ದಲಿತ ಮುಖ್ಯಮಂತ್ರಿ ವಿಚಾರ: ಡಿಕೆಶಿಗೆ ತಿರುಗೇಟು ನೀಡಿದ ಬಿಜೆಪಿ

ಡಿಕೆಶಿಯವರೇ ನಿಮಗೆ ನಿಜಕ್ಕೂ‌ ದಲಿತರ ಮೇಲೆ ಕಾಳಜಿಯಿದ್ದರೆ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತರನ್ನೇ ಸಿಎಂ‌ ಮಾಡುತ್ತೇವೆ ಎಂದು ಘೋಷಿಸಿ ಎಂದು ಬಿಜೆಪಿ ಸವಾಲು ಹಾಕಿದೆ.

Written by - Zee Kannada News Desk | Last Updated : Jun 27, 2022, 01:38 PM IST
  • ದಲಿತ‌ ಸಿಎಂ ವಾದ ತೀವ್ರಗೊಂಡಿದ್ದ ಸಂದರ್ಭದಲ್ಲಿ ಸೌಜನ್ಯಕ್ಕೂ ಡಿಕೆಶಿ ಬಾಯಿ ತೆರೆಯಲಿಲ್ಲ
  • ಸಂಪುಟದಿಂದ ಸಿದ್ದರಾಮಯ್ಯ‌‌ ನಿಮ್ಮನ್ನು‌ ಕಿತ್ತೊಗೆಯುತ್ತಿದ್ದರು ಎಂಬ ಭಯ ಕಾಡುತ್ತಿತ್ತೇ ಡಿಕೆಶಿ?
  • ಕಾಂಗ್ರೆಸ್‌ ನಾಯಕರಿಗೆ ಅಧಿಕಾರದಲ್ಲಿದ್ದಾಗ ದಲಿತರ ಮೇಲಿನ ಕಾಳಜಿ‌ ಮರೆತು ಹೋಗುತ್ತದೆ
ದಲಿತ ಮುಖ್ಯಮಂತ್ರಿ ವಿಚಾರ: ಡಿಕೆಶಿಗೆ ತಿರುಗೇಟು ನೀಡಿದ ಬಿಜೆಪಿ title=
ಡಿಕೆಶಿ ಹೇಳಿಕೆಗೆ ಬಿಜೆಪಿ ತಿರುಗೇಟು

ಬೆಂಗಳೂರು: ದಲಿತರು ಯಾಕೆ ಸಿಎಂ ಆಗಬಾರದು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಿಜೆಪಿ ತಿರುಗೇಟು ನಿಡಿದೆ. ಈ ಬಗ್ಗೆ ಸೋಮವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಹೌದು, ಡಿಕೆಶಿಯವರೇ ದಲಿತರು ಯಾಕೆ ಮುಖ್ಯಮಂತ್ರಿ ಆಗಬಾರದು? ಆದರೆ, ಈ ನೀವು ಈ ಪ್ರಶ್ನೆ ಕೇಳಲು ಅರ್ಹರಲ್ಲ, ಏಕೆಂದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುನ್ನೆಲೆಗೆ ಬಂದ ದಲಿತ ಸಿಎಂ ವಿಚಾರದಲ್ಲಿ ಸರ್ವಾಂಗವನ್ನೂ ಸ್ತಬ್ಧಗೊಳಿಸಿಕೊಂಡಿದ್ದಿರಲ್ಲವೇ?’ ಎಂದು ಪ್ರಶ್ನಿಸಿದೆ.

ದಲಿತ‌ ಮುಖ್ಯಮಂತ್ರಿ ವಾದ ತೀವ್ರಗೊಂಡಿದ್ದ ಸಂದರ್ಭದಲ್ಲಿ ಡಿಕೆಶಿಯವರು ಸೌಜನ್ಯಕ್ಕೂ ಬಾಯಿ ತೆರೆಯಲಿಲ್ಲ. ಸಂಪುಟದಿಂದ ಸಿದ್ದರಾಮಯ್ಯ‌‌ ನಿಮ್ಮನ್ನು‌ ಕಿತ್ತೊಗೆಯುತ್ತಿದ್ದರು ಎಂಬ ಭಯ ಕಾಡುತ್ತಿತ್ತೇ ಡಿಕೆಶಿ? ಮೂಲ‌‌ ಕಾಂಗ್ರೆಸ್ಸಿಗರೇ ಎತ್ತಿದ್ದ ಈ ವಾದಕ್ಕೆ ಡಿಕೆಶಿ ಬೆಂಬಲ ನೀಡದೇ ಇದ್ದಿದ್ದೇಕೆ? ದಲಿತರು ಮುಖ್ಯಮಂತ್ರಿ ಆದರೆ ತಪ್ಪೇನು ಎಂದು ಅಕಾಲದಲ್ಲಿ ವಾದ ಮಾಡುವ ಕಾಂಗ್ರೆಸ್‌ ನಾಯಕರಿಗೆ ಅಧಿಕಾರದಲ್ಲಿದ್ದಾಗ ದಲಿತರ ಮೇಲಿನ ಕಾಳಜಿ‌ ಮರೆತು ಹೋಗುತ್ತದೆ. ಇದಕ್ಕೆ ಸಿದ್ದರಾಮಯ್ಯನವರೂ ಹೊರತಲ್ಲ, ಡಿಕೆಶಿಯೂ ಅಪವಾದವಲ್ಲ. ಅಧಿಕಾರಕ್ಕಾಗಿ ಓಲೈಕೆ ರಾಗವಷ್ಟೇ!’ ಎಂದು ಟೀಕಿಸಿದೆ.

