ಕೋವಿಡ್-19 ನಿಯಂತ್ರಣ ಹಂತದಲ್ಲಿದೆ ಗೋವಿಂದ ಕಾರಜೋಳ

ಮಂಗಳೂರು ಮತ್ತು ಉಡಪಿ ಜಿಲ್ಲೆಯಿಂದ 63 ಬಸ್‍ಗಳ ಮೂಲಕ ಜಿಲ್ಲೆಯ ಒಟ್ಟು 1761 ಕಾರ್ಮಿಕರು ಬಂದಿದ್ದು, ಅವರೆಲ್ಲರನ್ನು ಹೋಮ್ ಕ್ವಾರಂಟೈನ್ ಮಾಡುವ ಮೂಲಕ ನಿಗಾವಹಿಸಬೇಕು.   

Last Updated : May 2, 2020, 06:37 AM IST
ಕೋವಿಡ್-19 ನಿಯಂತ್ರಣ ಹಂತದಲ್ಲಿದೆ ಗೋವಿಂದ  ಕಾರಜೋಳ title=

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಕರೋನವೈರಸ್ (Coronavirus)  ಕೋವಿಡ್-19 ವೈರಸ್ ನಿಯಂತ್ರಣದ ಹಂತಕ್ಕೆ ತಲುಪುತ್ತಿರುವುದಾಗಿ ಉಪ ಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ (Govind M Karjola)  ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾರ್ಚ 24 ರಿಂದ ಮೇ 3 ವರೆಗೆ ಒಟ್ಟು 40 ದಿನಗಳ ಲಾಕ್‍ಡೌನ್‍ನಿಂದಾಗಿ ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವಾಯಿತು. ಬರುವ ಮೇ 3ಕ್ಕೆ ಲಾಕ್‍ಡೌನ್ ಮುಕ್ತಾಯಗೊಳ್ಳಲಿದ್ದು, ಎಲ್ಲ ಉಸ್ತುವಾರಿ ಸಚಿವರು, ಅಧಿಕಾರಿಗಳ ಸಭೆ ಮಾಡಿ ಲಾಕ್‍ಡೌನ್ ಮುಂದುವರೆಸಬೇಕೇ ಎಂಬ ಬಗ್ಗೆ ಅಭಿಪ್ರಾಯ ಪಡೆಯಲಾಗುತ್ತಿದೆ. ಶನಿವಾರ ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿಗಳು ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆಂದು ತಿಳಿಸಿದರು.

ಮಂಗಳೂರು ಮತ್ತು ಉಡಪಿ ಜಿಲ್ಲೆಯಿಂದ 63 ಬಸ್‍ಗಳ ಮೂಲಕ ಜಿಲ್ಲೆಯ ಒಟ್ಟು 1761 ಕಾರ್ಮಿಕರು ಬಂದಿದ್ದು, ಅವರೆಲ್ಲರನ್ನು ಹೋಮ್ ಕ್ವಾರಂಟೈನ್ ಮಾಡುವ ಮೂಲಕ ನಿಗಾವಹಿಸಬೇಕು. ಬಾದಾಮಿ ಮತ್ತು ಹುನಗುಂದಕ್ಕೆ ಇನ್ನು ಹೆಚ್ಚು ಜನ ಕಾರ್ಮಿಕರು ಬರಲಿದ್ದಾರೆ. ಅಲ್ಲದೇ ರಾಜಸ್ಥಾನದಿಂದ 14 ಜನ ವಿದ್ಯಾರ್ಥಿಗಳು ಶನಿವಾರ ಜಿಲ್ಲೆಗೆ ಆಗಮಿಸಲಿದ್ದಾರೆ. ಹೊರ ರಾಜ್ಯದಿಂದ ಬಂದವರನ್ನು ಇನ್ಸಿಟ್ಯೂಟ್‍ನಲ್ಲಿ ಕ್ವಾರಂಟೈನ್ ಮಾಡಿ, ದಿನನಿತ್ಯ ಆರೋಗ್ಯ ತಪಾಸಣೆಗೆ ಒಳಪಿಸಬೇಕು. ಚೆಕ್‍ಪೋಸ್ಟ್‍ಗಳು ಬಿಗಿಗೊಳಿಸಿ, ಕಾರ್ಯಪಡೆ ಚುರುಕುಗೊಳಿಸಲು ತಿಳಿಸಿದರು. 

