Bank Robbery: ಕೋಟ್ಯಂತರ ಹಣ ದೋಚಿ ಗದ್ದೆಯಲ್ಲಿ ಬಚ್ಚಿಟ್ಟ ಬ್ಯಾಂಕ್ ಕ್ಲರ್ಕ್, ಹಸೆಮಣೆ ಏರಬೇಕಿದ್ದ ಯುವಕ ಜೈಲು ಪಾಲಾಗಿದ್ದು ಹೇಗೆ?

Bank Robbery - ಉತ್ತರ ಕರ್ನಾಟಕದಲ್ಲಿ ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ ಲಿಂಗೈಕ್ಯ ಮಹಾಂತ ಶಿವಯೋಗಿಗಳಿಂದ ಉದ್ಘಾಟನೆಗೊಂಡ ಡಿಸಿಸಿ ಬ್ಯಾಂಕ್ ಶಾಖೆಯೊಂದರಲ್ಲಿ ಬರೋಬ್ಬರಿ 6 ಕೋಟಿಗೂ ಹೆಚ್ಚು ಹಣ, ಚಿನ್ನಾಭರಣ‌ ಕಳ್ಳತನವಾಗಿತ್ತು. ಕಳ್ಳತನ ಮಾಡುವ ಮುನ್ನ ಮುರಗೋಡ (Murugod) ಮಹಾಂತಜ್ಜನ ತಿಜೋರಿ ಖಾಲಿ ಇರಬಾರದು ಅಂತಾ ಒಂದಿಷ್ಟು ಹಣ, ಚಿನ್ನ ಲಾಕರ್‌ನಲ್ಲೇ ಬಿಟ್ಟು ಖದೀಮರು ಪರಾರಿಯಾಗಿದ್ದರು.  

Written by - MANU KUMAR ARYA | Edited by - Nitin Tabib | Last Updated : Mar 15, 2022, 09:51 PM IST
  • ಬೆಳಗಾವಿ ಡಿಸಿಸಿ ಬ್ಯಾಂಕ್‌ ಮುರಗೋಡ ಶಾಖೆಯಲ್ಲಿ ಕಳ್ಳತನ
  • 4 ಕೋಟಿ 37 ಲಕ್ಷ ಹಣ, 3 ಕೆಜಿ 148 ಗ್ರಾಂ ಚಿನ್ನ‌ ಕದ್ದಿದ್ದ ಬ್ಯಾಂಕ್ ಕ್ಲರ್ಕ್
  • ಮೂಟೆಗಟ್ಟಲೇ ಹಣ, ಕೆಜಿಗಟ್ಟಲೇ ಚಿನ್ನ ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿದ್ದ ಭೂಪ
Bank Robbery: ಕೋಟ್ಯಂತರ ಹಣ ದೋಚಿ ಗದ್ದೆಯಲ್ಲಿ ಬಚ್ಚಿಟ್ಟ ಬ್ಯಾಂಕ್ ಕ್ಲರ್ಕ್, ಹಸೆಮಣೆ ಏರಬೇಕಿದ್ದ ಯುವಕ ಜೈಲು ಪಾಲಾಗಿದ್ದು ಹೇಗೆ? title=
Bank Robbery (File Photo)

Bank Robbery - ಬೆಳಗಾವಿ ಡಿಸಿಸಿ ಬ್ಯಾಂಕ್ (Belgaum DCC Bank) ರಾಜ್ಯದಲ್ಲಿಯೇ ಅತಿ ದೊಡ್ಡ ಹಾಗೂ ವಿಶ್ವಾಸಾರ್ಹ ಬ್ಯಾಂಕ್ ಎಂಬ ಕೀರ್ತಿಗೆ ಪಾತ್ರವಾಗಿದೆ. ನೂರು ವರ್ಷಗಳ ಹಿಂದೆ ಈ‌ ಬ್ಯಾಂಕ್‌ ನ ಮುರುಗೋಡ್ (Murugod Branch) ಗ್ರಾಮದ ಶಾಖೆಯನ್ನು ಗ್ರಾಮದ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಮಹಾಂತ ಶಿವಯೋಗಿಗಳು ಉದ್ಘಾಟಿಸಿದ್ದಾರೆ. ಮುರಗೋಡ ಡಿಸಿಸಿ ಬ್ಯಾಂಕ್‌ ವ್ಯಾಪ್ತಿಗೆ ಹದಿಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಇತರೆ ಸೊಸೈಟಿಗಳು ಬರುತ್ತವೆ.  ರೈತರು ಪಡೆದ ಸಾಲ ಮರುಪಾವತಿ ಮಾಡುವಂತೆ ಮಾರ್ಚ್ 10 ರ ಡೆಡ್‌ಲೈನ್‌ ನೀಡಿ ನೋಟಿಸ್ ನೀಡಿದ ಹಿನ್ನೆಲೆ ಬ್ಯಾಂಕ್ ಗೆ ಸಾವಿರಾರು ರೈತರು ತಾವು ಪಡೆದ ಸಾಲದ ಹಣ ಮರುಪಾವತಿ ಮಾಡಿದ್ದರು. ಅಷ್ಟೇ ಅಲ್ಲದೇ ಕೆಲವೊಂದಿಷ್ಟು ರೈತರು ಚಿನ್ನಾಭರಣ‌ ಅಡವಿಟ್ಟು ಸಾಲ ಪಡೆದುಕೊಂಡಿದ್ದರು. 

