ಬಿಜೆಪಿಯಿಂದ SC, ST, ಹಿಂದುಳಿದ ಜಾತಿಗಳಿಗೆ ಮೋಸ: ಸಿದ್ದರಾಮಯ್ಯ

ಸರ್ವೋಚ್ಛ ನ್ಯಾಯಾಲಯ ತನ್ನ ಆದೇಶದಲ್ಲಿ ಈ 29 ಜಾತಿಗಳನ್ನು ಮಾತ್ರ ಗುರಿಯಾಗಿಸಿಕೊಂಡು ಜಾಗೃತ ಕೋಶದವರು ಪರಿಶೀಲನೆ ಮಾಡಬೇಕೆಂದು ಖಂಡಿತ ಹೇಳಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ತಪ್ಪು ವ್ಯಾಖ್ಯಾನ ಮಾಡಿ ಕೆಲವೇ ಜಾತಿಗಳನ್ನು ಗುರಿಯಾಗಿಸಿಕೊಂಡು ಈ ಸರ್ಕಾರ  ಆದೇಶವನ್ನು ಹೊರಡಿಸಿದೆ.

Written by - Yashaswini V | Last Updated : Feb 6, 2021, 03:27 PM IST
  • ಮುಖ್ಯಮಂತ್ರಿ ‌ಬಿ.ಎಸ್. ಯಡಿಯೂರಪ್ಪಗೆ ಅಹಿಂದ ವರ್ಗದ ನಾಯಕ ಸಿದ್ದರಾಮಯ್ಯ ಪತ್ರ
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳಿಗೆ ಆಗುತ್ತಿರುವ ಮೋಸ ಸರಿಪಡಿಸುವಂತೆ ಒತ್ತಾಯ
  • ಪ. ಜಾತಿ, ಪ. ಪಂಗಡ, ಹಿಂದುಳಿದ ಜಾತಿಗಳಿಗೆ ಕಿರುಕುಳ ನೀಡುವ ಸರ್ಕಾರಿ ಆದೇಶ ಹಿಂಪಡೆಯುವಂತೆ ಆಗ್ರಹ
ಬಿಜೆಪಿಯಿಂದ SC, ST, ಹಿಂದುಳಿದ ಜಾತಿಗಳಿಗೆ ಮೋಸ: ಸಿದ್ದರಾಮಯ್ಯ title=
Siddaramaiah writes to CM BS Yediyurappa

ಬೆಂಗಳೂರು: ಬಿಜೆಪಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳಿಗೆ ಮೋಸ ಆಗುತ್ತಿದೆ. ಇದನ್ನು ಸರಿಪಡಿಸಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರಿಗೆ ಅಹಿಂದ ವರ್ಗಗಳ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪತ್ರ ಬರೆದು ಒತ್ತಾಯಿಸಿದ್ದಾರೆ‌.‌ ಸಿದ್ದರಾಮಯ್ಯ ಅವರ ಪತ್ರದ ಪೂರ್ಣ ಸಾರವನ್ನು ಯಥಾವತ್ತಾಗಿ ಇಲ್ಲಿ ನೀಡಲಾಗಿದೆ.

ಮಾನ್ಯ ಶ್ರೀ ಯಡಿಯೂರಪ್ಪ (BS Yediyurappa) ನವರೆ,
ರಾಜ್ಯದಲ್ಲಿ ಬಿ.ಜೆ.ಪಿ. ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳ ಹಿತಾಸಕ್ತಿಯನ್ನು ರಕ್ಷಿಸುವವರು ಇಲ್ಲದಂತಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಆಳವಾಗಿ ಬೇರೂರುತ್ತಿದೆ. ಇದಕ್ಕೆ ಪೂರಕವೆಂಬಂತೆ ದಿನಾಂಕ: 16-01-2021 ರಂದು ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಹೊರಡಿಸಿರುವ ಆದೇಶವೇ ಸಾಕ್ಷಿಯಾಗಿದೆ. ಸದರಿ ಆದೇಶದಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ನಿಯಮಗಳು 1992 ರ ಪ್ರಕಾರ ಸರ್ಕಾರದ ಇಲಾಖೆಗಳಿಗೆ/ ಸಂಸ್ಥೆಗಳಿಗೆ ನೌಕರರಾಗಿ ಆಯ್ಕೆಯಾದ ಸಂದರ್ಭಗಳಲ್ಲಿ ಜಾತಿ ಸಿಂಧುತ್ವ ಪ್ರಮಾಣ ಪತ್ರವನ್ನು ನೀಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಅಧಿಕಾರ ನೀಡಲಾಗಿತ್ತು.

