ಕೊಪ್ಪಳದಲ್ಲಿ ಹೇಗಿದೆ ಚುನಾವಣಾ ಕಾವು ! ಇಲ್ಲಿ ಗೆಲ್ಲುವವರು ಯಾರು ?

Karnataka Assembly Election 2023 :  ಎಲ್ಲಾ ಲೆಕ್ಕಾಚಾರ, ಹಿಂದಿನ ಇತಿಹಾಸ ಎಲ್ಲವನ್ನೂ ಗಮನಿಸಿ ನೋಡಿದಾಗ ಜಿಲ್ಲೆಯ 5 ಕ್ಷೇತ್ರಗಳಲ್ಲಿ  ಯಾರು ಗೆಲ್ಲಬಹುದು ಎನ್ನುವ ಸಣ್ಣ ಮುನ್ಸೂಚನೆ ಸಿಗುತ್ತದೆ. ಹಾಗಿದ್ದರೆ ಹೇಗಿದೆ ನೋಡೋಣ ಕೊಪ್ಪಳ ಜಿಲ್ಲೆಯ ಚುನಾವಣಾ ಕದನ ಕಣ .

Written by - Zee Kannada News Desk | Edited by - Ranjitha R K | Last Updated : May 4, 2023, 10:28 AM IST
  • ಕೊಪ್ಪಳದಲ್ಲಿಯೂ ಚುನಾವಣಾ ಕಾವು ಜೋರಾಗಿದೆ.
  • ಈ ಜಿಲ್ಲೆಯಲ್ಲಿ ಐದು ಮತ ಕ್ಷೇತ್ರಗಳಿವೆ.
  • KRPP ಪ್ರವೇಶದಿಂದ ಕುತೂಹಲ ಮತ್ತಷ್ಟು ಹೆಚ್ಚಿದೆ.
ಕೊಪ್ಪಳದಲ್ಲಿ ಹೇಗಿದೆ ಚುನಾವಣಾ ಕಾವು ! ಇಲ್ಲಿ ಗೆಲ್ಲುವವರು ಯಾರು ?   title=

ಕೊಪ್ಪಳ : ಎಲ್ಲಾ ಜಿಲ್ಲೆಗಳ ಹಾಗೆ ಕೊಪ್ಪಳದಲ್ಲಿಯೂ ಚುನಾವಣಾ ಕಾವು ಜೋರಾಗಿದೆ. ತಮ್ಮ ತಮ್ಮ ಗೆಲುವಿಗಾಗಿ ಅಭ್ಯರ್ಥಿಗಳು ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಈ ಜಿಲ್ಲೆಯಲ್ಲಿ ಐದು ಮತ ಕ್ಷೇತ್ರಗಳಿವೆ. ಐದೂ ಮತ ಕ್ಷೇತ್ರಗಳು ತಮ್ಮದೇ ಆದ  ರಾಜಕೀಯ ಇತಿಹಾಸ ಹೊಂದಿದೆ. ಈ ಬಾರಿ KRPP ಪ್ರವೇಶದಿಂದ ಕುತೂಹಲ ಮತ್ತಷ್ಟು ಹೆಚ್ಚಿದೆ. ಜಾತಿ ರಾಜಕಾರಣ, ಕುಟುಂಬಗಳ ನಡುವಿನ ಪೈಪೋಟಿ ಈ ಕ್ಷೇತ್ರಗಳಲ್ಲಿಯೂ ನಡೆದುಕೊಂಡು ಬಂದಿದೆ. ಈ ಎಲ್ಲಾ ಲೆಕ್ಕಾಚಾರ, ಹಿಂದಿನ ಇತಿಹಾಸ ಎಲ್ಲವನ್ನೂ ಗಮನಿಸಿ ನೋಡಿದಾಗ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಯಾರು ಗೆಲ್ಲಬಹುದು ಎನ್ನುವ ಸಣ್ಣ ಅಂದಾಜು ಸಿಗುತ್ತದೆ. ಹಾಗಿದ್ದರೆ ಹೇಗಿದೆ ನೋಡೋಣ ಕೊಪ್ಪಳ ಜಿಲ್ಲೆಯ ಚುನಾವಣಾ ಕದನ ಕಣ .

