ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮಳೆ ಬರುವ ಸಂದರ್ಭದಲ್ಲಿ ಸಿಡಿಲು ಬಡಿದು ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದೆ ಒಡಿಶಾದಲ್ಲಿ ಅಪ್ಪಳಿಸಿದ ಫೋನಿ ಚಂಡಮಾರುತ ಸಂದರ್ಭದಲ್ಲಿ ಕನಿಷ್ಠ 5 ಮಂದಿ ಸಿಡಿಲು ಬಡಿದು ಸಾವನ್ನಪ್ಪಿದ್ದರು. ಈ ಬೆನ್ನಲ್ಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಜನತೆಗೆ ಕೆಲವು ಸಲಹೆಗಳನ್ನು ನೀಡಿದೆ.
ಮಳೆ ಬರುವ ಸಂದರ್ಭದಲ್ಲಿ ಬಯಲಿನಲ್ಲಿದ್ದಾಗ ಸಿಡಿಲಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಕೆಲವು ಟಿಪ್ಸ್ ನೀಡಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ಸಂಬಂಧ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದೆ.
* ಬಯಲಿನಲ್ಲಿರುವ ಸಂದರ್ಭದಲ್ಲಿ ಆಟವಾಡುತ್ತಿರುವಾಗಲೋ, ಸಭೆ ಸಮಾರಂಭಗಳು ನಡೆಯುವಾಗಲೋ ಸಿಡಿಲು ಬಡಿದರೆ ಕೂಡಲೇ ಒಬ್ಬರಿಂದ ಮತ್ತೊಬ್ಬರಿಗೆ ಅಂತರವನ್ನು ಕಾಯ್ದುಕೊಳ್ಳಿ.
* ಬಳಿಕ ಎಲ್ಲರೂ ತಮ್ಮ ಕಿವಿಗಳನ್ನು ಎರಡೂ ಕೈಗಳಿಂದ ಮುಚ್ಚಿಕೊಂಡು, ಪಾದಗಳನ್ನು ಜೋಡಿಸಿ, ಕುಕ್ಕರಗಾಲಿನಲ್ಲಿ ಕುಳಿತುಕೊಳ್ಳಿ. ಈ ಮೂಲಕ ನಾವು ಕಿವಿಗಳನ್ನು ಸಿಡಿಲಿನ ಶಬ್ದದಿಂದ ರಕ್ಷಿಸಿಕೊಳ್ಳುವುದಷ್ಟೇ ಅಲ್ಲದೆ, ಮಿಂಚಿನಿಂದ ಉಂಟಾಗುವ ಸಾವಿನಿಂದ ಪಾರಾಗಬಹುದು.
* ಮಳೆ ಬರುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮರದ ಕೆಳಗೆ ನಿಲ್ಲಬೇಡಿ. ಸಿಡಿಲು ಭೂಮಿಗೆ ಬಡಿಯುವಾಗ ಮರದಂಥ ಹಸಿ ವಸ್ತುವಿನತ್ತ ಆಕರ್ಷಿತವಾಗುತ್ತದೆ. ಇದರಿಂದಾಗಿ ಪ್ರಾಣಾಪಾಯ ಖಂಡಿತ.
* ಸಿಡಿಲು, ಮಿಂಚಿನ ಸಂದರ್ಭದಲ್ಲಿ ಕಟ್ಟಡದೊಳಗೆ ಆಶ್ರಯ ಪಡೆಯಿರಿ. ನದಿ, ವಿದ್ಯುತ್ ಕಂಬ, ಮೊಬೈಲ್ ಟವರ್ರ, ತಂತಿ ಬೇಲಿ ಮೊದಲಾದವುಗಳಿಂದ ದೂರವಿರಿ.