ನವದೆಹಲಿ: ಮೇಕೆದಾಟು ಯೋಜನೆ ಅನುಷ್ಠಾನವನ್ನು ತಡೆಹಿಡಿಯುವಂತೆ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರಿಂ ಕೋರ್ಟ್, ಕರ್ನಾಟಕದ ಮಹತ್ವದ ಯೋಜನೆಗೆ ಅಸ್ತು ಎಂದಿದೆ. ಈ ಬೆಳವಣಿಗೆಯಿಂದಾಗಿ ತಮಿಳುನಾಡಿಗೆ ಹಿನ್ನಡೆಯಾದಂತಾಗಿದೆ.
ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ನೀಡಿರುವ ಒಪ್ಪಿಗೆ ತಡೆಹಿಡಿಯಬೇಕು ಎಂದು ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿರುವ ಸುಪ್ರೀಂಕೋರ್ಟ್ ಮೇಕೆದಾಟು ಯೋಜನೆಗೆ ತಡೆ ನೀಡುವುದಿಲ್ಲ. ಹಾಗೆ ತಮಿಳುನಾಡು ಸಹ ಅವಸರ ಪಡುವ ಅಗತ್ಯವೂ ಬೇಡ ಎಂದು ಹೇಳಿದೆ.
ಮೇಕೆದಾಟು ಯೋಜನೆ ಸಂಬಂಧ ಕೇಂದ್ರ ಜಲ ಆಯೋಗ ಸಮಗ್ರ ಯೋಜನಾ ವರದಿ (ಡಿಪಿಆರ್) ಕೇಳಿದೆ ಅಷ್ಟೇ. ಡಿಪಿಆರ್ನಲ್ಲಿ ದೋಷವಿದ್ದರೆ ಆಕ್ಷೇಪಿಸಬಹುದು. ಡಿಪಿಆರ್ನಲ್ಲಿ ತಕರಾರಿದ್ದರೆ ಅರ್ಜಿ ಹಾಕಿ. ಈಗಲೇ ಭಯಪಡುವ ಅಗತ್ಯ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯೋಜನೆಗೆ ರೂಪು ರೇಷೆ ಸಿದ್ಧಪಡಿಸಿತ್ತು. ಆದರೆ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕರ್ನಾಟಕಕ್ಕೆ ಒಪ್ಪಿಗೆ ನೀಡಿತ್ತು. ಆದರೆ ತಮಿಳುನಾಡು ಸರ್ಕಾರ ಈ ಯೋಜನೆಗೆ ಅನುಷ್ಠಾನಕ್ಕೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಹಾಕಿತ್ತು.