡೀಲ್ ಕುದುರಿಸಿದ್ದವರ ಬಗ್ಗೆ ಗೊತ್ತಿಲ್ಲವೆ? ಎಂದು ಸುರ್ಜೇವಾಲಾಗೆ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Written by - Puttaraj K Alur | Last Updated : Jan 23, 2023, 03:52 PM IST
  • ಸುರ್ಜೇವಾಲಾ ಅವರೇ ಹೊಸ ಬಾಟಲಿಗೆ ಹಳೆಯ ಮದ್ಯ ತುಂಬುವ ವ್ಯರ್ಥದ ಕೆಲಸ ಏಕೆ?
  • ಕಾಂಗ್ರೆಸ್ ಪಕ್ಷದ ಸಿದ್ಧಹಸ್ತರ ಪ್ರಭಾವಕ್ಕೆ ಒಳಗಾಗಿ ಸವಕಲು ಸುಳ್ಳುಗಳನ್ನೇ ಹೇಳುವ ಕರ್ಮ ನಿಮಗೇಕೆ ಬಂತು?
  • ಜೆಡಿಎಸ್‍ ಬಿಜೆಪಿಯ ಬಿ ಟೀಂ ಎಂದ ಸುರ್ಜೇವಾಲಾಗೆ ಮಾಜಿ ಸಿಎಂ ಎಚ್‍.ಡಿ.ಕುಮಾರಸ್ವಾಮಿ ತಿರುಗೇಟು
ಬಿಜೆಪಿ ಬಿ ಟೀಂ: ಬಹಿರಂಗ ಚರ್ಚೆಗೆ ನಾನು ಸಿದ್ಧ ಸಮಯ, ದಿನಾಂಕ ನಾನು ನಿಗದಿ ಮಾಡಲಾ? – ಎಚ್‍ಡಿಕೆ title=
ಸುರ್ಜೇವಾಲಾಗೆ ಎಚ್ಡಿಕೆ ತಿರುಗೇಟು

 ಬೆಂಗಳೂರು: ಜೆಡಿಎಸ್‍ಅನ್ನು ಬಿಜೆಪಿಯ ಬಿ ಟೀಂ ಎಂದು ಹೇಳಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾಗೆ ಮಾಜಿ ಸಿಎಂ ಎಚ್‍.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಸುರ್ಜೇವಾಲಾ ಅವರೇ ಹೊಸ ಬಾಟಲಿಗೆ ಹಳೆಯ ಮದ್ಯ ತುಂಬುವ ವ್ಯರ್ಥದ ಕೆಲಸ ಏಕೆ? ರಾಜ್ಯ ಕಾಂಗ್ರೆಸ್ ಪಕ್ಷದ ಸಿದ್ಧಹಸ್ತರ ಪ್ರಭಾವಕ್ಕೆ ಒಳಗಾಗಿ ಸವಕಲು ಸುಳ್ಳುಗಳನ್ನೇ ಹೇಳುವ ಕರ್ಮ ನಿಮಗೇಕೆ ಬಂತು?’ ಎಂದು ಪ್ರಶ್ನಿಸಿದ್ದಾರೆ.

‘ನಮ್ಮ ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಎಂದು ಹಾಸನದಲ್ಲಿ ದೂರಿದ್ದಿರಿ. ಪಾಪ.. ನಿಮ್ಮನ್ನು ಪ್ರಜ್ಞಾವಂತ ರಾಜಕಾರಣಿ ಎಂದು ಭಾವಿಸಿದ್ದೆ. ನೀವು ನೋಡಿದರೆ ‘ಸಿದ್ಧಭಾಷಣ'ವನ್ನೇ ನಕಲು ಮಾಡಿ ನಗೆಪಾಟಲಿಗೆ ಒಳಗಾಗಿದ್ದಿರಿ. ಸತ್ಯ ಅರಿತು ಮಾತನಾಡಿದ್ದರೆ ನಾನೂ ಖುಷಿ ಪಡುತ್ತಿದ್ದೆ. ಬಿಜೆಪಿ ಬಾಲಂಗೋಚಿಯನ್ನು ಪಕ್ಕದಲ್ಲೇ ಕೂರಿಸಿಕೊಂಡು ಜೆಡಿಎಸ್ ಅನ್ನು ಬಿಜೆಪಿ ಬಿ ಟೀಂ ಎಂದು ದೂರಿದ್ದೀರಿ, ನಿಜಕ್ಕೂ ಆ ಬಿ ಟೀಂ ಯಾವುದು? ಆ ಟೀಂ ಕ್ಯಾಪ್ಟನ್ ಯಾರು? ಎನ್ನುವುದನ್ನು ನಿಮ್ಮ ಪಕ್ಕದಲ್ಲೇ ಇದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕೇಳಬಾರದಿತ್ತೆ? ಅರಬರೆ ಆಲಾಪದಿಂದ ಅಪಹಾಸ್ಯಕ್ಕೆ ಈಡಾಗಿದ್ದಿರಿ’ ಎಂದು ಕುಟುಕಿದ್ದಾರೆ.