ಹಾಲಿ ಶಾಸಕರು : 
ಮೊದಲಿಗೆ ಐದೂ ಕ್ಷೇತ್ರಗಳಲ್ಲಿ ಪ್ರಸ್ತುತ ಶಾಸಕರು ಯಾರು ಮತ್ತು ಕಳೆದ ಬಾರಿ ಅವರ ಗೆಲುವಿನ ಅಂತರ ಎಷ್ಟಿತ್ತು ನೋಡೋಣ? ಐದು ಕ್ಷೇತ್ರಗಳ ಪೈಕಿ ಮೂರು ಕಡೆ ಬಿಜೆಪಿ ಶಾಸಕರಿದ್ದರೆ, ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.  ಕಳೆದ ಬಾರಿ ಯಲಬುರ್ಗಾದಲ್ಲಿ ಬಿಜೆಪಿಯ ಹಾಲಪ್ಪ ಆಚಾರ್ 13,318  ಮತಗಳ ಅಂತರದಿಂದ ಗೆಲುವುದು ಸಾಧಿಸಿದ್ದಾರೆ. ಕನಕಗಿರಿ ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ ದಡೇಸುಗೂರು  14,225 ಮತಗಳಿಂದ ಜಯಭೇರಿ ಬಾರಿಸಿದ್ದಾರೆ. ಗಂಗಾವತಿಯಲ್ಲಿಯೂ ಬಿಜೆಪಿಯ ಪರಣ್ಣ ಈಶ್ವರಪ್ಪ ಮುನವಳ್ಳಿ  7,973 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಕೊಪ್ಪಳದಲ್ಲಿ ಕಾಂಗ್ರೆಸ್ ನ  ಕೆ.ರಾಘವೇಂದ್ರ ಹಿಟ್ನಾಳ್ 26,351 ಅಂತರದಿಂದ ಭರ್ಜರಿ ಜಯ ಭೇರಿ ಬಾರಿಸಿದ್ದರು. ಇನ್ನು ಕುಷ್ಟಗಿಯಲ್ಲಿಯೂ ಕಾಂಗ್ರೆಸ್ ನ ಅಮರೇಗೌಡ ಬಯ್ಯಾಪುರ  18,031 ಮತಗಳ ಅಂತರದಿಂದ ಜಯ ಗಳಿಸಿದ್ದರು. 

ಯಲಬುರ್ಗ ಕ್ಷೇತ್ರ : 
ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಯಲಬುರ್ಗಾ ಮತ್ತು ಕುಕನೂರು ಎಂಬ ಎರಡು ತಾಲೂಕುಗಳು ಇವೆ. ಕ್ಷೇತ್ರದ ಸಮಗ್ರತೆಯ ದೃಷ್ಟಿಯಿಂದ ಕುಕನೂರು ಪ್ರದೇಶಕ್ಕೆ ಸಿಕ್ಕಷ್ಟು ಅಭಿವೃದ್ಧಿಯ ಭಾಗ್ಯ ಯಲಬುರ್ಗಾಕ್ಕೆ ಸಿಕ್ಕಿಲ್ಲ ಎಂಬ ಮಾತಿದೆ. ಜೊತೆಗೆ ಪ್ರತಿ ಚುನಾವಣೆ ಬಂದಾಗಲೂ ಯಲಬುರ್ಗಾ ಕ್ಷೇತ್ರದಲ್ಲಿ ನೀರಾವರಿ ಯೋಜನೆಯೇ ಪ್ರಮುಖ ವಿಷಯವಾಗಿ ಕಾಣಿಸಿಕೊಳ್ಳುತ್ತದೆ. ಕೃಷ್ಣಾ ಬಿ ಸ್ಕೀಂ ಮೂಲಕ ಕ್ಷೇತ್ರಕ್ಕೆ ಕೃಷ್ಣಾ ನದಿಯ ನೀರನ್ನು ತರುತ್ತೇವೆ ಎಂದು ಇಲ್ಲಿನ ಜನಪ್ರತಿನಿಧಿಗಳು ಆಶ್ವಾಸನೆ ನೀಡುತ್ತಲೇ ಬಂದಿದ್ದಾರೆ. ಆದರೆ, ಇದುವರೆಗೆ ಕೃಷ್ಣೆಯ ಒಂದು ಹನಿಯೂ ಯಲಬುರ್ಗಾ ಕ್ಷೇತ್ರವನ್ನು ಮುಟ್ಟಿಲ್ಲ.  

