ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ ತನಿಖೆ ಬಗ್ಗೆ ಅವರ ಸಹೋದರ ಇಂದ್ರಜಿತ್ ಲಂಕೇಶ್ ಅಸಮಾಧಾನ ವ್ಯಕ್ತಪಡಿಸಿದ್ದು, ಸಿಬಿಐ ತನಿಖೆಗೆ ಒತ್ತಾಯಿಸಿ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಗೌರಿ ಲಂಕೇಶ್ ಹುಟ್ಟುಹಬ್ಬದ ಸಂದರ್ಭವಾದ ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ರುದ್ರಭೂಮಿಯಲ್ಲಿ ಗೌರಿ ಸಮಾಧಿಗೆ ನಮನ ಸಲ್ಲಿಸಿ ಮಾತನಾಡಿದ ಅವರು, ಗೌರಿ ಹತ್ಯೆಯಾಗಿ 5 ತಿಂಗಳುಗಳಾದರೂ ವಿಶೇಷ ತನಿಖಾ ತಂಡ ಯಾವುದೇ ಮಾಹಿತಿ ಹೊರ ಹಾಕಿಲ್ಲ. ತನಿಖೆಯು ನಿಂತ ನೀರಾಗಿದ್ದು, ರಾಜಕೀಯವಾಗಿ ಒಂದೇ ಕೋನದಿಂದ ತನಿಖೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಶೇಷ ತನಿಖಾ ತಂಡದ ಮೇಲಿನ ರಾಜಕೀಯ ಒತ್ತಡದಿಂದಾಗಿ ತನಿಖೆ ಕುಂಠಿತವಾಗುತ್ತಿದೆ. ಎಸ್ಐಟಿ ಇದೇ ರೀತಿ ತನಿಖೆ ಮುಂದುವರಿಸಿದರೆ ತಮ್ಮ ವಕೀಲರೊಂದಿಗೆ ಚರ್ಚಿಸಿ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಹೈಕೋರ್ಟ್ ಮೊರೆ ಹೋಗುವದಾಗಿ ಇಂದ್ರಜಿತ್ ತಿಳಿಸಿದ್ದಾರೆ.