ನವದೆಹಲಿ: ಕಾಶ್ಮೀರಕ್ಕೆ ಇದ್ದ 370 ನೇ ವಿಧಿಯನ್ನು ರದ್ದುಗೊಳಿಸುವ ಹಿನ್ನಲೆಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹಾಕಿದ್ದ ಸರ್ಕಾರ ಈಗ ಗುರುವಾರದಂದು ಮುಕ್ತಗೊಳಿಸುವುದಾಗಿ ಹೇಳಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಜಮ್ಮು ಮತ್ತು ಕಾಶ್ಮೀರ ಆಡಳಿತದ ಮಾಹಿತಿ ಇಲಾಖೆ' ರಾಜ್ಯಪಾಲ ಶ್ರೀ ಸತ್ಯ ಪಾಲ್ ಮಲಿಕ್ ಅವರು ಸಲಹೆಗಾರರು ಮತ್ತು ಮುಖ್ಯ ಕಾರ್ಯದರ್ಶಿಯೊಂದಿಗೆ ಇಂದು ಪರಿಸ್ಥಿತಿ ಮತ್ತು ಭದ್ರತಾ ಪರಿಶೀಲನಾ ಸಭೆ ನಡೆಸಿ, ಪ್ರವಾಸಿಗರನ್ನು ಕಣಿವೆಯಿಂದ ಹೊರಹೋಗುವಂತೆ ಕೇಳುವ ಗೃಹ ಇಲಾಖೆಯ ಸಲಹೆಯನ್ನು ತಕ್ಷಣವೇ ತೆಗೆದುಹಾಕುವಂತೆ ರಾಜ್ಯಪಾಲರು ನಿರ್ದೇಶನ ನೀಡಿದ್ದಾರೆ. ಇದನ್ನು10.10.2019 ರಿಂದ ಜಾರಿಗೊಳಿಸಲಾಗುವುದು' ಎಂದು ಹೇಳಿದೆ.
ಕೇಂದ್ರ ಸರ್ಕಾರ ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು, ಈ ಕ್ರಮವು ರಾಜ್ಯದ ಜನರಿಗೆ ದೇಶದ ಉಳಿದ ಭಾಗಗಳಂತೆಯೇ ಸಾಂವಿಧಾನಿಕ ಪ್ರಯೋಜನಗಳನ್ನು ಪಡೆಯಲು ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಹೇಳಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.
ಇದಾದ ನಂತರ ಕಾನೂನು ಸುವ್ಯವಸ್ಥೆ ನಿಟ್ಟಿನಲ್ಲಿ ಕೇಂದ್ರವು ಭಾರಿ ಭದ್ರತಾ ನಿರ್ಬಂಧಗಳನ್ನು ವಿಧಿಸಿತು ಮತ್ತು ರಾಜಕಾರಣಿಗಳನ್ನು ಬಂಧಿಸುವುದು, ಹೆಚ್ಚುವರಿ ಸೈನಿಕರನ್ನು ಪೋಸ್ಟ್ ಮಾಡುವುದು ಮತ್ತು ಫೋನ್ ಮತ್ತು ಇಂಟರ್ನೆಟ್ ಮಾರ್ಗಗಳನ್ನು ನಿರ್ಬಂಧಿಸುವುದು ಸೇರಿದಂತೆ ಕ್ರಮಗಳನ್ನು ತೆಗೆದುಕೊಂಡಿತು.ಅಂತಹ ಕೆಲವು ನಿರ್ಬಂಧಗಳನ್ನು ನಿಧಾನವಾಗಿ ಸಡಿಲಿಸಲಾಗಿದೆ, ಆದರೆ ಕಾಶ್ಮೀರ ಕಣಿವೆಯಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಸಂವಹನಗಳನ್ನು ಇನ್ನೂ ಹೆಚ್ಚಾಗಿ ನಿರ್ಬಂಧಿಸಲಾಗಿದೆ.