ಅಮರಾವತಿ(ಆಂಧ್ರ ಪ್ರದೇಶ): ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈ.ಎಸ್. ಜಗನ್ ಮೋಹನ್ ರೆಡ್ಡಿ ಯುನಿವರ್ಸಲ್ ಹೆಲ್ತ್ ಕಾರ್ಡ್ ಯೋಜನೆಯನ್ನು ಘೋಷಿಸಿದ್ದಾರೆ.
ಚಿತ್ತೂರು ಜಿಲ್ಲೆಯ ಕುಪ್ಪಮ್ನಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ರ‍್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುವ ವೇಳೆ ಜಗನ್ ಈ ಘೋಷಣೆ ಮಾಡಿದರು. ರಾಜ್ಯದಲ್ಲಿ ಇನ್ನೊಂದು ವಾರದಲ್ಲಿ ಮತದಾನ ನಡೆಯಲಿದ್ದು, ಅದಕ್ಕೂ ಮೊದಲು ಈ ಘೋಷಣೆ ಮಾಡಲಾಗಿದೆ. ಆರೋಗ್ಯ ಯೋಜನೆ ಅಡಿಯಲ್ಲಿ, ಯಾವುದೇ ವ್ಯಕ್ತಿಯು ವಾರ್ಷಿಕ 5,00,000 ರೂ.ವರೆಗಿನ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ಪಡೆಯಬಹುದು.
ಆರೋಗ್ಯ ಸಿರಿ ವೈಎಸ್ಆರ್ ದೃಷ್ಟಿಕೊನವಾಗಿದ್ದು, ಈ ಯುನಿವರ್ಸಲ್ ಹೆಲ್ತ್ ಕಾರ್ಡುಗಳು ರೂ. 1,000 ದಿಂದ ಯಾವುದೇ ವೈದ್ಯಕೀಯ ಖರ್ಚಿಗೆ ಲಭ್ಯವಿರಲಿದೆ. ಯುನಿವರ್ಸಲ್ ಹೆಲ್ತ್ ಕಾರ್ಡ್ ಯೋಜನೆ ವೈಯಕ್ತಿಕವಾಗಿ ಜಗನ್ ರೆಡ್ಡಿಯಿಂದ ಮೇಲ್ವಿಚಾರಣೆ ಮಾಡಲಾಗುವುದು ಎನ್ನಲಾಗಿದೆ.
ಆಂಧ್ರಪ್ರದೇಶದಲ್ಲಿ 25 ಲೋಕಸಭಾ ಸ್ಥಾನಗಳಿಗೆ ಮತ್ತು 175 ವಿಧಾನಸಭಾ ಸ್ಥಾನಗಳಿಗೆ ಒಟ್ಟಿಗೆ ಚುನಾವಣೆಗಳು ನಡೆಯಲಿವೆ. ಮೇ 23 ರಂದು ಫಲಿತಾಂಶಗಳನ್ನು ಘೋಷಿಸಲಾಗುವುದು.