ನವದೆಹಲಿ: ಗುಜರಾತ್ನ ಎರಡು ರಾಜ್ಯಸಭಾ ಸ್ಥಾನಗಳಿಗೆ ಏಕಕಾಲದಲ್ಲಿ ಉಪಚುನಾವಣೆ ನಡೆಸುವಂತೆ ಕೋರಿ ಕಾಂಗ್ರೆಸ್ ಮುಖಂಡರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ಮಂಗಳವಾರ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ರಜಾ ಪೀಠವು ಅರ್ಜಿ ವಿಚಾರಣೆಗೆ ನಿರಾಕರಿಸಿದ್ದು, ಚುನಾವಣೆಗೆ ಸಂಬಂಧಿಸಿದ ವಿಷಯಗಳಲ್ಲಿ ಉನ್ನತ ನ್ಯಾಯಾಲಯವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಗುಜರಾತ್ ಕಾಂಗ್ರೆಸ್ ಶಾಸಕ ಪರೇಶ್ಭಾಯ್ಧನಾನಿ ಅವರು, ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವರಾದ ಅಮಿತ್ ಷಾ ಮತ್ತು ಸ್ಮೃತಿ ಇರಾನ್ ಅವರಿಂದ ತೆರವಾದ ರಾಜ್ಯಸಭಾ ಸ್ಥಾನಗಳಿಗೆ ಏಕಕಾಲದಲ್ಲಿ ಉಪಚುನಾವಣೆ ನಡೆಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು.
ಜೂನ್ 15 ರಂದು ಚುನಾವಣಾ ಆಯೋಗ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಗುಜರಾತ್ ನ ರಾಜ್ಯಸಭಾದ ಎರಡು ಸ್ಥಾನಗಳಿಗೆ ಪ್ರತ್ಯೇಕವಾಗಿ ಜುಲೈ 5ರಂದು ಚುನಾವಣೆ ನಡೆಸಲಾಗುವುದು ಎಂದು ಉಲ್ಲೇಖಿಸಿತ್ತು. ಈ ಬೆನ್ನಲ್ಲೇ ಸುಪ್ರೀಂ ಕೊಟ್ನಲ್ಲಿ ಮನವಿ ಸಲ್ಲಿಸಿದ ಕಾಂಗ್ರೆಸ್ ಮುಖಂಡ ಪರೇಶ್ಭಾಯ್ಧನಾನಿ, ಚುನಾವಣಾ ಆಯೋಗದ ಅಧಿಸೂಚನೆಯನ್ನು ಅಸಂವಿಧಾನಿಕ, ಕಾನೂನುಬಾಹಿರ ಎಂದು ಪರಿಗಣಿಸಿ ತಿರಸ್ಕರಿಸಬೇಕೆಂದು ಒತ್ತಾಯಿಸಿದ್ದರು. ಅಲ್ಲದೆ, ಈ ಆದೇಶವು ಸಂವಿಧಾನದ 14 ನೇ ವಿಧಿಯನ್ನು ಉಲ್ಲಂಘಿಸಿದೆ. ದೇಶಾದ್ಯಂತ ಖಾಲಿ ಇರುವ ಎಲ್ಲಾ ಸ್ಥಾನಗಳ ಚುನಾವಣೆ ಮತ್ತು ಉಪಚುನಾವಣೆಗಳು ಏಕಕಾಲದಲ್ಲಿ ನಡೆಯಬೇಕು ಎಂದು ಧನಾನಿ ಹೇಳಿದ್ದರು.
ಗುಜರಾತ್ನ ರಾಜ್ಯಸಭಾ ಸ್ಥಾನಗಳ ಮೇಲೆ ಏಕಕಾಲದಲ್ಲಿ ಉಪಚುನಾವಣೆ ನಡೆದರೆ, ಕಾಂಗ್ರೆಸ್ ಗೆಲ್ಲುವ ಸಾಧ್ಯತೆಯಿದೆ. ಒಂದು ವೇಳೆ ಪ್ರತ್ಯೇಕ ಉಪಚುನಾವಣೆಗಳು ನಡೆದರೆ, ಬಿಜೆಪಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎನ್ನಲಾಗಿದೆ.