ಪಂಚಮಸಾಲಿ ಲಿಂಗಾಯತ, ಗಾಣಿಗ ಲಿಂಗಾಯತ, ಕುರುಬ, ಮುಸ್ಲಿಂ, ದಲಿತ ಸಮುದಾಯ ಹೀಗೆ ಹಲವು ಸಮುದಾಯಗಳು ಇರುವ ಈ ಕ್ಷೇತ್ರದ ರಾಜಕೀಯವೂ ಕುತೂಹಲಕಾರಿಯಾಗಿದೆ. ಇಲ್ಲಿನ ಜನರ ಬದುಕಿನ ಜೀವನಾಧಾರ ಕೃಷಿ. ಮಳೆ ಆಧಾರಿತ ಕೃಷಿ ಮುಖ್ಯ ಆದಾಯ ಮೂಲವಾಗಿದ್ದು, ಋತುವಾರು ಜನ ಗುಳೆ ಹೋಗುವುದು ಸಾಮಾನ್ಯ. ಇನ್ನು ಶಿಕ್ಷಣ, ಉದ್ಯೋಗ, ಅಭಿವೃದ್ಧಿ ಇವೆಲ್ಲವೂ ದೂರದ ಬೆಟ್ಟ ನುಣ್ಣಗೆ ಎನ್ನುವಂತಹ ವಿಷಯವೇ ಆಗಿದೆ.

ಕ್ಷೇತ್ರದ ಜಾತಿವಾರು ಮತ ಲೆಕ್ಕಾಚಾರ   
ಒಟ್ಟು ಮತದಾರರು: 2,21,576
ಪುರುಷ ಮತದಾರರು:  1,11,189
ಮಹಿಳಾ ಮತದಾರರು: 1,10,379
ಲಿಂಗಾಯತ: 80,000
ಕುರುಬರು: 35,000
ಪರಿಶಿಷ್ಟ ಜಾತಿ: 30,000
ಪರಿಶಿಷ್ಟ ಪಂಗಡ: 15,000
ಮುಸ್ಲಿಂ: 18,000
ಇತರೆ: 40,000

ಲಿಂಗಾಯತ v/s ಲಿಂಗಾಯತ :
ಯಲಬುರ್ಗಾ ಕ್ಷೇತ್ರದ ರಾಜಕೀಯ ಇತಿಹಾಸ ತೀವ್ರ ಕುತೂಹಲ ಮೂಡಿಸುವಂಥದ್ದು. ಕೊಪ್ಪಳದ ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ಬೇರೆ ಸಮುದಾಯಗಳು ಅಧಿಕಾರಕ್ಕಾಗಿ ಪೈಪೋಟಿ ನಡೆಸಿದರೆ ಇಲ್ಲಿ ಲಿಂಗಾಯತ ವರ್ಸಸ್ ಲಿಂಗಾಯತ. ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಈ ಕ್ಷೇತ್ರದಲ್ಲಿ ಐದು ಬಾರಿ ಗೆದ್ದು ದಾಖಲೆ ಬರೆದಿದ್ದಾರೆ. ಲಿಂಗಾಯತ ಸಮುದಾಯದವರೇ ಹೆಚ್ಚಾಗಿದ್ದರೂ, ಕುರುಬ ಸಮುದಾಯದ ಮತಗಳು ಈ ಕ್ಷೇತ್ರದಲ್ಲಿ ನಿರ್ಣಾಯಕ.

2023ರ ಸ್ಪರ್ಧಾಳುಗಳು   :
INC  -ಬಸವರಾಜ ರಾಯರೆಡ್ಡಿ
BJP  - ಹಾಲಪ್ಪ ಆಚಾರ್‌

ಕುಷ್ಟಗಿ ಕುರುಕ್ಷೇತ್ರ   :

ಕುಷ್ಟಗಿ ಕ್ಷೇತ್ರದ ಬಹುಸಂಖ್ಯಾತರ ಜೀವನೋಪಾಯದ ಮೂಲ ಕೃಷಿ ಮತ್ತು ಕೃಷಿ ಕೂಲಿ. ದಾಳಿಂಬೆ ಬೆಳೆಯಿಂದ ಪ್ರಸಿದ್ಧಿ ಪಡೆದಿದ್ದ ಈ ಕ್ಷೇತ್ರದಲ್ಲಿ ಪ್ರಸ್ತುತ ಮಳೆ ಆಧಾರಿತ ಕೃಷಿ ಹೆಚ್ಚಾಗಿದೆ. ನೀರಾವರಿ ಯೋಜನೆಗಳು ಕನಸಾಗಿ ಉಳಿದಿದ್ದು, ಗುಳೆ ಹೋಗುವುದು ಸಾಮಾನ್ಯ ಎನ್ನುವಂತಾಗಿದೆ. ಇಲ್ಲಿನ ಜನರು ಕೃಷಿ ಕೆಲಸ ಹೊರತು ಪಡಿಸಿ ವರ್ಷದ ಉಳಿದ ಸಮಯದಲ್ಲಿ ಮಂಗಳೂರು ಬೆಂಗಳೂರಿಗೆ ಗುಳೆ ಹೋಗುತ್ತಾರೆ.

