ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ: ಬಿಜೆಪಿಗೆ ಬೆಂಡೆತ್ತಿದ ಎಚ್.ಡಿ.ಕುಮಾರಸ್ವಾಮಿ

ಮಾಜಿ ಸಿಎಂ, ಮಾಜಿ ಕೇಂದ್ರ ಮಂತ್ರಿ ಡಿ.ವಿ.ಸದಾನಂದಗೌಡರು ಬೆಲೆ ಏರಿಕೆಗೆ ಹಿಂದಿನ ಯುಪಿಎ ಸರ್ಕಾರ ಕಾರಣ ಎಂದಿದ್ದಾರೆ. 8 ವರ್ಷವಾದರೂ ಯುಪಿಎ ಮಾಡಿದ ತಪ್ಪು ಸರಿ ಮಾಡಲಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.

Written by - Zee Kannada News Desk | Last Updated : Apr 3, 2022, 01:13 PM IST
  • ಬಿಜೆಪಿ ಎಂದರೆ ಬಡವರ ರಕ್ತಹೀರಿ ಸಿರಿವಂತರ ಖಜಾನೆ ಭರ್ತಿ ಮಾಡುವ ‘ಬಲ್ಲಿದ ಜನರ ಪಕ್ಷʼ
  • ಬಿಜೆಪಿ ಎಂದರೆ ಬೆಲೆ ಶೂಲದಿಂದ ಬಡಜನರನ್ನು ಬರ್ಬಾದ್ ಮಾಡುತ್ತಿರುವ ಪಕ್ಷ
  • ಹಿಂದುತ್ವದ ವಿನಾಶಕ್ಕೆ ಹಿಂಸಾಚಾರದ ಶಂಖ ಊದಲಾಗಿದೆ ಅಂತಾ ಎಚ್‍ಡಿಕೆ ಕಿಡಿಕಾರಿದ್ದಾರೆ
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ: ಬಿಜೆಪಿಗೆ ಬೆಂಡೆತ್ತಿದ ಎಚ್.ಡಿ.ಕುಮಾರಸ್ವಾಮಿ title=
ಬಿಜೆಪಿ ವಿರುದ್ಧ ಗುಡುಗಿದ ಕುಮಾರಸ್ವಾಮಿ

ಬೆಂಗಳೂರು: ಪೆಟ್ರೋಲ್-ಡೀಸೆಲ್ ಬೆಲೆ(Petrol-Diesel price Hike) ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾನುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಹಲಾಲ್ ಹಾಲಾಹಲದ ನಡುವೆಯೇ ಇಂದು ಬೆಳಗ್ಗೆ ಬರಸಿಡಿಲಿನಂತೆ ಅಪ್ಪಳಿಸಿದ ಸುದ್ದಿ. ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ; 13 ದಿನಗಳಲ್ಲಿ 8 ರೂ. ಜಿಗಿತ! ಇದಪ್ಪಾ ‘ಬಹುಜನ ಹಿತಾಯ, ಬಹುಜನ ಸುಖಾಯʼ ಎಂದು ಭಾಷಣ ಬಿಗಿಯುವ ಬಿಜೆಪಿ ಆಡಳಿತ(BJP Government)ದಲ್ಲಿ ಇಂಡಿಯಾ ಶೈನಿಂಗ್!!’ ಅಂತಾ ಕುಟುಕಿದ್ದಾರೆ.

‘13 ದಿನದಿಂದ ಬೆಲೆ ಏರಿಕೆ ನಿರಂತರ. ಎರಡೂ ತೈಲಗಳ ಬೆಲೆ 8 ರೂ. ಹೆಚ್ಚಳ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ 108.99 ರೂ. (ಇಂದಿನ ಹೆಚ್ಚಳ:88 ಪೈಸೆ) ಡೀಸೆಲ್ ಬೆಲೆ ಲೀಟರಿಗೆ 92.83 ರೂ.(ಇಂದಿನ ಹೆಚ್ಚಳ:78 ಪೈಸೆ) ಜಿಗಿದಿದೆ. ಖಜಾನೆ ಭರ್ತಿಗೆ ಷೇರು ಸೂಚ್ಯಂಕವನ್ನು ಕುಣಿಸಿದಂತೆ, ಬೆಲೆ ಸೂಚ್ಯಂಕದ ಕರಡಿ ಕುಣಿತವೂ ಭರ್ಜರಿ’ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

