ಹೈದರಾಬಾದ್: ಟಿಡಿಪಿ ಅಧ್ಯಕ್ಷ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಎಂ.ಚಂದ್ರಬಾಬು ನಾಯ್ಡು ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನವೆಂಬರ್ 28 ಮತ್ತು 29ರಂದು ರಾಹುಲ್ ಗಾಂಧಿ ಜೊತೆ ಚಂದ್ರಬಾಬು ನಾಯ್ಡು ಅವರು ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಪಿಐ ಮತ್ತು ತೆಲಂಗಾಣ ಜನ ಸಮಿತಿ (ಟಿಜೆಎಸ್)ಯನ್ನು ಒಳಗೊಂಡ 'ಮಹಾ ಮೈತ್ರಿ'ಯ ಭಾಗವಾಗಿ ಟಿಡಿಪಿ ಮತ್ತು ಕಾಂಗ್ರೆಸ್ ತೆಲಂಗಾಣದಲ್ಲಿ ಡಿಸೆಂಬರ್ 7 ರಂದು ಚುನಾವಣೆಯನ್ನು ಎದುರಿಸಲಿವೆ.
ದೇಶದಲ್ಲಿ ಬಿಜೆಪಿಯನ್ನು ಆಡಳಿತದಿಂದ ಹೊರಗಿಡುವ ಉದ್ದೇಶದಿಂದ ಪ್ರತಿಪಕ್ಷಗಳನ್ನು ಒಗ್ಗೂಡಿಸಳು ಪ್ರಯತ್ನಿಸುತ್ತಿರುವ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು, ಈ ತಿಂಗಳ ಆರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದರು.
ಏತನ್ಮಧ್ಯೆ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಮೆಡ್ಕಲ್ನಲ್ಲಿ ಶುಕ್ರವಾರ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವಂತೆ ಟಿಡಿಪಿ ಮತ್ತು ಇತರ ಮೈತ್ರಿ ಪಾಲುದಾರರನ್ನು ಕಾಂಗ್ರೆಸ್ ಆಹ್ವಾನಿಸಿದೆ.
ತೆಲಂಗಾಣ ವಿಧಾನಸಭೆಗೆ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.