ಉತ್ತರಪ್ರದೇಶ : ರಾಜ್ಯದಲ್ಲಿರುವ ಬಿಜೆಪಿ ಸರಕಾರ ಎಲ್ಲಾ ಸರ್ಕಾರಿ ಕಚೇರಿಗಳನ್ನು, ಕಟ್ಟಡಗಳನ್ನು ಕೇಸರೀಕರಣಗೊಳಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಇದೀಗ ಇಲ್ಲಿನ ಡಾ.ಅಂಬೇಡ್ಕರ್ ಪ್ರತಿಮೆಯೊಂದು ಕೇಸರೀಕರಣಗೊಂಡಿದೆ.
ಇತ್ತೀಚಿಗೆ ಉತ್ತರಪ್ರದೇಶದ ಬದಾನ್ ನಲ್ಲಿ ಧ್ವಂಸವಾಗಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಪುನರ್ ನಿರ್ಮಿಸಲಾಗಿದೆ. ಆದರೆ, ಸಾಮಾನ್ಯವಾಗಿ ನೀಲಿ ಬಣ್ಣದಲ್ಲಿರುವ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮೂರ್ತಿ, ಬದಾನ್'ನ ದುಗ್ರಯಾ ಗ್ರಾಮದಲ್ಲಿ ನೂತನವಾಗಿ ಅನಾವರಣಗೊಂಡಿರುವ ಪ್ರತಿಮೆಯಲ್ಲಿ ಮಾತ್ರ ರಾಜಕುಮಾರನ ಉಡುಪಿನಲ್ಲಿದ್ದು, ಕೇಸರಿ ಬಣ್ಣದಲ್ಲಿದೆ.
ಏಪ್ರಿಲ್ 7 ರಂದು ಬದಾನ್'ನ ಕುನ್ವರ್ಗಾನ್ ಪ್ರದೇಶದ ದುಗ್ರಯಾ ಗ್ರಾಮದಲ್ಲಿ ಕೆಲವು ದುಷ್ಕರ್ಮಿಗಳು ಅಂಬೇಡ್ಕರ್ ಪ್ರತಿಮೆಯನ್ನು ವಿರೂಪಗೊಳಿಸಿದ್ದರು. ಆದರೆ, ಈ ಘಟನೆಯನ್ನು ವಿರೋಧಿಸಿ ಹಲವು ದಲಿತ ಸಂಘಟನೆಗಳು ಪ್ರತಿಭಟಿಸಿದ ಪರಿಣಾಮ ಜಿಲ್ಲಾಡಳಿತ ಆಗ್ರಾದಿಂದ ಮತ್ತೊಂದು ಪ್ರತಿಮೆಯನ್ನು ತಂದು ಸ್ಥಾಪಿಸಿದೆ. ಆದರೆ ಅದು ಕೇಸರಿಮಯವಾಗಿದೆ.
Badaun: A BR Ambedkar statue which was vandalized recently has been rebuilt and painted saffron in colour pic.twitter.com/saW7U9BBUi
— ANI UP (@ANINewsUP) April 10, 2018
ಈ ಬಗ್ಗೆ ಜಿಲ್ಲಾಡಳಿತ ಮತ್ತು ಸ್ಥಳೀಯ ಪೋಲಿಸರನ್ನು ಜೀ ನ್ಯೂಸ್ ಸಂಪರ್ಕಿಸಲು ಪ್ರಯತ್ನಿಸಿತಾದರೂ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ. ಆದರೆ, ಈ ಕೇಸರಿ ಬಣ್ಣದ ಪ್ರತಿಮೆ ಸ್ಥಾಪನೆಯಲ್ಲಿ ಬಿಜೆಪಿ ಪಾತ್ರವಿದೆ ಎಂಬುದನ್ನು ಬಿಜೆಪಿ ಶಾಸಕ ಸ್ವರೂಪ್ ಪಾಠಕ್ ತಳ್ಳಿಹಾಕಿದ್ದಾರೆ. "ಇದನ್ನು ರಾಜಕೀಯ ವಿಷಯವಾಗಿ ಮಾಡಲಾಗುತ್ತಿದೆ. ಈ ಪ್ರತಿಮೆಯಿಂದ ಬಿಜೆಪಿಗೆ ಏನೂ ಸಿಕ್ಕಿಲ್ಲ. ಕೇಸರಿ ಬಣ್ಣ ಭಾರತೀಯ ಸಂಸ್ಕೃತಿಯ ಸಂಕೇತವಾಗಿದೆ" ಎಂದು ಹೇಳಿದ್ದಾರೆ.