‘ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದು 2018ರಲ್ಲಿ ಹಾಸನದಲ್ಲಿ ರಾಹುಲ್ ಗಾಂಧಿಯವರಿಂದ ಹೇಳಿಸಿದ್ದ ನಿಮ್ಮ ಪಕ್ಷದ ಶಾಸಕಾಂಗ ನಾಯಕರು, 2008ರಲ್ಲಿ ಮಾಡಿದ್ದೇನು? ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರನ್ನು ಪ್ರತಿಪಕ್ಷ ನಾಯಕ ಸ್ಥಾನದಿಂದ ಕೆಳಗಿಸಲು ಬಿಜೆಪಿಯ ಯಡಿಯೂರಪ್ಪ ಅವರ ಜೊತೆ ನೇರ ಡೀಲ್ ಕುದುರಿಸಿದ್ದವರ ಬಗ್ಗೆ ಗೊತ್ತಿಲ್ಲವೆ? ದಲಿತ ನಾಯಕ ಖರ್ಗೆ ಅವರನ್ನು ಸಿಎಲ್‍ಪಿ ನಾಯಕ ಸ್ಥಾನದಿಂದ ಅಪಮಾನಕರವಾಗಿ ಇಳಿಸಲು ಹಾಲಿ ಸಿಎಲ್‍ಪಿ ನಾಯಕ ಮಹಾಶಯರು ಹಣೆದ 'ಸಿದ್ಧವ್ಯೂಹ 'ದ ಬಗ್ಗೆ ನಿಮಗೆ ಮಾಹಿತಿ ಇಲ್ಲ. ಹೋಗಲಿ.. 'ಸಿದ್ಧಪೀಡಿತ ' ನಿಮ್ಮ ಎಐಸಿಸಿ ಅಧ್ಯಕ್ಷರನ್ನೇ ಒಮ್ಮೆ ಕೇಳಿ ತಿಳಿದುಕೊಳ್ಳಿ ಸುರ್ಜೇವಾಲ ಅವರೇ’ ಎಂದು ಎಚ್‍ಡಿಕೆ ಹೇಳಿದ್ದಾರೆ.

ಇದನ್ನೂ ಓದಿ: Mangli: ಸಿಂಗರ್ ಮಂಗ್ಲಿ ಕಾರಿನ ಗ್ಲಾಸ್ ಹೊಡೆದ ಪುಂಡರು..!

