ಬೆಂಗಳೂರು: ವಿಶ್ವದ ಟಾಪ್ 10 ವಿಶ್ವವಿದ್ಯಾಲಯಗಳ ಪೈಕಿ ನಮ್ಮ ರಾಜ್ಯದ ವಿಶ್ವವಿದ್ಯಾನಿಲಯಗಳು ಸ್ಥಾನ ಪಡೆಯದೇ ಇರುವುದು ನಮ್ಮಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬುದನ್ನು ತೋರಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಬೆಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಗುರುವಾರ ಹಮ್ಮಿಕೊಂಡಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 127ನೇ ಜಯಂತೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮಲ್ಲಿ ಸಾಕಷ್ಟು ವಿಶ್ವವಿದ್ಯಾನಿಲಯಗಳಿದ್ದರೂ ಗುಣಮಟ್ಟದ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ವಿಶ್ವದ ಪ್ರಮುಖ 10 ವಿಶ್ವವಿದ್ಯಾಲಯದಲ್ಲಿ ಸರಕಾರದ ವಿವಿಗಳು ಸ್ಥಾನ ಗಳಿಸಿಲ್ಲ. ನಮ್ಮಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಸಮ್ಮಿಶ್ರ ಸರಕಾರದ ಆದ್ಯತೆಯಲ್ಲಿ ಶಿಕ್ಷಣ ಪ್ರಮುಖವಾಗಿದೆ. ಈ ಕ್ಷೇತ್ರಕ್ಕೆ ಅನುದಾನ ನೀಡುವಲ್ಲಿ ಧಾರಾಳತೆ ತೋರಲಾಗಿದೆ. ಶಿಕ್ಷಣ ಸಂಸ್ಥೆಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇಂದು ದೇಶದಲ್ಲಿ ಜಾತಿ ವ್ಯವಸ್ಥೆ ಜೀವಂತವಾಗಿದೆ. ಎಷ್ಟೇ ಎತ್ತರದ ಸ್ಥಾನಕ್ಕೇರಿದರೂ ಜಾತಿಯಿಂದ ಗುರುತಿಸುವ ಸ್ಥಿತಿ ಈಗಲೂ ಇದೆ. ನಮ್ಮದೇಶ ಮುಂದುವರೆಯ ಬೇಕಿದ್ದರೆ ಈ ವ್ಯವಸ್ಥೆಯನ್ನು ಬುಡಸಮೇತ ಕಿತ್ತು ಹಾಕಬೇಕು. ಇಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯ ಎಂದರು.