ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ನಿರಾಶ್ರಿತರಾಗಿರುವವರಿಗೆ ಪ್ರಾರಂಭಿಸಲಾಗಿರುವ ಪರಿಹಾರ ಕೇಂದ್ರಗಳಲ್ಲಿ ಊಟೋಪಹಾರದ ವ್ಯವಸ್ಥೆ, ವಾಸ್ತವ್ಯದ ವ್ಯವಸ್ಥೆ ಹಾಗೂ ಪರಿಹಾರ ಸಾಮಗ್ರಿಗಳ ಪೂರೈಕೆ ಮಾಡಲಾಗುತ್ತಿದ್ದು, ಈ ಪರಿಹಾರ ಕೇಂದ್ರಗಳಲ್ಲಿ ಇರದ ನಿರಾಶ್ರಿತರಿಗೂ ಸಹ ಆಯಾ ಗ್ರಾಮ ಪಂಚಾಯತಿಗಳ ಮೂಲಕ ಪರಿಹಾರ ಸಾಮಗ್ರಿ, ಆಹಾರ ಸಾಮಗ್ರಿಗಳನ್ನು ಸಮರ್ಪಕವಾಗಿ ಪೂರೈಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
51 ಪರಿಹಾರ ಮತ್ತು ಪುನರ್ವಸತಿ ಕೇಂದ್ರಗಳು
ಭಾರಿ ಮಳೆಯಿಂದ ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ಸಂತ್ರಸ್ತರಾದವರಿಗೆ ಜಿಲ್ಲೆಯಲ್ಲಿ ಒಟ್ಟು 51 ಪರಿಹಾರ ಮತ್ತು ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಅತಿ ಹೆಚ್ಚು ಹಾನಿ ಮಡಿಕೇರಿ ತಾಲೂಕಿನಲ್ಲಿ ಸಂಭವಿಸಿದ್ದು, ಇಲ್ಲಿನ ಗಾಳಿಬೀಡು, ಕರ್ಣಂಗೇರಿ, ಮಕ್ಕಂದೂರು, ಜೋಡುಪಾಲ, ಕಾಟಕೇರಿ, ಹೊದವಾಡ ಐಕೊಳ, ಮಡಿಕೇರಿ ನಗರ ಸೇರಿ ವಿವಿಧೆಡೆ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ.
ಸೋಮವಾರಪೇಟೆಯಲ್ಲೂ ಪುನರ್ವಸತಿ ಕೇಂದ್ರ
ಸೋಮವಾರ ಪೇಟೆ ಮತ್ತು ವಿರಾಜಪೇಟೆ ತಾಲೂಕಿನಲ್ಲಿಯೂ ಪರಿಹಾರ ಮತ್ತು ಪುನರ್ವಸತಿ ಕೇಂದ್ರವನ್ನು ತೆರೆದು, ಸಂತ್ರಸ್ತರಿಗೆ ಊಟೋಪಹಾರ, ವಾಸ್ತವ್ಯ, ಆರೋಗ್ಯ ತಪಾಸಣೆ, ಮಾನಸಿಕ ಸ್ಥೈರ್ಯ ತುಂಬುವ ಕಾರ್ಯಕ್ರಮದ ಜೊತೆಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನೂ ವಿತರಣೆ ಮಾಡಲಾಗುತ್ತಿದೆ.
ಗ್ರಾಮಪಂಚಾಯ್ತಿಗಳ ಮೂಲಕ ಪೂರೈಕೆ
ರಾಜ್ಯದಲ್ಲೆಡೆಯಿಂದ ಸ್ವೀಕರಿಸಲಾಗುತ್ತಿರುವ ನೆರವಿನ ಸಾಮಗ್ರಿಗಳನ್ನು ಗ್ರಾಮ ಪಂಚಾಯತಿಗಳ ಮೂಲಕ ಸಂತ್ರಸ್ತರಿಗೆ ಪೂರೈಸುವ ಸಲುವಾಗಿ ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ಪಿಡಿಒ ಗಳಿಗೆ ಜವಾಬ್ದಾರಿ ನೀಡಲಾಗಿದೆ. ಸೋಮವಾರ ಸುಮಾರು 25 ಗ್ರಾಮ ಪಂಚಾಯತಿಗಳ ಮೂಲಕ ಪರಿಹಾರ ಸಾಮಗ್ರಿಗಳನ್ನು ಸಂತ್ರಸ್ತರಿಗೆ ಪೂರೈಕೆ ಮಾಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರಿಂದ ಪರಿಶೀಲನೆ
ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವರಾದ ಸಾ.ರಾ. ಮಹೇಶ್ ಅವರು ಮಂಗಳವಾರ ಜಿಲ್ಲಾಡಳಿತ ಭವನದ ದಾಸ್ತಾನು ಕೇಂದ್ರಕ್ಕೆ ಖುದ್ದು ಭೇಟಿ ನೀಡಿ, ದಾಸ್ತಾನು ಸ್ವೀಕಾರ ಹಾಗೂ ವಿತರಣೆ ಕಾರ್ಯವನ್ನು ಪರಿಶೀಲಿಸಿ, ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದರು.
ಸಂತ್ರಸ್ತರಿಗೆ ನೆರವು
ಪ್ರವಾಹ ಸಂತ್ರಸ್ತರಿಗಾಗಿ ನೆರವು ನೀಡಲು ಇಚ್ಚಿಸುವವರು ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ನೆರವು ಸಾಮಗ್ರಿಗಳನ್ನು ಇತರೆ ಸಂಘ ಸಂಸ್ಥೆಗಳಿಗೆ ನೀಡುವುದರ ಬದಲಾಗಿ, ಜಿಲ್ಲಾಡಳಿತ ಸ್ಥಾಪಿಸಿರುವ ದಾಸ್ತಾನು ಕೇಂದ್ರಗಳಿಗೆ ನೀಡಲು ತಿಳಿಸಿರುವ ಅವರು, ನೇರವಾಗಿ ಕೊಡಗು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.