No description available.

ಆದರೆ ಈಗ ಕೆಲವು ನಿರ್ದಿಷ್ಟ ಜಾತಿಗಳಿಗೆ ಸಂಬಂಧಿಸಿದಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಜಾಗೃತ ಕೋಶ) ದಿಂದ ವರದಿ ಪಡೆದು ಜಾತಿ ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡತಕ್ಕದ್ದು ಎಂದು ಜಿಲ್ಲಾ ಸಮಿತಿಗೆ ಆದೇಶ ಹೊರಡಿಸಲಾಗಿದೆ. ಈ ಆದೇಶದಲ್ಲಿ ಕೆಳಕಂಡ ಜಾತಿಗಳನ್ನು ನಮೂದಿಸಲಾಗಿದೆ.

ಇದನ್ನೂ ಓದಿ - "ರಾಜ್ಯಕ್ಕೆ ಅನ್ಯಾಯ ಆಗ್ತಿದ್ರು ಮುಖ್ಯಮಂತ್ರಿಗಳು ಪ್ರಧಾನಿಗಳ ಎದುರು ಒಂದೂ ಮಾತನಾಡಲ್ಲ"

ಕರ್ನಾಟಕ ಪರಿಶಿಷ್ಟ ಪಂಗಡದಲ್ಲಿರುವ ಜಾತಿ ಮತ್ತು ಅವುಗಳ ಕ್ರಮ ಸಂಖ್ಯೆ  
1)    ಗೊಂಡ, ರಾಜಗೊಂಡ, ನಾಯಕ್‍ಪೋಡ್
15)     ಜೇನು ಕುರುಬ
16)     ಕಾಡು ಕುರುಬ
17)     ಕಮ್ಮಾರ (ದಕ್ಷಿಣ ಕನ್ನಡ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ)
18)     ಕಣಿಯನ್, ಕಣ್ಯನ್ (ಕೊಳ್ಳೇಗಾಲ)
21)     ಕೊಂಕಣ, ಕೊಂಕಣಿ, ಕುಕನ
22)    ಕೋಲಿಧೋರ್, ಟೋಕ್ರೆ ಕೇಳಿ, ಕೊಲ್ಚ, ಕೊಲಘ
28)    ಕುರುಬ (ಕೊಡಗು ಜಿಲ್ಲೆ)
34)    ಮಾಲೇರು
35)    ಮರಾಠ (ಕೊಡಗು ಜಿಲ್ಲೆ)
36)    ಮರಾಠಿ (ದಕ್ಷಿಣ ಕನ್ನಡ ಜಿಲ್ಲೆ)
37)    ಪರಿವಾರ, ತಳವಾರ

No description available.

ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಜಾತಿ ಮತ್ತು ಅವುಗಳ ಕ್ರಮ ಸಂಖ್ಯೆ
19)     ಬೇಡ ಜಂಗಮ, ಬುಡ್ಗ ಜಂಗಮ
20)    ಬೋವಿ
21)     ಚನ್ನ ದಾಸರ್
41)     ಹಂದಿ ಜೋಗಿ
55)    ಕೋಟೆಗಾರ್, ಮೇತ್ರಿ
78)    ಮೊಗೇರ್

ಪರಿಶಿಷ್ಟ ವರ್ಗದ ಜಾತಿಗಳಲ್ಲಿ 21 ಜಾತಿಗಳನ್ನು, ಪರಿಶಿಷ್ಟ ಜಾತಿಯಲ್ಲಿ 8 ಜಾತಿಗಳನ್ನು ಗುರಿಯಾಗಿಸಿಕೊಂಡು ಈ ಆದೇಶವನ್ನು ಹೊರಡಿಸಲಾಗಿದೆ. ಆದರೆ ಈ ಆದೇಶ ಹೊರಡಿಸಲು ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಲಾಗಿದೆ. ಸರ್ವೋಚ್ಛ ನ್ಯಾಯಾಲಯ ತನ್ನ ಆದೇಶದಲ್ಲಿ ಈ 29 ಜಾತಿಗಳನ್ನು ಮಾತ್ರ ಗುರಿಯಾಗಿಸಿಕೊಂಡು ಜಾಗೃತ ಕೋಶದವರು ಪರಿಶೀಲನೆ ಮಾಡಬೇಕೆಂದು ಖಂಡಿತ ಹೇಳಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯದ (Supreme Court) ಆದೇಶವನ್ನು ತಪ್ಪು ವ್ಯಾಖ್ಯಾನ ಮಾಡಿ ಕೆಲವೇ ಜಾತಿಗಳನ್ನು ಗುರಿಯಾಗಿಸಿಕೊಂಡು ಈ ಸರ್ಕಾರ  ಆದೇಶವನ್ನು ಹೊರಡಿಸಿದೆ.