‘2018ರಲ್ಲಿ ನಾನು ಸಿಎಂ ಆಗಿದ್ದಾಗ ಸಾಲ ಮನ್ನಾಕ್ಕಾಗಿ ಪೆಟ್ರೋಲ್ ಲೀಟರಿಗೆ 1.12 ಪೈಸೆ, & ಡೀಸೆಲ್ ಬೆಲೆಯಲ್ಲಿ ಲೀಟರಿಗೆ 1.14 ಪೈಸೆ ಹೆಚ್ಚಳ ಮಾಡಿದ್ದಕ್ಕೆ ಬಿಜೆಪಿ ನಾಯಕರು ಕೂಗಾಡಿ ಗಲಾಟೆ ಎಬ್ಬಿಸಿದ್ದರು. ಬೆಲೆ ಹೆಚ್ಚಳದ ಈ ಹಣ ರೈತರಿಗೆ ಹೋಗಿಬಿಡುತ್ತದಲ್ಲ ಎಂದು ಅವರ ಹೊಟ್ಟೆ ಉರಿದುಹೋಯಿತು. ಹಾದಿಬೀದಿಯಲ್ಲಿ ಖಾಲಿ ಸಿಲಿಂಡರುಗಳನ್ನು ಹೊತ್ತ ಬಿಜೆಪಿ(BJP)ಗರು ಈಗೇಕೆ ಮೌನಕ್ಕೆ ಶರಣಗಾಗಿದ್ದಾರೆ? ಬೆಲೆ ಏರಿಕೆಯಿಂದ ಬಡವರ ಹೊಟ್ಟೆ ಉರಿದರೆ ನಿಮಗೆ ಖುಷಿಯಾ? ಬನ್ನಿ, ಬೀದಿಗೆ ಬಂದು ಪ್ರತಿಭಟನೆ ಮಾಡಿ, ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ.ಗಳ ಅನುದಾನ:- ಸಿಎಂ ಬಸವರಾಜ ಬೊಮ್ಮಾಯಿ

‘ಸಿಮೆಂಟ್, ಕಬ್ಬಿಣ, ಆಹಾರ ಪದಾರ್ಥ ಸೇರಿ ಸಾಮಾನ್ಯ ವ್ಯಕ್ತಿ ಬಳಸುವ ಪ್ರತಿ ವಸ್ತುವಿನ ಬೆಲೆ ನಿತ್ಯವೂ ಜಿಗಿಯುತ್ತಿದೆ. ಶ್ರೀಸಾಮಾನ್ಯನು ಮನೆ ಕಟ್ಟುವ ಕನಸು ಇನ್ನು ಬರೀ ಕನಸೇ. ಅವನ ಜೇಬು ಖಾಲಿಯಾಗುತ್ತಿದೆ, ಕೆಲವರ ಜೇಬು ತುಂಬುತ್ತಿದೆ!! ಬಿಜೆಪಿ ಭಾರತದಲ್ಲಿ ಉದ್ಯಮಿಗಳು ಜಗತ್ತಿನ ಟಾಪ್ ಶ್ರೀಮಂತರಾಗುತ್ತಿದ್ದಾರೆ!!’ ಎಂದು ಟೀಕಿಸಿದ್ದಾರೆ.

‘ಹಿಜಾಬ್, ಕೇಸರಿ ಶಾಲು, ಟಿಪ್ಪು ಪಠ್ಯ, ಮುಸ್ಲಿಂ ವರ್ತಕರಿಗೆ ನಿಷೇಧ, ಹಲಾಲ್ ಕಟ್ ಬಗ್ಗೆ ಅಬ್ಬರಿಸಿ ಬೊಬ್ಬಿರಿಯುವ ‘ಶ್ರೀಮಂತರ ಪಕ್ಷ ಬಿಜೆಪಿʼಯು ಬೆಲೆ ಏರಿಕೆ ಬಗ್ಗೆ ಮಾತ್ರ ಮೌನವಾಗಿದೆ! ರಾಜ್ಯ ಸರಕಾರವೂ ಮೌನ!! ಮುಖ್ಯಮಂತ್ರಿಗಳೂ ಮೌನ!!! ಮೌನಂ ಶರಣಂ ಗಚ್ಛಾಮಿ’ ಎಂದು ವ್ಯಂಗ್ಯವಾಡಿದ್ದಾರೆ.

