ಕಾವೇರಿ ವಿವಾದ: ಮರು ಪರಿಶೀಲನಾ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ..?

ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಮಾರ್ಚ್ 18 ಕೊನೆ ದಿನ.

Last Updated : Mar 15, 2018, 05:40 PM IST
ಕಾವೇರಿ ವಿವಾದ: ಮರು ಪರಿಶೀಲನಾ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ..?  title=

ಕಾವೇರಿ ನದಿ ನೀರು ಹಂಚಿಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತನ್ನ ಅಂತಿಮ ತೀರ್ಪಿನಲ್ಲಿ ಹೆಚ್ಚುವರಿಯಾಗಿ ನೀಡಿರುವ 14.75 TMC ನೀರಿನ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವಂತೆ ಕೋರಿ ರಾಜ್ಯ ಸರ್ಕಾರ ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. 

"ಕಾವೇರಿ ಜಲ ವಿವಾದ"ಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಫೆಬ್ರವರಿ 16, 2018ರಂದು ನೀಡಿರುವ ತೀರ್ಪಿಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಮಾರ್ಚ್ 18 ಕೊನೆ ದಿನವಾಗಿದ್ದು ಮಾರ್ಚ್ 18  ಭಾನುವಾರ ರಜೆ ದಿನವಾದ ಕಾರಣ ನಾಳೆ ಅಥವಾ ಸೋಮವಾರ ಅರ್ಜಿ ಸಲ್ಲಿಸಬೇಕು. ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾರ್ಚ್ 16 ಸಂಜೆ 06:00 ಗಂಟೆಗೆ ನವದೆಹಲಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರು ಸೇರಿದಂತೆ ರಾಜ್ಯದ ಎಲ್ಲಾ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರ ಸಭೆಯನ್ನು ಕರೆದಿದ್ದಾರೆ.

ನಾಳೆ ರಾಜ್ಯ ಸಂಸದರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸಿಎಂ ಸಿದ್ದರಾಮಯ್ಯ ಹಿರಿಯ ವಕೀಲ ಫಾಲಿ.ಎಸ್ ನಾರಿಮನ್ ಭೇಟಿಯಾಗುವ ಸಾಧ್ಯತೆ ಇದೆ. 

ಈ ಮೊದಲು ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ವಕೀಲರ ತಂಡಕ್ಕೆ ವಹಿಸಿತ್ತು. ಈ ಸಂದರ್ಭದಲ್ಲಿ ಕೆಲ ಹಿರಿಯ ವಕೀಲರು ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದ್ದರಿಂದ ಈ ಕುರಿತು ನಾರಿಮನ್ ಜೊತೆ ಅಂತಿಮ ಹಂತದ ಮಾತುಕತೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. 

ಮರು ಪರಿಶೀಲನಾ ಅರ್ಜಿಯಲ್ಲಿ ಕಾವೇರಿ ಕಣಿವೆಯಯಿಂದ ಹೊರಗಿರುವ ಬೆಂಗಳೂರಿಗೆ ಬೇಡಿಕೆಗೆ ತಕ್ಕಷ್ಟು ನೀರು ಸಿಕ್ಕಿಲ್ಲ. ಹಾಗಾಗಿ ತಮಿಳುನಾಡಿನ ಅಂತರ್ಜಲ ಪ್ರಮಾಣವನ್ನು ಹೆಚ್ಚು ಪರಿಗಣಿಸಬೇಕು ಮತ್ತು ಬೆಂಗಳೂರಿಗೆ ಹೆಚ್ಚು ಕುಡಿಯುವ ನೀರು ನೀಡಬೇಕು ಎಂದು ಕೋರಲು ಯೋಚಿಸಲಾಗಿದೆ.

Trending News