ಇದನ್ನೂ ಓದಿ: ಮತ್ತೆ ಭುಗಿಲೇಳುತ್ತಾ ಧರ್ಮ ದಂಗಲ್ ? ಶಕ್ತಿ ಪ್ರದರ್ಶನಕ್ಕೆ ಮುಸಲ್ಮಾನರ ಮೆಗಾ ಪ್ಲ್ಯಾನ್ .!

‘ಡಿಕೆಶಿಯವರೇ ನಿಮಗೆ ನಿಜಕ್ಕೂ‌ ದಲಿತರ ಮೇಲೆ ಕಾಳಜಿಯಿದ್ದರೆ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತರನ್ನೇ ಸಿಎಂ‌ ಮಾಡುತ್ತೇವೆ ಎಂದು ಘೋಷಿಸಿ. ಆಷಾಢಭೂತಿತನದ ಪ್ರದರ್ಶನವೇಕೆ? ಕೆಪಿಸಿಸಿ ಅಧ್ಯಕ್ಷರು ದಲಿತರನ್ನು ಸಿಎಂ ಮಾಡುವ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಸಿದ್ದರಾಮಯ್ಯ? ದಲಿತರನ್ನು ಸಿಎಂ ಮಾಡುವ ಬದ್ಧತೆ ನಿಜಕ್ಕೂ ಕಾಂಗ್ರೆಸ್‌ ಪಕ್ಷಕ್ಕಿದೆಯೇ?’ ಎಂದು ಪ್ರಶ್ನಿಸಿದೆ.

‘ಇಂದು ಬೆಂಗಳೂರಿನ ನಿರ್ಮಾರ್ತೃ ಕೆಂಪೇಗೌಡರ ಜಯಂತಿ. ಕಾಂಗ್ರೆಸ್‌ ಕೆಂಪೇಗೌಡರಿಗೆ ಅವಮಾನ ಮಾಡಿದ್ದು ಸರಿಯೇ? 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿದ್ದ ನಾಡಪ್ರಭು ಕೆಂಪೇಗೌಡರ ಪಾಠವನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತೆಗೆದು ಹಾಕಲಾಯಿತು. ಕೆಂಪೇಗೌಡರಿಗೆ ಕಾಂಗ್ರೆಸ್‌ ನೀಡುವ ಗೌರವ ಇದೇನಾ? ಬೆಂಗಳೂರಿನ ಅಭಿವೃದ್ಧಿಯಲ್ಲಿ ಕೆಂಪೇಗೌಡರ ಕೊಡುಗೆಯ ಬಗ್ಗೆ ಇಂದಿನ ಯುವಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಂಪೇಗೌಡರ ಪಠ್ಯವನ್ನು ಸೇರಿಸಿತ್ತು. ಆದರೆ, ಅದೇ ಪಠ್ಯಪುಸ್ತಕವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹರಿದು ಬಿಸಾಡಿದರು. ಇದು ನಾಡಪ್ರಭುವಿಗೆ ಮಾಡಿದ ಅವಮಾನವಲ್ಲವೇ?’ ಎಂದು ಬಿಜೆಪಿ ಪ್ರಶ್ನಿಸಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.

ಇದನ್ನೂ ಓದಿ: ALERT! ಪ್ರತಿಷ್ಠಿತರ ಡಿಪಿ ಬಳಸಿ WhatsAppನಲ್ಲಿ ವಂಚನೆಗೆ ಯತ್ನ

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿಯು ಕೆಂಪೇಗೌಡರ ಪಾಠವನ್ನು ಕೈಬಿಟ್ಟಾಗ ಅಂದಿನ ಸಿಎಂ ಸಿದ್ದರಾಮಯ್ಯ ಅವರಾಗಲಿ, ಡಿಕೆಶಿಯಾಗಲಿ ಯಾರೂ ಇದರ ಬಗ್ಗೆ ಪ್ರಶ್ನಿಸಲಿಲ್ಲ. ಸಮಿತಿಯ ವರದಿಯನ್ನು ಸಾರಾಸಗಟಾಗಿ ಕಾಂಗ್ರೆಸ್‌ ಒಪ್ಪಿಕೊಂಡಿತ್ತು ಹಾಗೂ ಆ ಮೂಲಕ ಕೆಂಪೇಗೌಡರಿಗೆ ಅವಮಾನ ಮಾಡಿತು’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News