ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳ ನಿವಾರಣೆಗೆ ಐದು ಅಂಶಗಳ ಕಾರ್ಯಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್

"ಶುದ್ಧ ಕುಡಿಯುವ ನೀರು, ರಸ್ತೆಗುಂಡಿ ಸಮಸ್ಯೆ ಸೇರಿದಂತೆ  ಬೆಂಗಳೂರಿನ ಪ್ರಮುಖ ಮೂಲಸೌಕರ್ಯ ಸಮಸ್ಯೆಗಳ ನಿವಾರಣೆಗೆ ಐದು ಅಂಶಗಳ ಕಾರ್ಯಕ್ರಮ ರೂಪಿಸಲಾಗಿದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

Written by - Prashobh Devanahalli | Edited by - Manjunath N | Last Updated : May 23, 2024, 10:32 PM IST
  • 182 ಕೆರೆಗಳಲ್ಲಿ 116 ಕೆರೆಗಳ ಒತ್ತುವರಿ ಬಗ್ಗೆ ಸರ್ವೇ ನಡೆಸಬೇಕಾಗಿದೆ
  • ಬಾಕಿ ಉಳಿದ ಕೆರೆಗಳನ್ನು ಸರ್ವೇ ಸಡೆಸಬೇಕು
  • ಹಾಗೂ ಬಿಬಿಎಂಪಿ ಆಸ್ತಿಗಳನ್ನು ಗುರುತು ಮಾಡಬೇಕು
 ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳ ನಿವಾರಣೆಗೆ ಐದು ಅಂಶಗಳ ಕಾರ್ಯಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್ title=

ಬೆಂಗಳೂರು, ಮೇ 23: "ಶುದ್ಧ ಕುಡಿಯುವ ನೀರು, ರಸ್ತೆಗುಂಡಿ ಸಮಸ್ಯೆ ಸೇರಿದಂತೆ  ಬೆಂಗಳೂರಿನ ಪ್ರಮುಖ ಮೂಲಸೌಕರ್ಯ ಸಮಸ್ಯೆಗಳ ನಿವಾರಣೆಗೆ ಐದು ಅಂಶಗಳ ಕಾರ್ಯಕ್ರಮ ರೂಪಿಸಲಾಗಿದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ವೈಯಾಲಿಕಾವಲ್ ನ ಐಟಿಪಿ ಕಚೇರಿಯಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಶಿವಕುಮಾರ್ ಅವರು ಹೇಳಿದ್ದಿಷ್ಟು;

"ಬಿಬಿಎಂಪಿ ಆಸ್ತಿಗಳ ಗುರುತಿಸುವಿಕೆ ಹಾಗೂ ಸಂರಕ್ಷಣೆ, ಆಸ್ತಿ ತೆರಿಗೆ, ರಾಜಕಾಲುವೆ, ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಈ ಐದು ಅಂಶಗಳ ಕಾರ್ಯಕ್ರಮದಲ್ಲಿ ಸೇರಿವೆ.

ಮುಖ್ಯಮಂತ್ರಿಗಳ ಜೊತೆಗೂಡಿ ಬುಧವಾರದಂದು ಬೆಂಗಳೂರು ನಗರದ ಒಂದಷ್ಟು ಭಾಗಗಳಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಅನೇಕ ಸಮಸ್ಯೆಗಳು ಕಂಡು ಬಂದ ಕಾರಣ ಬಿಬಿಎಂಪಿ ವಲಯ ಅಧಿಕಾರಿಗಳು ಸೇರಿದಂತೆ ಬೆಂಗಳೂರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಚರ್ಚೆ ನಡೆಸಲಾಯಿತು.

ಇದನ್ನೂ ಓದಿ: ಗಾಣಗಾಪುರ ದತ್ತಾತ್ರೇಯ ದೇವರ ಮೊರೆ ಹೋದ ರೇವಣ್ಣ

ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ಥಿ ಹಾಗೂ ನಗರದ ಎಲ್ಲಾ ಭಾಗಗಳಲ್ಲಿ ಸರಬರಾಜಾಗುವ ನೀರಿನ ಗುಣಮಟ್ಟದ ಪರೀಕ್ಷೆಯನ್ನು ಬಿಬಿಎಂಪಿ ನಡೆಸಬೇಕು ಹಾಗೂ ಗುಣಮಟ್ಟದ ಫಲಿತಾಂಶವನ್ನು ಬಿಡ್ಬ್ಲೂ ಎಸ್ ಎಸ್ ಬಿಗೆ ನೀಡಬೇಕು ಎಂದು ಸೂಚಿಸಲಾಗಿದೆ.

ರಾಜಕಾಲುವೆ ಒತ್ತುವರಿ ತೆರವಿಗೆ ನ್ಯಾಯಾಲಯ ಈ ಹಿಂದೆ ನಿರ್ದೇಶನ ನೀಡಿತ್ತು. ಅದರಂತೆ 2016-17 ರಲ್ಲಿ 2,626 ಒತ್ತುವರಿಗಳನ್ನು ಗುರುತಿಸಲಾಗಿತ್ತು. 2022- 23 ಹೊತ್ತಿಗೆ 556 ಒತ್ತುವರಿ ತೆರವು ಮಾಡಲಾಗಿತ್ತು. ಈಗ 1136 ಹೊಸದಾಗಿ ಒತ್ತುವರಿಗಳನ್ನು ಗುರುತಿಸಲಾಗಿದ್ದು, ಒಟ್ಟು 4,316 ಒತ್ತುವರಿಗಳನ್ನು ಗುರುತಿಸಲಾಗಿದೆ. ಸ್ಯಾಟ್ ಲೈಟ್, ಗೂಗಲ್ ಇಮೇಜ್ ಮತ್ತು ಸರ್ವೇ ಇಲಾಖೆ ಈ ಒತ್ತುವರಿ ಮಾಹಿತಿ ಸಂಗ್ರಹಿಸಿದೆ. ಒತ್ತುವರಿ ತೆರವುಗೊಳಿಸಲು ಬಿಎಂಟಿಎಫ್ ಗೆ ಕಾನೂನಾತ್ಮಕವಾಗಿ ಮತ್ತು ಎಲ್ಲಾ ರೀತಿಯ ಬೆಂಬಲ ನೀಡಬೇಕು ಎಂದು ಮಾರ್ಗದರ್ಶನ ನೀಡಲಾಗಿದೆ. 

ಬಾಗಿಲಿಗೆ ಬಂತು ಸರ್ಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಒತ್ತುವರಿ ವಿಚಾರವಾಗಿ ಬಂದಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ. 

182  ಕೆರೆಗಳಲ್ಲಿ 116 ಕೆರೆಗಳ ಒತ್ತುವರಿ ಬಗ್ಗೆ ಸರ್ವೇ ನಡೆಸಬೇಕಾಗಿದೆ. ಬಾಕಿ ಉಳಿದ ಕೆರೆಗಳನ್ನು ಸರ್ವೇ ಸಡೆಸಬೇಕು. ಹಾಗೂ ಬಿಬಿಎಂಪಿ ಆಸ್ತಿಗಳನ್ನು ಗುರುತು ಮಾಡಬೇಕು. ಪಾಲಿಕೆ ಆಸ್ತಿ ಸಂರಕ್ಷಣೆ ಸೇರಿದಂತೆ ಒತ್ತುವರಿ ತೆರವಿಗೆ ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಲಾಗಿದೆ. ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸುವ ಜವಾಬ್ದಾರಿಯನ್ನು ಬಿಡ್ಬ್ಲೂ ಎಸ್ ಎಸ್ ಬಿ ಗೆ ವಹಿಸಲಾಗಿದೆ. ಕೆರೆಗಳಲ್ಲಿ ನೀರಿದ್ದರೆ ಒತ್ತುವರಿ ತಪ್ಪುತ್ತದೆ, ಅಂತರ್ಜಲ ಹೆಚ್ಚುತ್ತದೆ. ಆದ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದೆ. 

ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ ಆನೆಗಳ ಗಣತಿ ಮುಕ್ತಾಯ

ನಗರದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳು ಇವೆ ಎಂದು ಸಿಎಂ ಮಾಹಿತಿ ನೀಡಿದ್ದರು. ಲೋಕಸಭಾ ಚುನಾವಣಾ ಫಲಿತಾಂಶ ಬಂದ ನಂತರ ಸಾರ್ವಜನಿಕರೇ ರಸ್ತೆಗುಂಡಿಗಳ ಫೋಟೋ ತೆಗೆದು ಮಾಹಿತಿ ನೀಡುವ ಆ್ಯಪ್ ಬಿಡುಗಡೆ ಮಾಡಲಾಗುವುದು. ಮುಂದಿನ 15 ದಿನಗಳಲ್ಲಿ ಎಲ್ಲಾ ರಸ್ತೆಗುಂಡಿಗಳನ್ನು ಮುಚ್ಚಬೇಕು ಎಂದು ತಿಳಿಸಲಾಗಿದೆ."

Trending News