ಮಾರ್ಚ್ 5ರಂದು ರಾತ್ರಿ  ಗ್ರಾಮದ ಡಿಸಿಸಿ ಬ್ಯಾಂಕ್ ನಲ್ಲಿ ನಕಲಿ ಕೀ ಬಳಸಿಕೊಂಡು ನಾಲ್ಕು ಕೋಟಿ 37ಲಕ್ಷ ಕ್ಯಾಶ್, ಒಂದು ಕೋಟಿ 63ಲಕ್ಷ ಬೆಲೆಬಾಳುವ ಚಿನ್ನಾಭರಣವನ ಕಳ್ಳತನ ಮಾಡಿದ್ದ ಪ್ರಕರಣ ಮಾರನೇ ದಿನ ಅಂದ್ರೇ ಮಾರ್ಚ್ 6ರಂದು ಬೆಳಕಿಗೆ ಬಂದಿತ್ತು. ಇಷ್ಟೊಂದು ದೊಡ್ಡ ಪ್ರಮಾಣದ ಹಣವನ್ನ ಯಾರು ದೋಚಿಕೊಂಡು ಹೋದರು, ನಾವು ಅಡವಿಟ್ಟ ಚಿನ್ನಾಭರಣ ಎಲ್ಲಿ ಹೋಯ್ತು ಅಂತಾ ರೈತರು ಗಾಭರಿಯಾಗಿದ್ದರು. ಆದರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಮುರಗೋಡ ಠಾಣೆ ಪೊಲೀಸರು ಅಲ್ಲಿನ ಸ್ಥಿತಿ ಕಂಡು ಬ್ಯಾಂಕ್ ಸಿಬ್ಬಂದಿಗಳೇ ಈ ಕೃತ್ಯ ಎಸಗಿರಬಹುದು ಅಂತಾ ಅನುಮಾನಗೊಂಡು ಎಲ್ಲರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣದ ಗಂಭೀರತೆ ಅರಿತಿದ್ದ ಎಸ್‌ಪಿ ಲಕ್ಷ್ಮಣ್ ನಿಂಬರಗಿ ತ‌ನಿಖೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದರು.
 
ಫೀಲ್ಡ್‌ಗಿಳಿದ ತನಿಖಾ ತಂಡ ಟೆಕ್ನಿಕಲ್ ಎವಿಡೆನ್ಸ್ ಕಲೆಹಾಕಿದೆ. ಇದರ ಜೊತೆಗೆ ಘಟನೆ ನಡೆದ ದಿನದ ಎಲ್ಲಾ ಸಿಬ್ಬಂದಿಗಳ ಮೊಬೈಲ್ ಲೋಕೇಷನ್ ಕೂಡ ಕಲೆ ಹಾಕಿದ್ದಾರೆ. ಆದರೆ, ಅಂದು ಮನೆಯಲ್ಲಿ ಮಲಗಿದ್ದೆ ಅಂತಾ ಹೇಳಿದ್ದ ಓರ್ವ ಸಿಬ್ಬಂದಿ ಇಡೀ ರಾತ್ರಿ ಊರು ಸುತ್ತಿದ್ದು ಅವರ ಗಮನಕ್ಕೆ ಬಂದಿದೆ. ಆತನನ್ನು ಹಿಡಿದು ಪೊಲೀಸರು ತಮ್ಮದೇ ಆದ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ, ತಾನೇ ಕಳ್ಳತನ (Robbery) ಮಾಡಿರುವುದಾಗಿ ಆತ ಒಪ್ಪಿಒಂದಿದ್ದಾನೆ. ಬಂಧಿತನ ಹೆಸರು ಬಸವರಾಜ ಹುಣಶಿಕಟ್ಟಿ. ಆತ ಬೆಳಗಾವಿ ಜಿಲ್ಲೆ ರಾಮದುರ್ಗ (Ramadurga) ತಾಲೂಕಿನ ತೋರಣಗಟ್ಟಿ ಗ್ರಾಮದ ನಿವಾಸಿಯಾಗಿದ್ದಾನೆ. ಮುರಗೋಡ ಡಿಸಿಸಿ ಬ್ಯಾಂಕ್ ನಲ್ಲಿ ಕ್ಲರ್ಕ್ ಆಗಿ  ಕಾರ್ಯನಿರ್ವಹಿಸುತ್ತಿದ್ದಾನೆ. ಈ ಬಸವರಾಜ್ ಹುಣಶಿಕಟ್ಟಿ (30) ಕಳೆದ ಐದು ವರ್ಷದಿಂದ ಇದೇ ಬ್ಯಾಂಕ್ ನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ. ಏಪ್ರಿಲ್ 22ರಂದು ಆತನ ಮದುವೆ ಕೂಡ ಫಿಕ್ಸ್  ಆಗಿದೆ. ಅದ್ದೂರಿಯಾಗಿ ಮದುವೆ ಮಾಡಿಕೊಳ್ಳಬೇಕು, ಜೊತೆಗೆ ಶ್ರೀಮಂತನಾಗಬೇಕು ಎಂಬ ಕನಸು ಕಂಡ ಈತ ಬ್ಯಾಂಕ್ ಕಳ್ಳತನಕ್ಕೆ ಸ್ಕೇಚ್ ಹಾಕಿದ್ದ. 