ಈ ವಿಧಾನಸಭಾ ಕ್ಷೇತ್ರವು ರಚನೆಯಾಗಿದ್ದು1957ರಲ್ಲಿ. ಅಂದಿನಿಂದ ಇಂದಿನವರೆಗೆ ಈ ಕ್ಷೇತ್ರದ ಮತದಾರರು ವ್ಯಕ್ತಿಯನ್ನು ಆಧರಿಸಿಯೇ ಮತ ಚಲಾಯಿಸುತ್ತಿದ್ದಾರೆ. ಕುಷ್ಟಗಿ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಜನಪ್ರತಿನಿಧಿಯೊಬ್ಬರು ಸತತ ಎರಡು ಬಾರಿ ಗೆದ್ದಿರುವ ಇತಿಹಾಸವೇ ಇಲ್ಲ. ಕಾಂಗ್ರೆಸ್‌ನ ಹಾಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ, ಬಿಜೆಪಿಯ ದೊಡ್ಡನಗೌಡ ಪಾಟೀಲ, ಹನುಮೇಗೌಡ ಶೇಖರಗೌಡ ಹಾಗೂ ಪುಂಡಲೀಕಪ್ಪ ಈಶ್ವರಪ್ಪ ಅವರು ಎರಡೆರಡು ಬಾರಿ ಗೆಲುವು ಸಾಧಿಸಿದ್ದರೂ ಎರಡು ಅವಧಿಗೆ ನಿರಂತರವಾಗಿ ಗೆದ್ದಿಲ್ಲ.

ಚುನಾವಣೆಗಳಲ್ಲಿ ಪಕ್ಷ, ಜಾತಿಗಿಂತ ವ್ಯಕ್ತಿ ಮುಖ್ಯ : 
ಪಕ್ಷ ಮತ್ತು ಜಾತಿಗಿಂತ ವ್ಯಕ್ತಿ ಮುಖ್ಯ ಎಂಬುದು ಇಲ್ಲಿ ಹಲವು ಬಾರಿ ಸಾಬೀತಾಗಿದೆ. ನಿರ್ಣಾಯಕವಲ್ಲದ ಸಮುದಾಯದವರೂ ಗೆದ್ದಿರುವ ಉದಾಹರಣೆ ಇದೆ. 

ಎಲ್ಲಾ ಪಕ್ಷಗಳಿಗೂ ಮತದಾರರ ಮನ್ನಣೆ :
ಈ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌, ಜನತಾ ಪಕ್ಷ, ಪಕ್ಷೇತರ ಸೇರಿದಂತೆ ಎಲ್ಲರೂ ಒಮ್ಮೆಯಾದರೂ ಗೆಲುವು ಸಾಧಿಸಿರುವುದು ವಿಶೇಷ. 

ಜಾತಿ-ಮತ ಲೆಕ್ಕಾಚಾರ  :
ಒಟ್ಟು ಮತದಾರರ ಸಂಖ್ಯೆ 2,31,851
ಪುರುಷ ಮತದಾರರು 1,16,738  
ಮಹಿಳಾ ಮತದಾರರು 1,15,1305  
ಲಿಂಗಾಯತ: 48,000
ಕುರುಬರು: 45,000
ಎಸ್‌ಸಿ: 36,272
ಎಸ್‌ಟಿ: 15,839
ಮುಸ್ಲಿಂ: 21,936
ಉಪ್ಪಾರ: 12,000
ಬ್ರಾಹ್ಮಣ:10,000
ನೇಕಾರ : 8,000
ಇತರೆ :35,000

