ಬೆಂಗಳೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗೆ 'ಭಾರತ ರತ್ನ' ಪ್ರಶಸ್ತಿ ಘೋಷಿಸದ ಕೇಂದ್ರ ಸರ್ಕಾರ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಸಿದ್ದಗಂಗಾ ಶ್ರೀಗಳಿಗೆ ಭರತ್ ರತ್ನ ಪ್ರಶಸ್ತಿ ನೀಡುವಂತೆ ಸಿಎಂ ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಸಿದ್ದರಾಮಯ್ಯ ಅವರು ಶ್ರೀಗಳ ಹೆಸರನ್ನು ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿದ್ದರು. ಆದರೂ ಸಹ ಕೇಂದ್ರ ಸರ್ಕಾರ ಶ್ರೀಗಳ ಹೆಸರನ್ನು ಪರಿಗಣಿಸಿಲ್ಲ ಎಂದು ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ.
"ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಹಾಗೂ ಇನ್ನೂ ಹಲವು ಅರ್ಹ ಸಾಧಕರಿಗೆ ಪದ್ಮ ಪ್ರಶಸ್ತಿ ನಿರೀಕ್ಷಿಸಿದ್ದೆವು. ಇದು ಕೈಗೂಡದಿರುವುದು ನಿರಾಸೆ ತಂದಿದೆ" ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಕೆಲವು ಸಾಧಕರಿಗೆ ಮರಣೋತ್ತರವಾಗಿಯಾದರೂ ಈ ಪ್ರಶಸ್ತಿ ಘೋಷಣೆಯಾಗಿರುವುದು ಹರ್ಷ ತಂದಿದೆ.
ಆದರೆ ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಹಾಗೂ ಇನ್ನೂ ಹಲವು ಅರ್ಹ ಸಾಧಕರಿಗೆ ಪದ್ಮ ಪ್ರಶಸ್ತಿ ನಿರೀಕ್ಷಿಸಿದ್ದೆವು. ಇದು ಕೈಗೂಡದಿರುವುದು ನಿರಾಸೆ ತಂದಿದೆ.#ShivakumaraSwamiji— CM of Karnataka (@CMofKarnataka) January 25, 2019
ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿಯವರು ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಭಾಷಣದಲ್ಲಿ ಮತ್ತು ಟ್ವಿಟ್ಟರ್'ನಲ್ಲಿ ನೆನೆದರೇ ಹೊರತು, ಅವರಿಗೆ ಭಾರತ ರತ್ನ ನೀಡುವ ಪ್ರಯತ್ನ ಮಾಡಲಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಸಮಾಜ ಸೇವಕ ನಾನಾಜಿ ದೇಶಮುಖ್ ಮತ್ತು ಗಾಯಕ ಭೂಪೇನ್ ಹಜಾರಿಕಾ ಅವರಿಗೆ ದೇಶದ ಪ್ರತಿಷ್ಠಿತ ಪ್ರಶಸ್ತಿ 'ಭಾರತ ರತ್ನ'ವನ್ನು ಶುಕ್ರವಾರ ಕೇಂದ್ರ ಸರ್ಕಾರ ಘೋಷಿಸಿದೆ. ಭೂಪೇನ್ ದಾ ಹಾಗೂ ನಾನಾಜಿಯವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿ ಪುರಸ್ಕರಿಸಲಾಗಿದೆ.