ನವದೆಹಲಿ: ಸಾಮಾಜಿಕ ಮಾಧ್ಯಮ ತಾಣ Facebook ಇಂಡಿಯಾ ಹಾಗೂ ಏಷ್ಯಾ ಪಾಲಸಿ ಡೈರೆಕ್ಟರ್ ಗೆ ಜೀವಬೆದರಿಕೆ ನೀಡಲಾಗುತ್ತಿದೆ. ಸಂತ್ರಸ್ತ ನಿರ್ದೇಶಕಿ ದೆಹಲಿ ಪೋಲೀಸರ ಕ್ರೈಂ ಬ್ರಾಂಚ್ ನಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಫೇಸ್ಬುಕ್ ಇಂಡಿಯಾ ಹಾಗು ಏಷ್ಯಾನ ಪಾಲಸಿ ನಿರ್ದೇಶಕಿ ಆಂಖಿ ದಾಸ್ ದೆಹಲಿ ಪೋಲೀಸರ ಬಳಿ ದೂರು ದಾಖಲಿಸಿದ್ದು, ತಮಗೆ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಮೂಲಕ ಬೆದರಿಕೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಜೊತೆಗೆ ಫೋನ್ ಮೂಲಕ ಕೂಡ ಪ್ರಾಣ ಬೆದರಿಕೆ ನೀಡಲಾಗುತ್ತಿದೆ ಎಂದು ಆಂಖಿ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಆಗಸ್ಟ್ 14ರ ಬಳಿಕ ತಮಗೆ ಈ ಬೆದರಿಕೆಗಳನ್ನು ನೀಡಲಾಗುತ್ತಿದೆ ಎಂದು ಆಂಖಿ ಹೇಳಿದ್ದಾರೆ. ತಮ್ಮ ದೂರಿನಲ್ಲಿ ಅವರು 5-6 ಜನರ ಹೆಸರನ್ನೂ ಸಹ ಉಲ್ಲೇಖಿಸಿದ್ದಾರೆ. ದೂರು ಪಡೆದ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.
ಆಗಸ್ಟ್ 14 ರಂದು ಯುಎಸ್ ಮೂಲದ ಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಪ್ರಕಟಗೊಂಡ ವರದಿಯೊಂದು ಫೇಸ್ಬುಕ್ ಭಾರತದಲ್ಲಿ ತನ್ನ ಕಾರ್ಯವನ್ನು ಸುಧಾರಿಸಲು ಯತ್ನಿಸುತ್ತಿದ್ದು, ಯಾವುದೇ ತೊಂದರೆಗಳಿಲ್ಲದೆ ಕೆಲಸ ಮಾಡಲು ಬಿಜೆಪಿ ನಾಯಕ ನಾಯಕರ ಪರ ಕಾರ್ಯನಿರ್ವಹಿಸುತ್ತಿದೆ ಎಂದಿದೆ. ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಫೇಸ್ಬುಕ್ ಬಿಜೆಪಿ ನಾಯಕರ ದ್ವೇಷದ ಭಾಷಣಗಳನ್ನುಹಾಗೂ ತನ್ನ ವೇದಿಕೆಯಿಂದ ಹಿಂಸೆಗೆ ಪ್ರಚೋದನೆಗಳನ್ನು ನೀಡುವ ಹೇಳಿಕೆಗಳನ್ನು ತೆಗೆದುಹಾಕುತ್ತಿಲ್ಲ ಎನ್ನಲಾಗಿದೆ. ಫೇಸ್ಬುಕ್ ತನ್ನ ಹಿತಾಸಕ್ತಿಗಳನ್ನು ಸಾಧಿಸಲು ಈ ಕೆಲಸ ಮಾಡುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ವಾಲ್ ಸ್ಟ್ರೀಟ್ ಪ್ರಕತಗೊಲಿಸಿದ್ದ ಈ ವರದಿಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಹಂಚಿಕೊಂಡಿದ್ದರು. ವರದಿಯನ್ನು ಟ್ವೀಟ್ ಮಾಡಿದ್ದ ರಾಹುಲ್, ದೇಶದಲ್ಲಿ BJP ಹಾಗೂ RSSಗಳು Facebook ಹಾಗೂ WhatsApp ಗಳನ್ನು ನಿಯಂತ್ರಿಸುತ್ತಿವೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲ ಇವುಗಳ ಸಹಾಯದಿಂದ ಬಿಜೆಪಿ ಮತ್ತು ಆರ್ಎಸ್ಎಸ್ ತನ್ನ ಅಜೆಂಡಾ ಮುಂದುವರೆಸುತ್ತಿವೆ ಎಂದು ರಾಹುಲ್ ಹೇಳಿದ್ದರು.
ಆದರೆ, ಈ ಕುರಿತು ಭಾನುವಾರ ಆಗಸ್ಟ್ 16ರಂದು ತಕ್ಷಣ ಪ್ರತಿಕ್ರಿಯೆ ನೀಡಿದ್ದ ಫೇಸ್ಬುಕ್ ವಕ್ತಾರರು, ಫೇಸ್ಬುಕ್ ತನ್ನ ನಿಯಮಗಳ ಪ್ರಕಾರ ಯಾವುದೇ ರಾಜಕೀಯ ಒತ್ತಡ ಅಥವಾ ತಾರತಮ್ಯವಿಲ್ಲದೆ ದ್ವೇಷ ಭಾಷಣದಂತಹ ಪೋಸ್ಟ್ಗಳನ್ನು ತಕ್ಷಣ ತೆಗೆದುಹಾಕುತ್ತದೆ ಎಂದು ಹೇಳಿದ್ದರು. ಇದು ವಿಶ್ವದಾದ್ಯಂತ ಫೇಸ್ಬುಕ್ನ ನೀತಿಯಾಗಿದೆ ಎಂದು ಅವರು ಹೇಳಿದ್ದರು.