2023ರ ಸ್ಪರ್ಧಾಳುಗಳು   :
INC  ಅಮರೇಗೌಡ ಪಾಟೀಲ್‌ ಬಯ್ಯಾಪುರ
BJP  ದೊಡ್ಡನಗೌಡ ಪಾಟೀಲ್‌

ಕನಕಗಿರಿ ಕ್ಷೇತ್ರ :
- ದಲಿತ ಮೀಸಲು ಕ್ಷೇತ್ರದಲ್ಲಿ ಲಿಂಗಾಯತರೇ ನಿರ್ಣಾಯಕ
- ಪ. ಜಾತಿಯಲ್ಲಿರುವ ಎಡಗೈ ಮತ್ತು ಬಲಗೈ ಲೆಕ್ಕಾಚಾರ
- ತೆಲುಗು ಭಾಷಿಕರು, ಉಪ್ಪಾರ ಸಮುದಾಯ ಮುಖ್ಯ
- ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚು ವರದಿ
- ನೀರಾವರಿ ಮತ್ತು ಒಣಕೃಷಿ ಎರಡೂ ಇರುವ ಕನಕಗಿರಿ ಕ್ಷೇತ್ರ

ಕನಕಗಿರಿ ಎಸ್‌ಸಿ ಮೀಸಲು ಕ್ಷೇತ್ರವಾದ ನಂತರ ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ಎಡಗೈ ಮತ್ತು ಬಲಗೈ ಲೆಕ್ಕಾಚಾರ ಜೋರಾಗಿಯೇ ಇದೆ. ಇದರ ಆಧಾರದಲ್ಲಿಯೇ ಈ ಕ್ಷೇತ್ರದ ಪ್ರಜಾಪ್ರತಿನಿಧಿಯ ಆಯ್ಕೆಯಾಗುತ್ತದೆ.  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತಗಳು ಹೆಚ್ಚಾಗಿದ್ದರೂ, ಲಿಂಗಾಯತ ಸಮುದಾಯದ ಮತಗಳೇ ಇಲ್ಲಿ ಅಭ್ಯರ್ಥಿಯ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಮೂರು ಸಮುದಾಯಗಳನ್ನು ಹೊರತುಪಡಿಸಿ, ತೆಲುಗು ಭಾಷಿಕರು, ಉಪ್ಪಾರ ಸಮುದಾಯದವರು ಕ್ಷೇತ್ರದಲ್ಲಿದ್ದಾರೆ. ದಲಿತರು ಪ್ರತಿನಿಧಿಸುವ ಕ್ಷೇತ್ರವಾದರೂ ಇಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ.

ರಾಜಕೀಯ ಇತಿಹಾಸ :
ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹೊರತುಪಡಿಸಿ ಜೆಡಿಎಸ್‌, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಯೂ ಗೆಲುವು ಸಾಧಿಸಿದ್ದಾರೆ. 2008ರಲ್ಲಿ ಕನಕಗಿರಿ ಎಸ್‌ಸಿ ಮೀಸಲು ಕ್ಷೇತ್ರವಾಗಿ ಬದಲಾಯಿತು.  ಮೀಸಲು ಕ್ಷೇತ್ರವಾದ ನಂತರ ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ಎಡಗೈ ಮತ್ತು ಬಲಗೈ ಲೆಕ್ಕಾಚಾರ ಜೋರಾಗಿಯೇ ಇದೆ. ಇದರ ಆಧಾರದಲ್ಲಿಯೇ ಈ ಕ್ಷೇತ್ರದ ಪ್ರಜಾಪ್ರತಿನಿಧಿಯ ಆಯ್ಕೆಯಾಗುತ್ತದೆ ಎಂದರೆ ತಪ್ಪಾಗಲಾರದು. 

2018ರಲ್ಲಿ ಬಿಜೆಪಿಯಿಂದ ಸ್ಫರ್ಧಿಸಿದ್ದ ಬಸವರಾಜ ದಡೇಸುಗೂರು ಕಾಂಗ್ರೆಸ್‌ನ ಶಿವರಾಜ ತಂಗಡಗಿ ಅವರನ್ನು 14,225 ಮತಗಳ ಅಂತರದಿಂದ ಸೋಲಿಸಿ, ಅಧಿಕಾರದ ಗದ್ದುಗೆ ಹಿಡಿದರು.