ಕಳೆದ ಅಗಸ್ಟ್ ತಿಂಗಳಿಂದ ಈತ ಬ್ಯಾಂಕ್ ಕಳ್ಳತನಕ್ಕೆ ಸ್ಕೇಚ್ ಹಾಕಿದ್ದನಂತೆ. ಇದಕ್ಕಾಗಿ ಆತ ನಕಲಿ ಕೀ ಕೂಡ ಮಾಡಿಸಿಕೊಂಡಿದ್ದ ಮತ್ತು ಬ್ಯಾಂಕ್ ಗೆ ಹೆಚ್ಚು ಹಣ ಹರಿದು ಬರುವುದಕ್ಕಾಗಿ ಕಾಯುತ್ತಿದ್ದ, ಪ್ರಸ್ತುತ ಇಯರ್ ಎಂಡ್ ಆಗಿರುವುದರಿಂದ, ರೈತರಿಗೆ ಸಾಲ ಮರುಪಾವತಿ ಮಾಡಿ ಅಂತಾ ಬ್ಯಾಂಕ್ ನೋಟಿಸ್ ನೀಡಿತ್ತು. ಈ ಕಾರಣದಿಂದ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಶ್, ಮತ್ತು ಚಿನ್ನ ಬ್ಯಾಂಕ್ ನಲ್ಲಿ ಜಮಾವಣೆಯಾಗಿತ್ತು. ಇದನ್ನು ಗಮನಿಸಿದ ಬಸವರಾಜ  ಮಾರ್ಚ್ 5ರಂದು ಸಂಜೆ ಏಳುವರೆಗೆ ಎಲ್ಲ ಸಿಬ್ಬಂದಿಗಳು ಮನೆಗೆ ತೆರಳಿದ  ಬಳಿಕ, ತನ್ನಿಬ್ಬರು ಗೆಳೆಯರಿಗೆ ಕಾರು ತೆಗೆದುಕೊಂಡು ಬರುವಂತೆ ಸೂಚಿಸಿದ್ದಾನೆ.

