ಕೇಂದ್ರ ಸಚಿವರಾಗಿ ಆಯ್ಕೆಯಾದ ರಾಜ್ಯ ಸಂಸದರಿಂದ ನಿಖಿಲ್ ನಿರೀಕ್ಷೆ ಏನು ಗೊತ್ತಾ?

ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಮಂಡ್ಯದಲ್ಲಿ ಗೆಲುವು ಸಾಧಿಸದೆ ಇರುವುದಕ್ಕೆ, ಪಕ್ಷದ ಅಭ್ಯರ್ಥಿಯಾಗಿ ನಾನೇ ಹೊಣೆ. ಇದಕ್ಕಾಗಿ ಯಾರನ್ನೂ ದೂಷಿಸುವುದಿಲ್ಲ. ಹಿನ್ನಡೆಗೆ ಕಾರಣಗಳನ್ನು ನೀಡುವ ಬದಲು ಅದರ ಸಂಪೂರ್ಣ ಜವಾಬ್ದಾರಿಯನ್ನು ನಾನೇ ಹೊತ್ತುಕೊಳ್ಳುತ್ತೇನೆ- ನಿಖಿಲ್ ಕುಮಾರಸ್ವಾಮಿ

Last Updated : May 31, 2019, 05:01 PM IST
ಕೇಂದ್ರ ಸಚಿವರಾಗಿ ಆಯ್ಕೆಯಾದ ರಾಜ್ಯ ಸಂಸದರಿಂದ ನಿಖಿಲ್ ನಿರೀಕ್ಷೆ ಏನು ಗೊತ್ತಾ? title=
Pic Courtesy: Facebook@iamNikhilGowda

ಬೆಂಗಳೂರು: ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ರಾಜ್ಯದ ಸಂಸತ್ ಸದಸ್ಯರಿಗೆ ನಿಖಿಲ್ ಕುಮಾರಸ್ವಾಮಿ ಅಭಿನಂದಿಸಿದ್ದಾರೆ.

ತಮ್ಮ ಫೇಸ್ ಬುಕ್ ಖಾತೆ ಮೂಲಕ ಕೇಂದ್ರ ಸಚಿವರಾಗಿ ಆಯ್ಕೆಯಾದ ರಾಜ್ಯ ಸಂಸದರಿಂದ ಅಭಿನಂದನೆ ಸಲ್ಲಿಸಿರುವ ನಿಖಿಲ್, ರಾಜ್ಯದ ಹಿತವನ್ನು ಕಾಪಾಡುವ ಜೊತೆಗೆ, ವಿಶೇಷವಾಗಿ ನಮ್ಮ ರೈತರ ಹಾಗೂ ಬಡವರ ಪರವಾಗಿ, ಅವರ ಏಳಿಗೆಗಾಗಿ, ನಿಮ್ಮ ಪ್ರಯತ್ನಗಳು ಇರಲಿವೆ ಎಂದು ಎಲ್ಲ ಕನ್ನಡಿಗರಂತೆ, ನಾನೂ ಕೂಡ ನಿರೀಕ್ಷಿಸುತ್ತಿದ್ದೇನೆ ಎಂದಿದ್ದಾರೆ.

ಮಂಡ್ಯದಿಂದ ಆಯ್ಕೆಯಾಗಿರುವ ಸಂಸತ್ ಸದಸ್ಯರಾದ ಶ್ರೀಮತಿ ಸುಮಲತಾ ಅಂಬರೀಷ್ ಅವರಿಗೆ ನನ್ನ ಅಭಿನಂದನೆಗಳು ಎಂದು ಶುಭ ಕೋರಿರುವ ನಿಖಿಲ್ ಕುಮಾರಸ್ವಾಮಿ, ಕೇಂದ್ರ ಸರ್ಕಾರದಿಂದ ಅಗತ್ಯ ಬೆಂಬಲ, ನೆರವು ಸಿಗದೆ ನಮ್ಮ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ವಿಶೇಷ ನೆರವಿಗಾಗಿ ಬೇಡಿಕೆ ಹೊತ್ತು ರಾಜ್ಯಸರ್ಕಾರ ಕೇಂದ್ರಕ್ಕೆ ನಿಯೋಗಗಳನ್ನು ಕರೆದೊಯ್ದು, ಬರಿಗೈಯಲ್ಲಿ ಮರಳುತ್ತಿರುವುದನ್ನು ಕೂಡ ರಾಜ್ಯದ ಜನ ನೋಡುತ್ತಲೇ ಬಂದಿದ್ದಾರೆ. ಈಗ ಕೇಂದ್ರದಲ್ಲಿ ಆಳುವ ಪಕ್ಷದ ಬೆಂಬಲದೊಂದಿಗೆ ಇಲ್ಲಿ ನೀವು ಗೆದ್ದಿರುವುದರಿಂದ, ನಮ್ಮ ರೈತರಿಗೆ ಅರ್ಹ ನೆರವು, ಯೋಜನೆಗಳನ್ನು ತರುವಲ್ಲಿ ತಾವು ಯಶಸ್ವಿಯಾಗುವಿರಿ ಎನ್ನುವುದು ಮಂಡ್ಯದ ಜನರ ಹಾಗೂ ರೈತರ ನಿರೀಕ್ಷೆಯಾಗಿದೆ ಎಂದು ತಿಳಿಸಿದ್ದಾರೆ.

ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗುವುದಿಲ್ಲ:
ಇದೇ ವೇಳೆ ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಮಂಡ್ಯದಲ್ಲಿ ಗೆಲುವು ಸಾಧಿಸದೆ ಇರುವುದಕ್ಕೆ, ಪಕ್ಷದ ಅಭ್ಯರ್ಥಿಯಾಗಿ ನಾನೇ ಹೊಣೆ ಎಂದಿರುವ ಅವರು ಇದಕ್ಕಾಗಿ ಯಾರನ್ನೂ ದೂಷಿಸುವುದಿಲ್ಲ ಎಂದಿದ್ದಾರೆ. ಹಿನ್ನಡೆಗೆ ಕಾರಣಗಳನ್ನು ನೀಡುವ ಬದಲು ಅದರ ಸಂಪೂರ್ಣ ಜವಾಬ್ದಾರಿಯನ್ನು ನಾನೇ ಹೊತ್ತುಕೊಳ್ಳುತ್ತೇನೆ. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗುವುದಿಲ್ಲ, ಇಲ್ಲೆ ಇರುತ್ತೇನೆ, ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದ 5.77 ಲಕ್ಷ ಜನರ ನಿರೀಕ್ಷೆಗಳಿಗೆ ನಾನು ಉತ್ತರದಾಯಿಯಾಗಿದ್ದೇನೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಜನರ ಆಶೀರ್ವಾದ ಪಡೆಯುವ ನಿಟ್ಟಿನಲ್ಲಿ ನನ್ನ ಪ್ರಯತ್ನ ಮುಂದುವರಿಯಲಿದೆ ಎಂದು ಬರೆದಿದ್ದಾರೆ.

ಜೆಡಿಎಸ್ ಪಕ್ಷದ ಬಲವರ್ಧನೆಗಾಗಿ ನನ್ನ ಪ್ರಯತ್ನ ಮುಂದುವರಿಯಲಿದೆ:
ಪಕ್ಷದ ಯಶಸ್ಸಿಗಾಗಿ ಶ್ರಮಿಸಿದ ಪ್ರತಿಯೊಬ್ಬ ಕಾರ್ಯಕರ್ತರ ಪರಿಶ್ರಮ, ನಮ್ಮನ್ನು ಬೆಂಬಲಿಸಿದ ಜನರ ಪ್ರೀತಿ-ಅಭಿಮಾನಗಳ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ನಮ್ಮ ಜೆಡಿಎಸ್ ಪಕ್ಷದ ಸಾವಿರಾರು ನಿಷ್ಠಾವಂತ ಕಾರ್ಯಕರ್ತರ ಜೊತೆಗೆ ಪಕ್ಷ ಸಂಘಟನೆಯ ಕಾರ್ಯದಲ್ಲಿ ನಾನು ತೊಡಗಿಕೊಳ್ಳುತ್ತೇನೆ. ಜೆಡಿಎಸ್ ಪಕ್ಷದ ಬಲವರ್ಧನೆಗಾಗಿ ನನ್ನ ಪ್ರಯತ್ನ ಮುಂದುವರಿಯಲಿದೆ. ನನ್ನನ್ನು ಬೆಂಬಲಿಸಿ, ಆಶೀರ್ವದಿಸಿದ ಎಲ್ಲ ನನ್ನ ಮಂಡ್ಯದ ಬಂಧುಗಳಿಗೆ, ಹಿರಿಯರಿಗೆ, ತಾಯಂದಿರಿಗೆ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ನಿಖಿಲ್ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

Trending News