ಜಿಲ್ಲೆಯ ಹಡಪದ ಅಪ್ಪನ್ನ ಸನಾಂಗದವರಿಗೆ ಈಗಾಗಲೇ 1980 ವಿಶೇಷ ಕಿಟ್ ವಿತರಿಸಲಾಗಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನಯೋಜನೆಯಡಿ ಏಪ್ರೀಲ್ ಮತ್ತು ಮೇ ಮಾಹೆಯ ಎರಡು ತಿಂಗಳ ಆಹಾರಧಾನ್ಯವನ್ನು ಮೇ ತಿಂಗಳಲ್ಲಿ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರದಾರರಿಗೆ ಉಚಿತವಾಗಿ ಅಕ್ಕಿ ಮತ್ತು ತೊಗರಿಬೇಳೆ ನೀಡಲಾಗುತ್ತಿದೆ. 142,690 ಕ್ವಿಂಟಲ್ ಅಕ್ಕಿಯನ್ನು ವಿತರಿಸಲಾಗುತ್ತಿದೆ ಎಂದರು. ಬಡ ಎಸ್.ಸಿ, ಎಸ್‍ಟಿ ಜನಾಂಗದವರಿಗೆ ತರಕಾರಿ ಖರೀದಿಗೆ ಒತ್ತುಗಾಡಿಗಾಗಿ 50 ಸಾವಿರ ಬಂಡವಾಳ ನೀಡಲಾಗುತ್ತಿದ್ದು, ಹೆಣ್ಣು ಮಕ್ಕಳಿಗೆ ಆದ್ಯತೆ ನೀಡಲಾಗುತ್ತಿದೆ. ಕೃಷಿ ಚಟುವಟಿಕೆಗಳಿಗೆ ಬೀಜ ಮತ್ತು ಗೊಬ್ಬರಗಳ ಕೊರತೆ ಇರುವುದಿಲ್ಲ ಎಂದರು.

ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಜಿಲ್ಲೆಯಲ್ಲಿ ಸದ್ಯ 4 ಚೆಕ್ ಪೋಸ್ಟಗಳು ಕಾರ್ಯನಿರ್ವಹಿಸುತ್ತಿದ್ದು, 1.37 ಲಕ್ಷ ಜನರನ್ನು ತಪಾಸಣೆ, 35567 ವಾಹನಗಳ ತಪಾಸಣೆ ಮಾಡಲಾಗಿದೆ. ಮಂಗಳೂರು ಮತ್ತು ಉಡುಪಿಯಿಂದ ಕಾರ್ಮಿಕರು ಬಂದಿದ್ದು, ಜಿ.ಪಂ ಸಿಇಓ ನೇತೃತ್ವದಲ್ಲಿ ರಚಿಸಲಾದ ಗ್ರಾಮೀಣ ಕಾರ್ಯಪಡೆಯ ಮೂಲಕ ಜಿಲ್ಲೆಗೆ ಆಗಮಿಸಿದ ಕಾರ್ಮಿಕರನ್ನು ಹೋಮ್ ಕ್ವಾರಂಟೈನ್‍ಗೆ ಒಳಪಡಿಸಿ ನಿಗಾವಹಿಸುವ ಕಾರ್ಯ ಮಾಡುತ್ತಿದ್ದಾರೆ. ಬೇರೆ ಜಿಲ್ಲೆಯಿಂದ ಬಂದ ಕಾರ್ಮಿಕರು 28 ದಿನ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಆದರೂ ಸಹ ಬಾಗಲಕೋಟೆಗೆ ಬಂದಾಗಲೂ ತಪಾಸಣೆ ಮಾಡಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೋವಿಡ್ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದ್ದು, ಇಲ್ಲಿವರೆಗೆ ಒಟ್ಟು 205 ಕರೆಗಳು ಬಂದಿವೆ. ಅವೆಲ್ಲವುಗಳನ್ನು ಬಗೆಹರಿಸಲಾಗಿದೆ. ಕೋವಿಡ್‍ಗೆ ಯಾವುದೇ ಸಿಬ್ಬಂದಿಗಳ ಕೊರತೆ ಇಲ್ಲ. ಜಿಲ್ಲೆಯಿಂದ ಈ ವರೆಗೆ 2874 ಸ್ಯಾಂಪಲ್ ಕಳುಹಿಸಲಾಗಿದೆ. 306 ಸ್ಯಾಂಪಲ್ ವರದಿ ಬರಬೇಕಾಗಿದೆ. 29 ಪಾಜಿಟಿವ್ ಕೇಸ್ ಬಂದಿದ್ದು, ಯಾವುದೇ ಸಮಸ್ಯೆ ಇರುವುದಿಲ್ಲ. 14 ಫೀವರ್ ಕ್ಲಿನಿಕ್, 1 ಮೊಬೈಲ್ ಪೀವರ್ ಕ್ಲಿನಿಕ್, 22 ಕ್ವಾರಂಟೈನ್ ಸೆಂಟರ್ ಇರುವುದಾಗಿ ತಿಳಿಸಿದರು.

ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಡಾ.  ವೀರಣ್ಣ ಚರಂತಿಮಠ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಕೋವಿಡ್ ವಿಶೇಷ ಎಡಿಸಿ ಬಿ.ಆರ್. ಸೋಮಣ್ಣವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎ.ಎನ್. ದೇಸಾಯಿ, ಮತ್ತಿರರು ಉಪಸ್ಥಿತರಿದ್ದರು.

Trending News