ನವದೆಹಲಿ: ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿರುವ ತೆಲಂಗಾಣದಲ್ಲಿ ಅಭ್ಯರ್ಥಿಗಳು ಹಲವಾರು ವಿಶಿಷ್ಟ ವಿಧಾನಗಳನ್ನು ಬಳಸುತ್ತಿದ್ದಾರೆ. ಕೊರಾಟೋಲಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸ್ವತಂತ್ರ ಅಭ್ಯರ್ಥಿ ಮತದಾರರಿಗೆ 'ಚಪ್ಪಲಿ' ವಿತರಿಸಿ ಮತ ಯಾಚಿಸುತ್ತಿದ್ದಾರೆ. ಆ ಸಂದರ್ಭದಲ್ಲಿ ಮತದಾರರೊಂದಿಗೆ ಮಾತನಾಡಿದ ಅಭ್ಯರ್ಥಿಯು, 'ಈ ಸಮಯದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸದಿದ್ದರೆ ಚಪ್ಪಲಿಯಿಂದ ಹೊಡೆಯಿರಿ' ಎಂದು ಅವರು ತಮ್ಮ ಮತದಾರರಿಗೆ ಹೇಳಿದ್ದಾರೆ.
ಪಕ್ಷದ ಚಿಹ್ನೆಯಿಲ್ಲದೆ ಚುನಾವಣೆ:
ಜಗ್ತಿಯಾಲ್ ಜಿಲ್ಲೆಯ ಕೊರಾಟೋಲಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅಕುಲ ಹನುಮಂತು, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತ, ನನ್ನ ಹಿಂದೆ ಯಾವುದೇ ಪಕ್ಷ ಇಲ್ಲ. ನಾನು ಯಾವುದೇ ಪಕ್ಷದ ಚಿಹ್ನೆಯಿಲ್ಲದೆ ಚುನಾವಣಾ ಪ್ರಚಾರ ಮಾಡುತ್ತಿದ್ದೇನೆ ಎಂದರು.
ನಾನು ಅಧಿಕಾರಕ್ಕೆ ಬಂದ ನಂತರ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನೂ ಪೂರೈಸುತ್ತೇನೆ ಎಂದು ಪ್ರಮಾಣ ಮಾಡಿದ ಅಕುಲ ಹನುಮಂತು, ನಾನೇನಾದರೂ ನೀಡಿದ ಭರವಸೆಗಳನ್ನು ಈಡೇರಿಸದಿದ್ದರೆ ಇದೇ 'ಚಪ್ಪಲಿ'ಗಳಿಂದ ನನ್ನನ್ನು ಹೊಡೆಯಿರಿ ಎಂದು ಹೇಳಿದರು.
ಜನರಿಗೆ 'ಕ್ಷೌರ' ಮಾಡಿದ ಟಿಆರ್ಎಸ್ ಅಭ್ಯರ್ಥಿ:
ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ನೇತೃತ್ವದ ಆಡಳಿತಾತ್ಮಕ ಟಿಆರ್ಎಸ್ ಪಕ್ಷದ ಅಭ್ಯರ್ಥಿ ವಿಶಿಷ್ಟ ರೀತಿಯಲ್ಲಿ ಪ್ರಚಾರ ಮಾಡಿದರು. ಭೂತಾಪಲ್ಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಟಿಆರ್ಎಸ್ ನಾಯಕ ಮತ್ತು ಮಾಜಿ ಸ್ಪೀಕರ್ ಎಸ್. ಮಧುಸೂದನ್ ಚರಿ ಅವರು ಗ್ರಾಹಕರಿಗೆ ಕ್ಷೌರ ಮಾಡುವ ದೃಶ್ಯ ಕಂಡು ಬಂದಿದೆ.
ತೆಲಂಗಾಣದಲ್ಲಿ ಒಂದೇ ಹಂತದಲ್ಲಿ ಡಿಸೆಂಬರ್ 7, 2018 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಮತ ಎಣಿಕೆ ಡಿಸೆಂಬರ್ 11 ರಂದು ನಡೆಯಲಿದೆ.