ಬೆಂಗಳೂರು: ಬಿಬಿಎಂಪಿ ಶಾಲಾ ಕಾಲೇಜುಗಳನ್ನು ಉನ್ನತೀಕರಿಸಲು ಮುಂದಾಳತ್ವ ವಹಿಸಿದಂತೆ ಕೆರೆಗಳ ಅಭಿವೃದ್ಧಿ ಪಡಿಸಲೂ ಕಾರ್ಪೋರೇಟ್ ಕಂಪನಿಗಳು ಮುಂದಾಗಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಕಾರ್ಪೋರೇಟ್ ಕಂಪನಿಗಳಿಗೆ ಕರೆ ನೀಡಿದರು.
ಬಿಬಿಎಂಪಿಯ ಶಾಲಾ ಕಾಲೇಜುಗಳನ್ನು ಉನ್ನತೀಕರಿಸಲು ಮೈಕ್ರೋಸಾಫ್ಟ್ ಕಂಪನಿ ಸಹಯೋಗದಲ್ಲಿ ಬುಧವಾರ ಟೌನ್‌ಹಾಲ್‌ನಲ್ಲಿ ರೋಶಿನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ ಸಾಕಷ್ಟು ಕೆರೆಗಳು ಇದ್ದವು. ರಿಯಲ್ ಎಸ್ಟೇಟ್‌ನಿಂದಾಗಿ ಹಲವು ಕೆರೆಗಳು ಮುಚ್ಚಿ ಹೋಗಿವೆ. ಈಗಿರುವ ಕೆರೆಗಳನ್ನು ಕಾಪಾಡಿಕೊಳ್ಳಬೇಕಿದೆ. ಈ ಕೆರೆಗಳ ಅಭಿವೃದ್ಧಗೆ ಕಾರ್ಪೋರೇಟ್ ಕಂಪನಿಗಳು ಆಸಕ್ತಿ ತೋರಲಿ ಎಂದರು.
ಇತ್ತೀಚೆಗೆ ರಸ್ತೆ ಗುಂಡಿ ಮುಚ್ಚಲು ನ್ಯಾಯಾಲಯ ಆದೇಶ ನೀಡಿದೆ. ಹೈಕೋರ್ಟ್ ಆದೇಶದ ವರೆಗೂ ಅಧಿಕಾರಿಗಳು ಕೆಲಸ ಮಾಡದೇ ಕೂರುವುದು ನನಗೂ ಬೇಸರವಿದೆ. ಬಿಬಿಎಂಪಿಯಲ್ಲಿ ಹಣದ ಸಮಸ್ಯೆ ಇಲ್ಲ, ಆದರೆ ಕೆಲಸವಾಗಬೇಕಿದೆ ಎಂದರು.
ಬಿಬಿಎಂಪಿ ಶಾಲೆಗಳು ಕಷ್ಟದ ಸ್ಥಿತಿಯಲ್ಲಿವೆ. ಬಡತನ ರೇಖೆಗಿಂತ ಕೆಳಗಿರುವ ಮಕ್ಕಳು ಇಲ್ಲಿ ದಾಖಲಾಗುತ್ತಾರೆ. ಬಡ ಮಕ್ಕಳಿಗೆ ಶಿಕ್ಷಣ ಸಿಗಬೇಕೆಂಬ ಕಾರಣಕ್ಕೆ 1 ಸಾವಿರ ಕೋಟಿ ರೂ. ನೀಡಲಾಗಿದೆ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಶೇ. 12 ರಷ್ಟಿದ್ದ ಸಾಕ್ಷರತ ಪ್ರಮಾಣ ಇಂದು ಶೇ.80 ರಷ್ಟಾಗಿದೆ.
ಇಂದು ತಂತ್ರಜ್ಞಾನದಲ್ಲಿ ಭಾರತ ಮುಂದಿದೆ ಎಂದರೆ ಅದಕ್ಕೆ ಶಿಕ್ಷಣ ಕಾರಣ. ಈಗ ಮೈಕ್ರೋಸಾಫ್ಟ್ ಕಂಪನಿ ಈ ಹೊಸ ಪ್ರಯೋಗ ಯಶಸ್ವಿಯಾಗುವ ಭರವಸೆ ಇದೆ. ವಿಶ್ವದಲ್ಲೇ ಮೊದಲ ಪ್ರಯೋಗ ಇದಾಗಿದ್ದು, ಇದಕ್ಕೆ ಬಿಬಿಎಂಪಿ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ನಗರದಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಇನ್ನೆರಡು ತಿಂಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಳಿಸಲಾಗುತ್ತಿದೆ. ಐದು ವರ್ಷದೊಳಗೆ ಎಲ್ಲ ಡೀಸೆಲ್ ಪೆಟ್ರೋಲ್ ಬಸ್‌ಗಳ ಬದಲಿಗೆ ಎಲೆಕ್ಟ್ರಿಕ್ ಬಸ್‌ಗಳನ್ನೇ ಹಾಕಲಾಗುವುದು ಎಂದು ಅವರು ಹೇಳಿದರು.