ಇದನ್ನೂ ಓದಿ-ಅಡುಗೆ ಭಟ್ಟನ ಮೇಲೆ ಕಾದ ಎಣ್ಣೆ ಸುರಿದ ಕುಡುಕರು! ವಿಡಿಯೋ ವೈರಲ್

ಬ್ಯಾಂಕ್‌ನಲ್ಲಿದ್ದ ಹಣ, ಚಿನ್ನಾಭರಣ‌ ದೋಚುವ ಮುನ್ನ ಸೈರನ್ ಆಫ್ ಮಾಡಿ, ಬ್ಯಾಂಕ್‌ನಲ್ಲಿರುವ ಸಿಸಿಟಿವಿ ಡಿವಿಆರ್ ಅನ್ನು ಆತ ಕಿತ್ತುಹಾಕಿದ್ದಾನೆ.‌ ಸಿಸಿ ಟಿವಿ ಡಿವಿಆರ್ ಇನ್ ಆ್ಯಕ್ಟೀವ್ ಮತ್ತು  ಡಿಆ್ಯಕ್ಟಿವೇಟ್ ಮಾಡುವುದು ಹೇಗೆ? ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಾಧಾರಗಳನ್ನು ಯಾವೆಲ್ಲ ತಂತ್ರಗಾರಿಕೆ ಬಳಸಿ ನಾಶ ಮಾಡಬೇಕು ಅಂತ ಕ್ಲರ್ಕ್ ಬಸವರಾಜ  ಯೂಟ್ಯೂಬ್ ವಿಡಿಯೋ ನೋಡಿ ತಿಳಿದುಕೊಂಡಿದ್ದಾನೆ. ಅದರಂತೆಯೇ ಪಕ್ಕಾ ಪ್ಲ್ಯಾನ್ ಮಾಡಿ ಸಿಸಿ ಕ್ಯಾಮರಾ ಡಿವಿಆರ್ ನಿಷ್ಕ್ರೀಯಗೊಳಿಸಿದ್ದಾನೆ. ನಂತರ ಆತ ಲಾಕರ್‌ಗೆ ತೆರಳಿ, ಚೀಲದಲ್ಲಿ ನಾಲ್ಕು ಕೋಟಿ 37ಲಕ್ಷ ಕ್ಯಾಶ್, ಒಂದು ಕೋಟಿ 63ಲಕ್ಷ  ಚಿನ್ನಾಭರಣವನ್ನ ತುಂಬಿಕೊಂಡು ತೋರಣಗಟ್ಟಿ ಗ್ರಾಮದ ಹೊರ ವಲಯದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿದ್ದಾನೆ. ಬಳಿಕ ಸಿಸಿ ಕ್ಯಾಮರಾವನ್ನು ಸಮೀಪದ  ಕೆರೆಯೊಂದಕ್ಕೆ ಎಸೆದಿದ್ದಾನೆ.

ಇದನ್ನೂ ಓದಿ-ಮಕ್ಕಳ ಭವಿಷ್ಯದ ಬಗ್ಗೆ ನಿರ್ಲಕ್ಷ್ಯ ಬೇಡ; ತೀರ್ಪು ಪಾಲನೆ ಎಲ್ಲರ ಕರ್ತವ್ಯ ಎಂದ ಎಚ್ಡಿಕೆ

 ಇದಾದ ಬಳಿಕ ಮಾರನೇ ದಿನ ಇತರ ಸಿಬ್ಬಂದಿಗಳಂತೆಯೇ ಕಚೇರಿಗೆ ಬಂದ, ಆತ ತನಗೇನೂ ಗೊತ್ತಿಲ್ಲದಂತೆ ನಟಿಸಿದ್ದಾನೆ. ಆದರೆ, ಈತನ ಮೊಬೈಲ್ ಲೊಕೇಷನ್ ಅನ್ನು ಶಂಕಿಸಿದ್ದ ಪೊಲೀಸರು, ನಾಲ್ಕು ದಿನ ಆತನನ್ನು ಹಿಂಬಾಲಿಸಿದ್ದಾರೆ.  ನಂತರ ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತನ್ನಿಬ್ಬರ ಗೆಳೆಯರೊಂದಿಗೆ ಸೇರಿ ಕಳ್ಳತನ ಮಾಡಿ, ಕಬ್ಬಿನ ಗದ್ದೆಯಲ್ಲಿ ಹಣ ಬಚ್ಚಿಟ್ಟಿದ್ದನ್ನು ಆತ ಬಾಯಿಬಿಟ್ಟಿದ್ದಾನೆ. ಇದೀಗ ಆತನ ಬಳಿ ಇದ್ದ ಹಣ, ಚಿನ್ನ, ಕಾರು  ವಶಕ್ಕೆ ಪಡೆದಿರುವ ಪೊಲೀಸರು, ಬಸವರಾಜ್ ಹುಣಶಿಕಟ್ಟಿ ಮತ್ತು ಆತನ ಇಬಾರು ಸ್ನೇಹಿತರಾದ ಸಂತೋಷ ಕಂಬಾರ ಮತ್ತು ಗಿರೀಶ್ ಬೆಳವಲ ಅವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ-‘ದಿ ಕಾಶ್ಮೀರ್ ಫೈಲ್ಸ್’ ಭಾರತದಲ್ಲಿ ಪ್ರದರ್ಶಿಸದೆ ಪಾಕಿಸ್ತಾನದಲ್ಲಿ ತೋರಿಸಬೇಕೇ?: ಕಾಂಗ್ರೆಸ್​ಗೆ ಬಿಜೆಪಿ ಪ್ರಶ್ನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News