ಮತ-ಜಾತಿ ಲೆಕ್ಕಾಚಾರ   :
ಅಂದಾಜು ಜಾತಿವಾರು ಮತದಾರರು : 219853
ಪರುಷರು  116738    ಮಹಿಳೆಯರು   1111346
ಪರಿಶಿಷ್ಟ ಜಾತಿ: 50,000
ಪರಿಶಿಷ್ಟ ಪಂಗಡ: 30,931
ಲಿಂಗಾಯತ: 25,000
ಕುರುಬರು: 25,000
ಮುಸ್ಲಿಂ: 18,000
ಉಪ್ಪಾರ: 18,000
ಗೊಲ್ಲರು :8,000
ಗಂಗಾಮತಸ್ಥ : 6,000
ಇತರೆ : 15,000

ಕಣದಲ್ಲಿರುವ ಪ್ರಮುಖರು :
INC - ಶಿವರಾಜ್ ಎಸ್‌.ತಂಗಡಗಿ
BJP - ಬಸವರಾಜ ದಢೇಸೂಗೂರು
JDS - ರಾಜಗೋಪಾಲ
KRPP - ಡಾ.ಸಿ.ವೆಂಕಟರಮಣ
AAP - ಯರ್ರಿಸ್ವಾಮ ಕುಂಟೋಜಿ

ಗಂಗಾವತಿ ಕ್ಷೇತ್ರ  :

ಪರಣ್ಣ ಮುನವಳ್ಳಿ, ಇಕ್ಬಾಲ್ ಅನ್ಸಾರಿಯ ಜಿದ್ದಾಜಿದ್ದಿ :
ಕರ್ನಾಟಕದ ‘ಭತ್ತದ ಕಣಜ’ ಎಂದೇ ಕರೆಯಲಾಗುವ ಗಂಗಾವತಿಯಲ್ಲಿ 1989, 1994 ಹಾಗೂ 1999ರ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಶ್ರೀರಂಗದೇವರಾಯಲು ಸತತ ಮೂರು ಬಾರಿ ಜಯಗಳಿಸಿ ದಾಖಲೆ ಬರೆದರು. 2004ರಿಂದ ಹೊಸ ತಲೆಮಾರು ರಾಜಕೀಯ ಪ್ರವೇಶ ಮಾಡಿತು. ಅಂದಿನಿಂದ ಕ್ಷೇತ್ರದಲ್ಲಿ ಇಕ್ಬಾಲ್‌ ಅನ್ಸಾರಿ ಮತ್ತು ಪರಣ್ಣ ಈಶ್ವರಪ್ಪ ಮುನವಳ್ಳಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಒಮ್ಮೆ ಇಕ್ಬಾಲ್‌ ಅನ್ಸಾರಿ ಗೆದ್ದರೆ, ಮತ್ತೊಮ್ಮೆ ಪರಣ್ಣ ಈಶ್ವರಪ್ಪ ಮುನವಳ್ಳಿ ಗೆಲ್ಲುತ್ತಾ ಬರುತ್ತಿದ್ದಾರೆ. ಲಿಂಗಾಯತರ ಪ್ರಾಬಲ್ಯದ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯೊಬ್ಬರು ಗೆದ್ದಿರುವುದು ವಿಶೇಷವಾಗಿದೆ.

ರಾಜಕೀಯ ಇತಿಹಾಸ :
ಕರ್ನಾಟಕ ವಿಧಾನಸಭಾ ಚುನಾವಣೆಯ ದೃಷ್ಟಿಯಲ್ಲಿ ಗಂಗಾವತಿ ಕ್ಷೇತ್ರ ಮಹತ್ವದ್ದಾಗಿದೆ. ಮುಂದುವರೆದ ಜಾತಿಗಳು ಮತ್ತು ಹಿಂದುಳಿದ ಜಾತಿಗಳ ನಡುವಿನ ತೀವ್ರ ಪೈಪೋಟಿಯೊಂದಿಗೆ ನಡೆಯುತ್ತಿದ್ದ ಈ ಕ್ಷೇತ್ರದ ಚುನಾವಣೆಗಳಿಂದ ಕ್ಷೇತ್ರವು ಪ್ರಸ್ತುತ ಸೂಕ್ಷ್ಮ ಪ್ರದೇಶವಾಗಿ ಬದಲಾಗಿದೆ. ವೈಯಕ್ತಿಕ ಪ್ರತಿಷ್ಠೆ, ಧರ್ಮ, ಪ್ರಗತಿ, ವ್ಯಕ್ತಿ ಹಾಗೂ ಜಾತಿ ಈ ಎಲ್ಲ ಆಯಾಮಗಳ ಮೇಲೂ ಚುನಾವಣೆಗಳು ನಡೆಯುವ ಕ್ಷೇತ್ರವಿದು. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಗಂಗಾವತಿ ಇಂದು ಧರ್ಮಾಧಾರಿತ ರಾಜಕಾರಣದ ಕೇಂದ್ರವಾಗಿದೆ.

