ನಾಳೆ ಗದ್ದೆಗಿಳಿದು ಭತ್ತ ನಾಟಿ ಮಾಡಲಿದ್ದಾರೆ ಸಿಎಂ ಕುಮಾರಸ್ವಾಮಿ!

ಸದಾ ಪ್ಯಾಂಟು, ಶರ್ಟು ಧರಿಸಿ ಸಭೆ, ಸಮಾರಂಭಗಳಲ್ಲಿ ಭಾಗವಹಿಸುವ ಸಿಎಂ, ಈ ಬಾರು ಮಣ್ಣಿನ ಮಗನಾಗಿ ರೈತನ ಗೆಟಪ್'ನಲ್ಲಿ ಗದ್ದೆಗೆ ಇಳಿಯಲಿದ್ದಾರೆ. 

Last Updated : Aug 10, 2018, 06:04 PM IST
ನಾಳೆ ಗದ್ದೆಗಿಳಿದು ಭತ್ತ ನಾಟಿ ಮಾಡಲಿದ್ದಾರೆ ಸಿಎಂ ಕುಮಾರಸ್ವಾಮಿ! title=

ಮೈಸೂರು: ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಾವು ಮಣ್ಣಿನ ಮಗ ಎಂಬುದನ್ನು ಸಾಬೀತು ಮಾಡಲು ಹೊರಟಿದ್ದಾರೆ. ರೈತರಿಗೆ ಕೃಷಿಯ ಬಗ್ಗೆ ಅರಿವು ಮೂಡಿಸಿ, ನೈತಿಕ ಧೈರ್ಯ ತುಂಬುವ ಉದ್ದೇಶದಿಂದ ಸ್ವತಃ ಸಿಎಂ ಅವರೇ ಗದ್ದೆಗಿಳಿದು ಭತ್ತ ನಾಟಿ ಮಾಡಲಿದ್ದಾರೆ. 

ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ರೈತರಿಗೆ ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವಿ ಮಾಡಿರುವ ಬೆನ್ನಲ್ಲೇ, ಆಗಸ್ಟ್ 11ರಂದು ಮಂಡ್ಯ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ಹಳ್ಳಿ ಗೆಟಪ್ ಧರಿಸಿ ಭತ್ತ ನಾಟಿ ಮಾಡುವ ಮೂಲಕ ರೈತರಿಗೆ ಧೈರ್ಯ ತುಂಬಲಿದ್ದಾರೆ.

ಎರಡು ಗಂಟೆಗಳ ಕಾಲ ನಾಟಿ 
ಶನಿವಾರ ಬೆಳಿಗ್ಗೆ 11ಗಂಟೆ ವೇಳೆಗೆ ಮಂಡ್ಯ ಜಿಲ್ಲೆಯ ಸುಮಾರು 5 ಎಕರೆ ಜಮೀನಿನಲ್ಲಿ 2 ಗಂಟೆಗಳ ಕಾಲ ನಾಟಿ ಕೆಲಸ ಆರಂಭವಾಗಲಿದ್ದು, ಸಿಎಂ ಕುಮಾರಸ್ವಾಮಿ ಸ್ವತಃ ಆ ಕಾರ್ಯದಲ್ಲಿ ತೊಡಗಲಿದ್ದಾರೆ. 100 ಮಹಿಳೆಯರು, 50 ರೈತರು, ಮತ್ತು 25 ಜೋಡಿ ಎತ್ತುಗಳ ಜೊತೆ ನಾಟಿ ಕಾರ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. 

ರೈತನ ಗೆಟಪ್'ನಲ್ಲಿ ಗದ್ದೆಗಿಳಿಯಲಿರುವ ಸಿಎಂ
ಸದಾ ಪ್ಯಾಂಟು, ಶರ್ಟು ಧರಿಸಿ ಸಭೆ, ಸಮಾರಂಭಗಳಲ್ಲಿ ಭಾಗವಹಿಸುವ ಸಿಎಂ, ಈ ಬಾರು ಮಣ್ಣಿನ ಮಗನಾಗಿ ರೈತನ ಗೆಟಪ್'ನಲ್ಲಿ ಗದ್ದೆಗೆ ಇಳಿಯಲಿದ್ದಾರೆ. ಮಂಡ್ಯ ಚೆಡ್ಡಿ, ಲುಂಗಿ, ಬನಿಯನ್, ತೊಟ್ಟು ರೈತರೊಂದಿಗೆ ತಾವೂ ರೈತರಾಗಿ ಸಿಎಂ ಕುಮಾರಸ್ವಾಮಿ ಅವರು ಭತ್ತ ನಾಟಿ ಮಾಡಲಿದ್ದಾರೆ. ಈ ಅಪರೂಪದ ದೃಶ್ಯವನ್ನು ವೀಕ್ಷಿಸಲು ಪಕ್ಷದ ಕಾರ್ಯಕರ್ತರು ಎಲ್ ಸಿಡಿ ಅಳವಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಇಂದು ರಾತ್ರಿ ಮೈಸೂರಿಗೆ ಸಿಎಂ
ಆಗಸ್ಟ್ 10ರಂದು ರಾತ್ರಿ ಮೈಸೂರಿಗೆ ತೆರಳಿ ವಾಸ್ತವ್ಯ ಮಾಡಲಿರುವ ಸಿಎಂ, ಆಗಸ್ಟ್ 11ರಂದು ಬೆಳಗ್ಗೆ 8 ಗಂಟೆಗೆ ಮೈಸೂರಿನ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರನ್ನು ಭೇಟಿಯಾಗಿ ನಂತರ ಮಂಡ್ಯಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ. 

ಈ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಗ್ರಾಮವಾಸ್ತವ್ಯ ಹೂಡಿ ಗ್ರಾಮಸ್ಥರ ಸಮಸ್ಯೆಗಳನ್ನು ಸ್ವತಃ ಅರಿಯಲು ಮುಂದಾಗಿದ್ದರು. ಇದೀಗ ಅದೇ ಮಾದರಿಯಲ್ಲಿ ರೈತರ ಸಮಸ್ಯೆಗಳನ್ನು ಅರಿತು ಅವರಿಗೆ ಆತ್ಮವಿಶ್ವಾಸ, ನೈತಿಕ ಸ್ಥೈರ್ಯ ತುಂಬುವ ಉದ್ದೇಶದಿಂದ ಗದ್ದೆಗಿಳಿದು ರೈತರೊಂದಿಗೆ ಭತ್ತ ನಾಟಿಗೆ ಮುಂದಾಗಿದ್ದಾರೆ.

Trending News