ನವದೆಹಲಿ: 50 ದಿನಗಳಿಗೂ ಹೆಚ್ಚು ಕಾಲ ಗೃಹಬಂಧನದಲ್ಲಿದ್ದ ಕಾಶ್ಮೀರದ ರಾಜಕೀಯ ಮುಖಂಡರನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರ ಸಲಹೆಗಾರರೊಬ್ಬರು ಹೇಳಿದ್ದಾರೆ.
ಗೃಹ ಬಂಧನದಲ್ಲಿದ್ದ ಜಮ್ಮುವಿನ ಕೆಲವು ನಾಯಕರನ್ನು ನಿನ್ನೆ ಬಿಡುಗಡೆ ಮಾಡಲಾಯಿತು, ಈ ಹಿನ್ನಲೆಯಲ್ಲಿ ಈಗ ಹಂತ ಹಂತವಾಗಿ ಕಾಶ್ಮೀರದಲ್ಲಿನ ನಾಯಕರನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.ಈಗ ಪಂಚಾಯತ್ ರಾಜ್ ವ್ಯವಸ್ಥೆಯ ಎರಡನೇ ಹಂತದ ಬ್ಲಾಕ್ ಡೆವಲಪ್‌ಮೆಂಟ್ ಕೌನ್ಸಿಲ್‌ಗೆ ಚುನಾವಣೆ ಘೋಷಿಸಿದ ಕೆಲವೇ ದಿನಗಳಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
Farooq Khan, Advisor to J&K Governor on if after Jammu region leaders now Kashmiri leaders will be released from detention: Yes, one by one after analysis of every individual, they will be released pic.twitter.com/qIrgkCRqvt
— ANI (@ANI) October 3, 2019
ಕಾಶ್ಮೀರಿ ನಾಯಕರನ್ನು ಸಹ ಬಂಧನದಿಂದ ಬಿಡುಗಡೆ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಗವರ್ನರ್ ಸತ್ಯ ಪಾಲ್ ಮಲಿಕ್ ಅವರ ಸಲಹೆಗಾರ ಫಾರೂಕ್ ಖಾನ್, 'ಹೌದು, ಪ್ರತಿಯೊಬ್ಬ ವ್ಯಕ್ತಿಯ ವಿಶ್ಲೇಷಣೆಯ ನಂತರ ಒಂದೊಂದಾಗಿ ಅವರನ್ನು ಬಿಡುಗಡೆ ಮಾಡಲಾಗುತ್ತದೆ' ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಮಾಜಿ ಮುಖ್ಯಮಂತ್ರಿಗಳಾದ 83 ವರ್ಷದ ಫಾರೂಕ್ ಅಬ್ದುಲ್ಲಾ, ಅವರ ಪುತ್ರ ಒಮರ್ ಅಬ್ದುಲ್ಲಾ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥ ಮೆಹಬೂಬಾ ಮುಫ್ತಿ ಸೇರಿದಂತೆ ಸುಮಾರು 400 ರಾಜಕೀಯ ಮುಖಂಡರನ್ನು ಬಂಧನದಲ್ಲಿರಿಸಲಾಗಿದೆ. 370 ನೇ ವಿಧಿ ಅಡಿಯಲ್ಲಿ ರಾಜ್ಯಕ್ಕೆ ಸ್ಥಾನಮಾನವನ್ನು ಹಿಂತೆಗೆದುಕೊಂಡು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸುವ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿತ್ತು.
ಭದ್ರತಾ ಕ್ರಮಗಳ ಭಾಗವಾಗಿ ರಾಜ್ಯದಲ್ಲಿ ನಾಯಕರನ್ನು ಬಂಧಿಸಿರುವುದಲ್ಲದೆ ಫೋನ್ ಮತ್ತು ಇಂಟರ್ನೆಟ್ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು