SSLC ಪರೀಕ್ಷೆ ರದ್ದು ಮಾಡಿ, ಇಲ್ಲದಿದ್ದರೆ ಅಕ್ಟೋಬರ್‌ನಲ್ಲಿ ನಡೆಸಿ: ಕುಮಾರಸ್ವಾಮಿ ಆಗ್ರಹ

ಶಿಕ್ಷಣ ತಜ್ಞರು, ಆರೋಗ್ಯ ಕ್ಷೇತ್ರದ ತಜ್ಞರು, ಪೋಷಕರು ಎಷ್ಟೇ ಒತ್ತಾಯ ಮಾಡಿದರೂ, ಮನವಿ ಮಾಡಿಕೊಂಡರೂ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪರೀಕ್ಷೆ ನಡೆಸುವ ಹಠಕ್ಕೆ ಬಿದ್ದಿದ್ದಾರೆ.   

Last Updated : Jun 23, 2020, 01:37 PM IST
SSLC ಪರೀಕ್ಷೆ ರದ್ದು ಮಾಡಿ, ಇಲ್ಲದಿದ್ದರೆ ಅಕ್ಟೋಬರ್‌ನಲ್ಲಿ ನಡೆಸಿ: ಕುಮಾರಸ್ವಾಮಿ ಆಗ್ರಹ title=

ಬೆಂಗಳೂರು: ಕೊರೊನಾ ಕಾರಣಕ್ಕೆ ನೆರೆಯ ತಮಿಳುನಾಡು ಮತ್ತು ತೆಲಂಗಾಣದಲ್ಲಿ ಎಸ್ಎಸ್ಎಲ್‌ಸಿ (SSLC) ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಆದರೆ ಪ್ರತಿಷ್ಟೆಯ ವಿಷಯವನ್ನಾಗಿ ಪರಿಗಣಿಸಿರುವ ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳ ಜೀವ ಒತ್ತೆ ಇಟ್ಟು ಪರೀಕ್ಷೆ ನಡೆಸಲು ಮುಂದಾಗಿದೆ. ಶಿಕ್ಷಣ ತಜ್ಞರು, ಆರೋಗ್ಯ ಕ್ಷೇತ್ರದ ತಜ್ಞರು, ಪೋಷಕರು ಎಷ್ಟೇ ಒತ್ತಾಯ ಮಾಡಿದರೂ, ಮನವಿ ಮಾಡಿಕೊಂಡರೂ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ (S SureshKumar) ಪರೀಕ್ಷೆ ನಡೆಸುವ ಹಠಕ್ಕೆ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ  ಎಚ್.ಡಿ. ಕುಮಾರಸ್ವಾಮಿ (HD Kumaraswamy) ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಎಚ್.ಡಿ. ಕುಮಾರಸ್ವಾಮಿ ಮೊದಲ ಟ್ವೀಟ್ ನಲ್ಲಿ ಕರೋನಾ ಸೋಂಕು ಏರುಗತಿಯಲ್ಲಿ ಸಾವಿನ ನಗಾರಿ ಬಾರಿಸುತ್ತಿರುವ ಇಂತಹ ಆತಂಕದ ಸಂದರ್ಭದಲ್ಲಿ  ಸುಮಾರು ಎಂಟು ಲಕ್ಷ SSLC ವಿದ್ಯಾರ್ಥಿಗಳು, ಪೋಷಕರು ಹಾಗೂ ಪರೀಕ್ಷಾ ಸಿಬ್ಬಂದಿ  ಸೇರಿದಂತೆ 24 ಲಕ್ಷ  ಮಂದಿಯ ಜೀವ ಮತ್ತು ಭವಿಷ್ಯದೊಂದಿಗೆ  ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ.

'ಗುರುವಾರದಿಂದ ರಾಜ್ಯದಾದ್ಯಂತ SSLC ಪರೀಕ್ಷೆ  ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ ಈ ನಿರ್ಧಾರದಿಂದ ತಕ್ಷಣವೇ ಹಿಂದೆ ಸರಿಯಬೇಕು. ಪರೀಕ್ಷೆ ನಡೆಸಲೇಬೇಕು ಎಂದಾದರೆ ಅಕ್ಟೋಬರ್ ತಿಂಗಳವರೆಗೆ ಕಾಯ್ದು ನಡೆಸಲಿ' ಎಂದು ಒತ್ತಾಯಿಸಿದ್ದಾರೆ.

ಕರೋನಾ ಸೋಂಕು ಸಮುದಾಯ ಪ್ರಸರಣ ಭೀತಿಯ  ಹಿನ್ನೆಲೆಯಲ್ಲಿ ನೆರೆಯ ತೆಲಂಗಾಣ ರಾಜ್ಯದಲ್ಲಿ SSLC ಪರೀಕ್ಷೆಯನ್ನು ರದ್ದುಪಡಿಸಿ ಉತ್ತೀರ್ಣ ಗೊಳಿಸಲಾಗಿದೆ. ಅದೇ ರೀತಿಯಲ್ಲಿ ರಾಜ್ಯ ಸರ್ಕಾರ ನಿರ್ಧಾರ  ತಳೆಯಬಹುದು. ಪರೀಕ್ಷೆಗಳನ್ನು ನಡೆಸಲೇ ಬೇಕೆಂದರೆ ಅಕ್ಟೋಬರ್ ತಿಂಗಳವರೆಗೆ ಕಾಯಲಿ.

ಏನಾದರೂ ಅವಗಡಗಳು ಸಂಭವಿಸಿದರೆ ಶಿಕ್ಷಣ ಸಚಿವರು ಮತ್ತು ರಾಜ್ಯ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡುತ್ತೇನೆ. ಸರ್ಕಾರ ಈ ಬಗ್ಗೆ ತಕ್ಷಣವೇ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Trending News