ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಕೊನೆಯ ಕ್ಷಣಗಳಲ್ಲಿ ಹಂಗಾಮಿ ಮುಖ್ಯಮಂತ್ರಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಋಣಮುಕ್ತ ಕಾಯ್ದೆಯನ್ನು ಜಾರಿಮಾಡುವ ಮೂಲಕ ರಾಜ್ಯದ ಬಡವರಿಗೆ, ರೈತರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.
ಒಂದೆಡೆ ಸದಾನದಲ್ಲಿ ವಿಶ್ವಸಮತಯಾಚನೆ ಚರ್ಚೆ ನಡೆಯುತ್ತಿದ್ದರೆ, ಮತ್ತೊಂದೆಡೆ ಮುಖ್ಯಮಂತ್ರಿಗಳು ತಮ್ಮ ಕಚೇರಿಯಲ್ಲೇ ಕುಳಿತು, ರೈತರಿಗಾಗಿ ರೂಪಿಸಲಾಗಿದ್ದ ಋಣಮುಕ್ತ ಕಾಯ್ದೆಗೆ ಸಹಿ ಹಾಕಿ ಅಧಿಸೂಚನೆ ಹೊರಡಿಸಿದ್ದಾರೆ.
ಈ ಬಗ್ಗೆ ಸ್ವತಃ ಹೆಚ್.ಡಿ.ಕುಮಾರಸ್ವಾಮಿ ಅವರೇ ಸುದ್ದಿಗೋಷ್ಠಿ ನಡೆಸಿ ಋಣಮುಕ್ತ ಕಾಯ್ದೆ ಜಾರಿಗೆ ತಂದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಯಾರಿಗೆ ಈ ಕಾಯ್ದೆ ಅನ್ವಯ?
ಈ ಕಾಯ್ದೆಯ ಪ್ರಕಾರ ಭೂಮಿ ಇಲ್ಲದ ರೈತರಿಗೆ ಅಥವಾ 2 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಅಥವಾ 1.20 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವವರಿಗೆ ಬ್ಯ್ನಾಕ್ ಸಾಲ ಹೊರತುಪಡಿಸಿ, ಖಾಸಗಿ ಸಾಲಗಳು ಸಂಪೂರ್ಣ ಮನ್ನಾ ಆಗಲಿವೆ ಎಂದು ಹಂಗಾಮಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಯಾವ ಸಾಲಗಳ ಮನ್ನಾ?
ಬ್ಯಾಂಕುಗಳ ಹೊರತಾಗಿ, ಖಾಸಗಿ ವ್ಯಕ್ತಿಗಳ, ಲೇವಾದೇವಿದಾರರ ಬಳಿ, ಖಾಸಗಿ ಅವರ ಬಳಿ ಚಿನ್ನ ಅಡವಿಟ್ಟು ಪಡೆದ ಸಾಲ, ಜಮೀನ್ದಾರುಗಳ ಬಳಿ ಪಡೆದಿರುವ ಸಾಲ, ಜಮೀನು ಅಡಮಾನ ಇಟ್ಟು ಖಾಸಗಿ ವ್ಯಕ್ತಿಗಳಿಂದ ಪಡೆದ ಸಾಲಗಳು ಪೂರ್ಣವಾಗಿ ಮನ್ನಾ ಆಗಲಿದೆ. ಇಂತಿಷ್ಟು ಸಾಲವೆಂಬ ಮಿತಿ ಇಲ್ಲದೆ ಪೂರ್ಣ ಸಾಲವೂ ಮನ್ನಾ ಆಗಲಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
ಮಾಡಬೇಕಾದ್ದೇನು?
ಎಷ್ಟು ವರ್ಷದ ಹಿಂದೆ ಸಾಲ ಮಾಡಿದ್ದರೂ 90 ದಿನಗಳಲ್ಲಿ ಆಯಾ ಉಪವಿಭಾಗಾಧಿಕಾರಿಯನ್ನು ಭೇಟಿಯಾಗಿ ದಾಖಲಾತಿ ಒದಗಿಸಿದರೆ ಸಾಲ ಮನ್ನಾ ಆಗುತ್ತದೆ. ಒಂದೇ ಒಂದು ಬಾರಿಗೆ ಖಾಸಗಿ ಸಾಲ ಪಡೆದಿದ್ದರೂ ಅದೂ ಮನ್ನಾ ಆಗುತ್ತದೆ ಎಂದು ಮಾಹಿತಿ ನೀಡಿದರು. ಲೇವಾದೆವಿಗಾರರು ಬಡವರಿಗೆ ನೀಡುವ ಕಿರುಕುಳವನ್ನು ತಪ್ಪಿಸಲು ಈ ಕಾಯ್ದೆ ಜಾರಿಗೆ. ಜೂನ್ 16ರಂದೇ ಈ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದು, ಜುಲೈ 23ರಂದು ಜಾರಿಗೆ ತಂದು ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಮುಂದುವರೆದು ಮಾತನಾಡಿದ ಕುಮಾರಸ್ವಾಮಿ ಅವರು, ಅಧಿಕಾರದಿಂದ ಕೆಳಗಿಳಿಯುವ ಮುನ್ನ ರೈತರಿಗಾಗಿ, ಬಡವರಿಗಾಗಿ ಒಳ್ಳೆಯ ಕೆಲಸ ಮಾಡಿರುವ ಬಗ್ಗೆ ಆತ್ಮತ್ರುಪ್ತಿಯಿದೆ. ಈ ಸಂದರ್ಭದಲ್ಲಿ ಸಹಕರಿಸಿದ ಎಲ್ಲಾ ಅಧಿಕಾರಿಗಳಿಗೂ ಧನ್ಯವಾದ ತಿಳಿಸಿದರು.