‘2008ರಲ್ಲಿ ಉಪ ಚುನಾವಣೆ ನಡೆದ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಯಡಿಯೂರಪ್ಪರಿಂದ ಕೋಟಿ ಕೋಟಿ ಥೈಲಿ ಪಡೆದದ್ದು, ಆ ಹಣವನ್ನು ಯಾರು ಪಡೆದು ಯಾರಿಗೆ ತಂದುಕೊಟ್ಟರು ಎನ್ನುವ ಕುರಿತೂ ಮಾಹಿತಿ ಪಡೆದುಕೊಳ್ಳಿ ಸುರ್ಜೇವಾಲರೇ.. ಅನೇಕ ಸಲ ಈ ಬಗ್ಗೆ ಪ್ರಶ್ನಿಸಿದ್ದೇನೆ. ಉತ್ತರವೇ ಇಲ್ಲ. ಕೊನೆಪಕ್ಷ ನೀವಾದರೂ ಉತ್ತರಿಸಿ. ಇಷ್ಟೆಲ್ಲಾ ಮಾತೃಪಕ್ಷ ದ್ರೋಹ ಮಾಡಿದ ನಿಮ್ಮ ಶಾಸಕಾಂಗ ಪಕ್ಷದ ನಾಯಕರ ನೇತೃತ್ವದಲ್ಲಿ 5 ವರ್ಷ ಆಡಳಿತ ನಡೆಸಿದ ನಿಮ್ಮ ಪಕ್ಷ 2018ರಲ್ಲಿ 78 ಕ್ಷೇತ್ರಗಳಿಗೆ ಕುಸಿಯಿತೇಕೆ? ಬಿಜೆಪಿ ಜೊತೆ ಅವರು ನಡೆಸುತ್ತಿರುವ 'ಮುಂದುವರಿದ ಕಳ್ಳಾಟ ' ಏನೆಂದು ನಿಮಗೆ ಮಾಹಿತಿ ಇಲ್ಲವೆ?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘2018ರಲ್ಲಿ ನಿಮ್ಮವರೇ ನಮ್ಮ ಮನೆಗೆ ಬಂದು ಗೊಗರೆದು ಮೈತ್ರಿ ಸರ್ಕಾರ ಮಾಡಿದರು. ಆಮೇಲೆ ಶುರುವಾಗಿದ್ದೇ ಕುತ್ಸಿತ ರಾಜಕಾರಣ. ಬಾಂಬೆಗೆ ಹೋದವರ ಬೆನ್ನ ಹಿಂದೆ ಇದ್ದ ಆ ನಿಗೂಢ ಬೇತಾಳ ಯಾವುದು? ನಿಮ್ಮ ಶಾಸಕಾಂಗ ಪಕ್ಷದ ನಾಯಕರು ಮಾಡಿದ್ದೇನು? ಧರ್ಮಸ್ಥಳದ ಸಿದ್ಧವನ, ಕಾವೇರಿ ನಿವಾಸದಲ್ಲಿ ನನ್ನ ವಿರುದ್ಧ ಹಾಗೂ ನಿಮ್ಮ ಕೇಂದ್ರ ನಾಯಕರೇ ರಚಿಸಿದ ಮೈತ್ರಿ ಸರ್ಕಾರ ಕೆಡವಲು ಮಹೂರ್ತ ಇಟ್ಟವರು ಯಾರು?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ಇಡೀ ರಾಜ್ಯವನ್ನೇ ಕೋಮುದಳ್ಳುರಿಯಲ್ಲಿ ಬೇಯುವಂತೆ ಮಾಡಿದ ಬಿಜೆಪಿ ಸರ್ಕಾರ ಬರಲು ಮೂಲ ಕಾರಣಕರ್ತರೇ ನಿಮ್ಮ ಶಾಸಕಾಂಗ ಪಕ್ಷದ ನಾಯಕರು. ಅಪರೇಷನ್ ಕಮಲವೆಂಬ ಕೆಟ್ಟ ಕೊಳಕು ರಾಜಕೀಯಕ್ಕೆ 'ಸಿದ್ಧಪುರುಷ'ರೂ ಇವರೇ. ಈಗ ಹೇಳಿ ಬಿಜೆಪಿ ಬಿ ಟೀಂ ಯಾವ ಪಕ್ಷ? ಅದರ ಕ್ಯಾಪ್ಟನ್ ಯಾರು? ಎಂದು. ಬಿ ಟೀಂ ಭಾಗವತಿಕೆ ಇಲ್ಲಿಗೇ ನಿಲ್ಲಿಸಿದರೆ ಉತ್ತಮ. ಇಲ್ಲವಾದರೆ ಮುಂದಿನ ಪರಿಣಾಮಗಳಿಗೆ ನೀವೇ ಹೊಣೆ. ರಾಜ್ಯದಲ್ಲಿ ಜಾತ್ಯತೀತ ಶಕ್ತಿಗಳು ದುರ್ಬಲವಾದರೆ ಆ ಪಾಪಕ್ಕೂ ನೀವೇ ಹೊಣೆ. ಬಿ ಟೀಂ ಯಾವ ಪಕ್ಷವೆಂಬ ಬಹಿರಂಗ ಚರ್ಚೆಗೆ ನಾನು ಸಿದ್ಧ. ವಿಧಾನಸೌಧದ ಮುಂದೆಯೇ ಚರ್ಚೆ ನಡೆಯಲಿ. ನಿಮ್ಮ ಸಿದ್ಧಪುರಷರ ಜೊತೆ ನೀವೂ ಬನ್ನಿ. ಸಮಯ, ದಿನಾಂಕ ನಾನು ನಿಗದಿ ಮಾಡಲಾ? ಅಥವಾ ನೀವು ಮಾಡುತ್ತೀರಾ? ಉತ್ತರಕ್ಕೆ ಕಾಯುತ್ತಿರುತ್ತೇನೆ’ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಆರೋಗ್ಯಯುತ ಜೀವನಕ್ಕೆ ಯೋಗಾಸನ ರಹದಾರಿ: ಸಚಿವ ಆರ್.ಅಶೋಕ್

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

  

Trending News