‘ಮೌನಿ ಪಕ್ಷ! ಮೌನಿ ಸರಕಾರ!! ಮೌನಿ ಮುಖ್ಯಮಂತ್ರಿ!!! ಡಾ.ಮನಮೋಹನ್ ಸಿಂಗ್(Manmohan Singh) ಅವರನ್ನು ‘ಮೌನಿ ಪ್ರಧಾನಿʼ ಎಂದ ಇವರ ಅಬ್ಬರ ಎಲ್ಲಿ ಉಡುಗಿ ಹೋಗಿದೆ? ದನಿಯೆತ್ತಿ ಬೆಲೆ ಏರಿಕೆ ವಿರುದ್ಧ. ಇದು ನನ್ನ ಆಗ್ರಹ. ಬೆಲೆ ಏರಿಕೆ ಬಗ್ಗೆ ಜನರ ಆಕ್ರೋಶ ಎಲ್ಲಿ ಆಸ್ಫೋಟಗೊಂಡು ಬಿಜೆಪಿ ಬುಡಕ್ಕೆಲ್ಲಿ ಬೆಂಕಿ ಬೀಳುತ್ತದೋ ಎಂಬ ಭಯದಿಂದ ಆ ಮುಗ್ಧಜನರ ಮನಸ್ಸನ್ನು ಸೂಕ್ಷ್ಮ ವಿಷಯಗಳ ಕಡೆ ಹೊರಳುವಂತೆ ಮಾಡಲಾಗಿದೆ. ‘150 ಸೀಟಿನ ರೋಡ್ ಮ್ಯಾಪ್ ಎಲ್ಲಿ ಮಣ್ಣುಪಾಲಾಗುತ್ತದೋʼ ಎಂದು ಹಿಂದುತ್ವದ ವಿನಾಶಕ್ಕೆ ಹಿಂಸಾಚಾರದ ಶಂಖ ಊದಲಾಗಿದೆ’ ಅಂತಾ ಎಚ್‍ಡಿಕೆ(HD Kumaraswamy) ಕಿಡಿಕಾರಿದ್ದಾರೆ.

ಇದನ್ನೂ ಓದಿ: ರಾಜ್ಯ & ಕೇಂದ್ರ ರಾಜಕೀಯದಲ್ಲಿ ಬದಲಾವಣೆ ಇಲ್ಲ: ಭವಿಷ್ಯ ನುಡಿದ ಗೊಂಬೆಗಳು!

‘ಮಾಜಿ ಸಿಎಂ, ಮಾಜಿ ಕೇಂದ್ರ ಮಂತ್ರಿ ಡಿ.ವಿ.ಸದಾನಂದಗೌಡ(DV Sadananda Gowda)ರು ಬೆಲೆ ಏರಿಕೆಗೆ ಹಿಂದಿನ ಯುಪಿಎ ಸರ್ಕಾರ ಕಾರಣ ಎಂದಿದ್ದಾರೆ. 8 ವರ್ಷವಾದರೂ ಯುಪಿಎ ಮಾಡಿದ ತಪ್ಪು ಸರಿ ಮಾಡಲಿಲ್ಲ ಏಕೆ? ಅಡುಗೆ ಮನೆಗಳಲ್ಲಿ ತಾಯಂದಿರು, ‘ಬೆಲೆ ಏರಿಕೆ ಬೆಂಕಿʼಯಲ್ಲಿ ಬೇಯುತ್ತಿದ್ದರೆ ನಿಮಗೆ ರಾಜಕೀಯ ಮುಖ್ಯವಾಗಿದೆ. ನಾಚಿಕೆಯಾಗಬೇಕು. ಬಿಜೆಪಿ ಎಂದರೆ ಭಾರತೀಯ ಜನತಾ ಪಕ್ಷವಲ್ಲ, ಬಡವರ ರಕ್ತಹೀರಿ ಸಿರಿವಂತರ ಖಜಾನೆ ಭರ್ತಿ ಮಾಡುವ ‘ಬಲ್ಲಿದ ಜನರ ಪಕ್ಷʼ. ಬೆಲೆ ಶೂಲದಿಂದ ಬಡಜನರನ್ನು ಬರ್ಬಾದ್ ಮಾಡುತ್ತಿರುವ ಪಕ್ಷ’ ಎಂದು ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News