ಇದನ್ನೂ ಓದಿ - D.K.Shivakumar: ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳ ನಡೆವೇ ಸಿಎಂ ಬಿಎಸ್ ವೈ ಭೇಟಿಯಾದ ಡಿಕೆಶಿ..!

ನಾಗರೀಕ ಹಕ್ಕು ಜಾತಿ ನಿರ್ದೇಶನಾಲಯ (ಜಾಗೃತ ಕೋಶ) ಮುಂದೆ ಹಲವು ವರ್ಷಗಳಿಂದ ಅಸಂಖ್ಯಾತ ಪ್ರಕರಣಗಳು ತನಿಖೆಗಾಗಿ/ ವಿಚಾರಣೆಗಾಗಿ ಬಾಕಿ ಇವೆ.  ಅವುಗಳನ್ನು ಇತ್ಯರ್ಥ ಪಡಿಸದೆ ಕೊಳೆ ಹಾಕಿಕೊಂಡು ಜನರನ್ನು ಅಯ್ಯೊ ಎನ್ನಿಸುತ್ತಾ ಇಲ್ಲಿನ ಅಧಿಕಾರಿಗಳು ಕೂತಿದ್ದಾರೆ. ಇಂತಹ ಇಲಾಖೆಗೆ ಸರ್ಕಾರದ ನೌಕರಿಗೆ ಆಯ್ಕೆಯಾದ ಅಭ್ಯರ್ಥಿಗಳ ಜಾತಿಯ ಕುರಿತಾದ ವಿವರಗಳನ್ನು ನಿರ್ಧಿಷ್ಟ ಅವಧಿಯಲ್ಲಿ ತನಿಖೆ ಮಾಡಿ ಸಲ್ಲಿಸಲು ಸಾಧ್ಯವಿದೆಯೆ? ಮೇಲಿನ ಸಮುದಾಯಗಳ ಅಭ್ಯರ್ಥಿಗಳಿಗೆ ಕಿರುಕುಳ ನೀಡಲು, ತೀವ್ರ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಲು  ಮಾಡಿದ  ಆದೇಶ ಇದಾಗಿದೆ. ಇಂತಹ ಸಂದರ್ಭದಲ್ಲಿ ಈ ವರ್ಗಗಳ, ಜಾತಿಗಳ ಹಿತಾಸಕ್ತಿಯನ್ನು ಕಾಪಾಡಬೇಕಾದ ಸಚಿವರುಗಳು ಮೌನವಾಗಿರುವುದು ವಿಷಾದನೀಯ ಸಂಗತಿ. ಇದೇ ವರ್ಗವನ್ನು ಪ್ರತಿನಿಧಿಸುವ ಸಮಾಜ ಕಲ್ಯಾಣ ಸಚಿವರು ಈ ಆದೇಶವನ್ನು ಹೊರಡಿಸಲು ಅನುಮೋದನೆ ನೀಡಿರುವುದನ್ನು ನೋಡಿದರೆ ಈ ವರ್ಗಗಳ ಕುರಿತಂತೆ ಅವರ ಕಾಳಜಿ ಎಂಥದ್ದು ಎಂದು ಅರ್ಥವಾಗುತ್ತದೆ.

No description available.

ಆದುದರಿಂದ, ಈ ಕೂಡಲೇ ಈ ಜಾತಿ, ವರ್ಗಗಳ ಹಿತಾಸಕ್ತಿಯನ್ನು ಕಾಪಾಡಬೇಕಾದ ಸರ್ಕಾರ ಮತ್ತು ಸರ್ಕಾರದಲ್ಲಿನ ಸಚಿವರುಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಅವೈಜ್ಞಾನಿಕವಾದ ಮತ್ತು ಅಮಾಯಕರಿಗೆ ಕಿರುಕುಳ ನೀಡುವ ಈ ಸರ್ಕಾರಿ ಆದೇಶವನ್ನು ತಕ್ಷಣದಿಂದಲೇ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತೇನೆ.

ವಂದನೆಗಳೊಂದಿಗೆ, ತಮ್ಮ ವಿಶ್ವಾಸಿ,
(ಸಿದ್ದರಾಮಯ್ಯ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News