2018ರಲ್ಲಿ ಪರಣ್ಣ ಈಶ್ವರಪ್ಪ ಮುನವಳ್ಳಿ 7,973 ಮತಗಳ ಅಂತರದಿಂದ ಕಾಂಗ್ರೆಸ್‌ ಪಕ್ಷಕ್ಕೆ ಪಕ್ಷಾಂತರವಾಗಿರುವ ಇಕ್ಬಾಲ್‌ ಅನ್ಸಾರಿ ಅವರನ್ನು ಸೋಲಿಸಿದರು.

ಮತ-ಜಾತಿ ಲೆಕ್ಕಾಚಾರ   :
ಒಟ್ಟು ಮತದಾರರ ಸಂಖ್ಯೆ: 200597
ಪುರುಷ  99497   ಮಹಿಳೆ  101089
ಲಿಂಗಾಯತ: 55,000
ಕುರುಬರು: 25,000
ಪ.ಪಂಗಡ: 25,000
ಪ.ಜಾತಿ: 30,000
ನಾಯ್ಡು: 6,000
ಕ್ರೈಸ್ತ: 5,000
ಇತರೆ: 10,000

2023ರ ಸ್ಪರ್ಧಾಳುಗಳು  :
INC  ಇಕ್ಬಾಲ್ ಅನ್ಸಾರಿ
BJP  ಪರಣ್ಣ ಮುನವಳ್ಳಿ
KRPP  ಜನಾರ್ದನರೆಡ್ಡಿ
AAP  ಶರಣಪ್ಪ ಸಜ್ಜಿಹೊಲ
JDS  ಚನ್ನಕೇಶವ

ಕೊಪ್ಪಳ ಕ್ಷೇತ್ರ : 
ಕೊಪ್ಪಳದಲ್ಲಿ 1999ರಿಂದಲೂ ಬಸವರಾಜ ಹಿಟ್ನಾಳ್‌ ಮತ್ತು ಸಂಗಣ್ಣ ಕರಡಿ ಕುಟುಂಬದ ನಡುವೆ ಜಿದ್ದಾಜಿದ್ದಿ ನಡೆಯುತ್ತಲೇ ಇದೆ. 2004ರಲ್ಲಿ ಬಸವರಾಜ್ ಹಿಟ್ನಾಳ್ ಗೆದ್ದರೆ, 2008 ಮತ್ತು 2011ರ ಉಪಚುನಾವಣೆಯಲ್ಲಿ ಕರಡಿ ಸಂಗಣ್ಣ ಗೆದ್ದರು. 2013ರಲ್ಲಿ ತಂದೆ ಬಸವರಾಜ್‌ ಹಿಟ್ನಾಳ್‌ ಬದಲಿಗೆ ಚುನಾವಣೆಗೆ ನಿಂತ ರಾಘವೇಂದ್ರ ಹಿಟ್ನಾಳ್‌ ಅವರು 2013, 2018ರಲ್ಲಿ ಸತತ ಎರಡು ಬಾರಿ ಗೆದ್ದು ಹ್ಯಾಟ್ರಿಕ್‌ನ ನಿರೀಕ್ಷೆಯಲ್ಲಿದ್ದಾರೆ.

2017ರಲ್ಲಿ ಈ ತಾಲೂಕುಗಳನ್ನು ವಿಭಜಿಸಿ ಕುಕನೂರು, ಕನಕಗಿರಿ ಹಾಗೂ ಕಾರಟಗಿ ಈ ಮೂರು ತಾಲೂಕುಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಯಿತು. ಕೊಪ್ಪಳದ ರಾಜಕೀಯ ಇತಿಹಾಸ ನೋಡುವುದಾದರೆ, ಜಾತಿ ಆಧಾರಿತವಾಗಿ ಇಲ್ಲಿ ಚುನಾವಣೆಗಳು ನಡೆಯುತ್ತಿವೆ. ಕರ್ನಾಟಕ ರಾಜ್ಯವಾಗಿ ಉಗಮಗೊಂಡು ಜನತಾ ಪಕ್ಷ ಆಳ್ವಿಕೆಗೆ ಬರುವವರೆಗೂ ಕಾಂಗ್ರೆಸ್‌ನ ಹಿಡಿತದಲ್ಲಿದ್ದ ಕೊಪ್ಪಳ ವಿಧಾನಸಭೆ ನಂತರ ಎರಡು ಕುಟುಂಬಗಳ ನಡುವಿನ ಪೈಪೋಟಿಗೆ ಹೆಸರಾಗಿದೆ.

ರಾಜಕೀಯ ಇತಿಹಾಸ :
ಕೊಪ್ಪಳ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕರಡಿ ಸಂಗಣ್ಣ ಪಕ್ಷ ಬದಲಿಸುವ ವಿಚಾರದಲ್ಲಿ ಪ್ರಖ್ಯಾತರು. ಪಕ್ಷೇತರ ಅಭ್ಯರ್ಥಿಯಾಗಿ ಮೊದಲ ಬಾರಿ ಗೆಲುವು ಸಾಧಿಸಿದ್ದ ಕರಡಿ ಸಂಗಣ್ಣ, ನಂತರ ಜೆಡಿಯು, ಜೆಡಿಎಸ್‌, ಬಿಜೆಪಿಯಿಂದ ಒಂದೊಂದು ಬಾರಿ ಗೆಲುವು ಸಾಧಿಸಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ಬಿಜೆಪಿಯಿಂದ ಸ್ಪರ್ಧಿಸಿ, ಪಕ್ಷ ನಿಷ್ಠೆ ತೋರಿಸುತ್ತಿರುವ ಅವರು ತೀವ್ರ ಹಿನ್ನಡೆ ಅನುಭವಿಸಿದ್ದಾರೆ.

2008ರಲ್ಲಿ ಜೆಡಿಎಸ್‌ನಿಂದ ಸ್ಫರ್ಧಿಸಿ ಗೆಲುವು ಸಾಧಿಸಿದ್ದ ಕರಡಿ ಸಂಗಣ್ಣ ಕಾಂಗ್ರೆಸ್‌ ಪಕ್ಷದ ಬಸವರಾಜ ಭೀಮಪ್ಪ ಹಿಟ್ನಾಳ್ ಅವರನ್ನು 10,345 ಮತಗಳ ಅಂತರದಲ್ಲಿ ಸೋಲಿಸಿದ್ದರು. 2011ರಲ್ಲಿ ನಡೆದ ಉಪಚುನಾವಣೆಯಲ್ಲಿ ಕರಡಿ ಸಂಗಣ್ಣ 12,488 ಮತಗಳ ಅಂತರದಿಂದ ಬಸವರಾಜ ಹಿಟ್ನಾಳ್‌ ಅವರನ್ನು ಸೋಲಿಸಿದರು. ನಂತರ ನಡೆದ ಎರಡೂ ಚುನಾವಣೆಗಳಲ್ಲಿ ಕೆ ರಾಘವೇಂದ್ರ ಹಿಟ್ನಾಳ್ ಜಯಭೇರಿ ಭಾರಿಸಿದ್ದು, 2018ರಲ್ಲಿ ನಡೆದ ಚುನಾವಣೆಯಲ್ಲಿ 26,351 ಮತಗಳ ಅಂತರದಿಂದ ಸಂಗಣ್ಣ ಕರಡಿ ಅವರನ್ನು ಸೋಲಿಸಿದರು. ಎರಡು ಕುಟುಂಬಗಳ ನಡುವಿನ ಈ ಪೈಪೋಟಿ ಮುಂದುವರೆಯುತ್ತಲೇ ಇದೆ.

ಮತ-ಜಾತಿ ಲೆಕ್ಕಾಚಾರ 
ಒಟ್ಟು ಮತದಾರರು: 2,52,404
ಪುರುಷ ಮತದಾರರು:  1,25,444
ಮಹಿಳಾ ಮತದಾರರು: 1,27,248
ಲಿಂಗಾಯತ: 60,000
ಮುಸ್ಲಿಂ: 44,000
ಪರಿಶಿಷ್ಟ ಜಾತಿ: 45,000
ಪರಿಶಿಷ್ಟ ಪಂಗಡ: 25,000
ಕುರುಬ : 25,000
ಬ್ರಾಹ್ಮಣ : 8,000
ಕ್ರೈಸ್ತ :2.500

2023ರ ಸ್ಪರ್ಧಾಳುಗಳು   :
INC  ರಾಘವೇಂದ್ರ ಹಿಟ್ನಾಳ
BJP  ಮಂಜುಳಾ ಕರಡಿ
JDS  ಸಿ.ವಿ.ಚಂದ್ರಶೇಖರ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News